ಸಹಾಯವಾಣಿ 112ನಲ್ಲಿ ಇನ್ನು ಬಹುಭಾಷೆ ಬಳಕೆ! ಬೆಂಗಳೂರು ನಗರ ಪೊಲೀಸರಿಂದ ಮಹತ್ವದ ಕ್ರಮ

Kannadaprabha News   | Kannada Prabha
Published : Jan 30, 2026, 10:11 AM IST
112

ಸಾರಾಂಶ

ಬೆಂಗಳೂರು ನಗರ ಪೊಲೀಸರು 'ನಮ್ಮ 112' ತುರ್ತು ಸಹಾಯವಾಣಿಯಲ್ಲಿ ಬಹುಭಾಷಾ ವೈಶಿಷ್ಟ್ಯವನ್ನು ಪರಿಚಯಿಸುತ್ತಿದ್ದಾರೆ. ಈ ಮೂಲಕ ಭಾಷೆಯ ಅಡೆತಡೆಗಳನ್ನು ನಿವಾರಿಸಿ, ನಾಗರಿಕರಿಗೆ ಉತ್ತಮ ಸೇವೆ ನೀಡುವುದು ಇದರ ಉದ್ದೇಶವಾಗಿದೆ.  

ಬೆಂಗಳೂರು: ನಾಗರಿಕ ಸೇವೆಗಳನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ನಗರ ಪೊಲೀಸರು ತುರ್ತು ಸಹಾಯವಾಣಿಯಾದ ನಮ್ಮ 112ರಲ್ಲಿ ಬಹುಭಾಷಾ ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದ್ದಾರೆ.

ಇದು ಭಾಷಾ ಅಡೆತಡೆಗಳನ್ನು ನಿವಾರಿಸಿ, ಪ್ರತಿಯೊಬ್ಬರು ತಮ್ಮ ಇಷ್ಟದ ಭಾಷೆಯಲ್ಲಿ ಸ್ಪಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಸಂವಹನ ನಡೆಸಲು ಈ ವ್ಯವಸ್ಥೆಯು ಸಹಕಾರಿಯಾಗಲಿದೆ. ನಗರ ಪೊಲೀಸರು 112ರಲ್ಲಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳೊಂದಿಗೆ ಏಕೀಕರಿಸುವ ಯೋಜನೆಯನ್ನು ಹೊಂದಿದ್ದಾರೆ. ಇದರ ಮೂಲಕ ತುರ್ತು ಕರೆಗಳನ್ನು ತಕ್ಷಣವೇ ಸಂಬಂಧಿತ ತಜ್ಞರು ಮತ್ತು ಸರಿಯಾದ ಸೇವಾ ಘಟಕಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಇದರಿಂದ ಸಮಯೋಚಿತ, ವೃತ್ತಿಪರ ಹಾಗೂ ಪರಿಣಾಮಕಾರಿ ನೆರವು ಸಿಗಲಿದೆ. ಇನ್ನೂ ಹಲವು ಹೊಸ ಯೋಜನೆಗಳೂ ಮುಂದಿನ ಹಂತದಲ್ಲಿದ್ದು, ಇವೆಲ್ಲದರ ಮೂಲ ಉದ್ದೇಶ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ, ಸ್ಪಂದನಶೀಲವಾಗಿಸುವುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5 ವರ್ಷದ ಪ್ರಯಾಣದ ಬಗ್ಗೆ ಮೆಲುಕು:

2022ರಿಂದ 2025ರವರೆಗಿನ ಈ ಪ್ರಯಾಣವು ಯೋಚಿತ, ಮಾನವ ಕೇಂದ್ರಿತ ಪ್ರಗತಿಗೆ ಬದ್ಧವಾಗಿರುವ ನಗರದ ಪ್ರತಿಬಿಂಬವಾಗಿದೆ. 2022 ರಲ್ಲಿ ನಿರ್ಭಯ ನಿಧಿಯ ಬೆಂಬಲದೊಂದಿಗೆ ಸೇಫ್‌ ಸಿಟಿ ಯೋಜನೆ ಪ್ರಾರಂಭವಾಯಿತು. ಆಗ ಒಟ್ಟು 2,49,945 ಕರೆಗಳನ್ನು ಸ್ವೀಕರಿಸಲಾಗಿತ್ತು. ಇದರಲ್ಲಿ 91,250 ಮಹಿಳೆಯರಿಂದ ಬಂದ ಕರೆಗಳಾಗಿದ್ದವು. ಆಗ ಸುಮಾರು 320 ವಾಹನಗಳ ಹೊಯ್ಸಳ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದ್ದವು. 2023 ರಲ್ಲಿ ಬಾಡಿ ವೋರ್ನ್‌ ಕ್ಯಾಮೆರಾಗಳನ್ನು ಪರಿಚಯಿಸಲಾಯಿತು. ಅಲ್ಲದೇ ಒಟ್ಟು 2,51,779 ಕರೆಗಳನ್ನು ಸ್ವೀಕರಿಸಲಾಗಿತ್ತು. ಇದರಲ್ಲಿ 98,550 ಮಹಿಳೆಯರಿಂದ ಬಂದ ಕರೆಗಳಾಗಿದ್ದವು.

2024ರಿಂದ ಎಸ್‌ಎಂಎಸ್‌ ಟ್ರ್ಯಾಕಿಂಗ್‌ ಲಿಂಕ್‌ಗಳ ಸೇವೆ

2024 ರ ವೇಳೆಗೆ ಎಸ್‌ಎಂಎಸ್‌ ಟ್ರ್ಯಾಕಿಂಗ್‌ ಲಿಂಕ್‌ಗಳ ಸೇವೆಯನ್ನು ಒದಗಿಸಲಾಯಿತು. ಇದರ ಮೂಲಕ ಹೊಯ್ಸಳ ವಾಹನದ ನೈಜ ಸಮಯವನ್ನು ವೀಕ್ಷಿಸಬಹುದಾಗಿತ್ತು. 2024 ರಲ್ಲಿ ಒಟ್ಟು 4,43,918 ಕರೆಗಳು ಬಂದಿದ್ದವು. ಇದರಲ್ಲಿ 1,02,780 ಕರೆಗಳು ಮಹಿಳೆಯರಿಂದ ಬಂದಿತ್ತು. ಈ ಅವಧಿಯಲ್ಲಿ ಸೇಫ್ಟಿ ಐಲ್ಯಾಂಡ್‌ಗಳನ್ನು 112 ಗೆ ಸಂಪರ್ಕ ಕಲ್ಪಿಸಲಾಗಿತ್ತು. ಕೆಎಸ್‌ಪಿ ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಸೇಫ್‌ ಕನೆಕ್ಟ್‌ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಾಯಿತು. ನಂಬರ್‌ ಮಾಸ್ಕಿಂಗ್‌ ಅಂದರೆ ಕರೆಮಾಡಿದವರ ವಿವರ ಮರೆ ಮಾಚುವ ವ್ಯವಸ್ಥೆ ಪರಿಚಯಿಸಲಾಯಿತು.

112 ಗೆ 2025 ರಲ್ಲಿ 522742 ಕರೆಗಳು ಬಂದಿದ್ದು, ಇದರಲ್ಲಿ 116800 ಕರೆಗಳು ಮಹಿಳೆಯರಿಂದ ಬಂದ ಕರೆಗಳಾಗಿದ್ದವು. 2024 ಕ್ಕೆ ಹೋಲಿಕೆ ಮಾಡಿ ನೋಡಿದರೆ 77 ಸಾವಿರ ಕರೆಗಳು ಹೆಚ್ಚಾಗಿದೆ. ಇದರಿಂದಾಗಿ ಹರ್ಟ್ (ನೋವುಂಟು ಮಾಡುವ) ಪ್ರಕರಣಗಳಲ್ಲಿ ಶೇ.9 ರಷ್ಟು ಇಳಿಕೆ ಕಂಡುಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು ಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನ್ ಚಿತ್ರಗಳಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ: ಪ್ರಕಾಶ್‌ ರಾಜ್‌ ಆಕ್ರೋಶ
ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ನೀಗಲು ಪಾರ್ಕಿಂಗ್‌ ಶುಲ್ಕ ಹೆಚ್ಚಳಕ್ಕೆ ಆರ್ಥಿಕ ಸಮೀಕ್ಷೆ ಪ್ರಸ್ತಾಪ!