
ಬೆಂಗಳೂರು (ಜ.29): ತನ್ನ ಸ್ಟಾರ್ಟ್‌ಅಪ್ ಕಲ್ಚರ್, ರಿಮೋಟ್ ವರ್ಕಿಂಗ್ ಹಾಗೂ ಕಾಫಿ ಟೇಬಲ್ ಮೀಟಿಂಗ್‌ನಿಂದ ಜಗತ್ತಿನಲ್ಲೇ ಹೆಸರುವಾಸಿಯಾಗಿರುವ ಸಿಲಿಕಾನ್ ಸಿಟಿ ಬೆಂಗಳೂರು ಇತ್ತೀಚೆಗೆ ಬೇರೆ ಕಾರಣಕ್ಕಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ. ಬೆಂಗಳೂರಿನ ಕೆಫೆಯೊಂದರ ಚಿಕ್ಕ ನೋಟಿಸ್,ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಾರೀ ಚರ್ಚೆ ನಡೆಯುತ್ತಿದೆ. ಅಲ್ಲಿನ ನೋಟಿಸ್‌ನಲ್ಲಿ ಬೆಂಗಳೂರಿನ ಕೆಫೆಯಲ್ಲಿ ಆಗುವ ದೀರ್ಘಕಾಲದ ಮೀಟಿಂಗ್‌ನಿಂದ ಆಗುವ ಸಮಸ್ಯೆಗಳ ಆಳವನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ನಗರದ ಕೆಫೆ ಸಂಸ್ಕೃತಿಯನ್ನು ಕಂಡವರಿಗೆ ಈ ನೋಟಿಸ್‌ನ ಮಹತ್ವದ ಅರ್ಥವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಬೆಂಗಳೂರು ಮೂಲದ ವ್ಯಕ್ತಿ ಶೋಭಿತ್ ಬಕ್ಲಿವಾಲ್ ಎನ್ನುವವರು ಬೆಂಗಳೂರು ಕೆಫೆಯೊಂದು ಅಂಟಿಸಿದ್ದ ನೋಟಿಸ್‌ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಳಿಕ ಈ ಚರ್ಚೆ ಆರಂಭವಾಗಿದೆ. ಕೆಫೆಯ ಗೋಡೆಯ ಮೇಲೆ ಈ ನೋಟಿಸ್‌ಅನ್ನು ಅಂಟಿಸಲಾಗಿದ್ದು, ಅದರಲ್ಲಿ ಕೆಫೆಯಲ್ಲಿ ಯಾವುದೇ ಕಾರಣಕ್ಕೂ ದೀರ್ಘ ಮೀಟಿಂಗ್ ಅನುಮತಿಸಲಾಗುವುದಿಲ್ಲ ಎಂದಿದೆ. ಹಾಗೇನಾದರೂ ಒಂದು ಗಂಟೆಗೂ ಅಧಿಕ ಕಾಲ ಟೇಬಲ್‌ನಲ್ಲಿ ಮೀಟಿಂಗ್‌ನಲ್ಲಿ ಭಾಗಿಯಾದಲ್ಲಿ ಪ್ರತಿ ಗಂಟೆಗೆ 1 ಸಾವಿರ ರೂಪಾಯಿ ಚಾರ್ಜ್ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಬೆಂಗಳೂರಿನ ಕೆಫೆಯಲ್ಲಿ ನೋಟಿಸ್ ನೋಡಿದ್ದೇನೆ ಎಂದು ವಿವರಿಸುತ್ತಾ, ಬಕ್ಲಿವಾಲ್ ಸರಳ ಶೀರ್ಷಿಕೆಯೊಂದಿಗೆ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಅವರ ಶೀರ್ಷಿಕೆ ಚಿಕ್ಕದಾಗಿದ್ದರೂ, ಪೋಸ್ಟ್ ತಕ್ಷಣವೇ ಆನ್‌ಲೈನ್‌ನಲ್ಲಿ ಗಮನ ಸೆಳೆಯಿತು. ಕಡಿಮೆ ಸಮಯದಲ್ಲಿ, ಇದು 30,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತು ಮತ್ತು ಯೂಸರ್‌ಗಳಿಂದ ವಿವಿಧ ಪ್ರತಿಕ್ರಿಯೆಗಳನ್ನು ಗಳಿಸಿತು.
ಬೆಂಗಳೂರು ತನ್ನ ಸ್ಟಾರ್ಟ್‌ಅಪ್ ಸಂಸ್ಕೃತಿ, ರಿಮೋಟ್ ವರ್ಕಿಂಗ್ ಮತ್ತು ಲಾಂಗ್ ಕಾಫಿ ಅವರ್ಸ್‌ಗಳಿಗೆ ಹೆಸರುವಾಸಿಯಾಗಿದೆ. ನಗರದ ಅನೇಕ ಕೆಫೆಗಳು ಮತ್ತು ತಿನಿಸುಗಳು ಸಾಮಾನ್ಯವಾಗಿ ಅನೌಪಚಾರಿಕ ಸಭೆ ಸ್ಥಳಗಳಾಗುತ್ತವೆ. ಆದರೆ ಇದು ಸಣ್ಣ ವ್ಯಾಪಾರ ಮಾಲೀಕರಿಗೆ ತೊಂದರೆಯಾಗಬಹುದು. ಕಾರ್ಯನಿರತ ಸಮಯದಲ್ಲಿ, ಟೇಬಲ್‌ಗಳು ಗಂಟೆಗಟ್ಟಲೆ ತುಂಬಿರುತ್ತವೆ ಮತ್ತು ಆರ್ಡರ್‌ಗಳು ನಿಧಾನವಾಗುತ್ತವೆ ಎನ್ನುವ ವ್ಯವಹಾರ ದೃಷ್ಟಿಕೋನ ಇದರಲ್ಲಿದೆ.
ಕಾಮೆಂಟ್ ಮಾಡಿರುವ ಹಲವರು ಕೆಫೆ ಆಪರೇಟರ್‌ಗಳ ಕುರಿತಾಗಿ ಸಿಂಪತಿ ವ್ಯಕ್ತಪಡಿಸಿದ್ದಾರೆ. ಕೆಲವು ಕೆಫೆಗಳಲ್ಲಿ ಗ್ರೂಪ್‌ಗಳು ದೀರ್ಘಕಾಲ ಮೀಟಿಂಗ್‌ನಲ್ಲಿ ಭಾಗಿಯಾಗಿರುತ್ತವೆ. ಇವರುಗಳು ಅಲ್ಲಿ ಕೆಲವೊಮ್ಮೆ ಏನನ್ನೂ ಆರ್ಡರ್ ಮಾಡೋದಿಲ್ಲ, ಆರ್ಡರ್ ಮಾಡಿದರೂ ಅದರ ಮೌಲ್ಯ ತೀರಾ ಕಡಿಮೆ ಆಗಿರುತ್ತದೆ ಎಂದಿದ್ದಾರೆ.
ಒಬ್ಬ ಕಾಮೆಂಟರ್ "ಇದನ್ನು ಅನೇಕ ಹೋಟೆಲ್ ಮತ್ತು ಕೆಫೆಗಳಲ್ಲಿ ನೋಡಿದ್ದೇವೆ" ಎಂದು ಬರೆದಿದ್ದಾರೆ, ಗ್ರಾಹಕರು "ಕುಳಿತುಕೊಳ್ಳುತ್ತಾರೆ, ಗಂಟೆಗಟ್ಟಲೆ ಹರಟೆ ಹೊಡೆಯುತ್ತಾರೆ ಮತ್ತು ಯಾವುದೇ ಪಾನೀಯಗಳು ಅಥವಾ ಆಹಾರವನ್ನು ಖರೀದಿಸುವುದಿಲ್ಲ" ಎಂದು ಎಂದಿದ್ದು, ಈ ಬಗ್ಗೆ ಕೆಫೆ ಮಾಲೀಕರಿಗೆ ಇರುವ ವಿಷಾದ ಕಾಣುತ್ತದೆ ಎಂದಿದ್ದಾರೆ.