
ನೆಲಮಂಗಲ: ಬೆಂಗಳೂರಿಗರೇ ಎಚ್ಚರ... ಎಚ್ಚರ...! ಹೊರವಲಯದ ನೆಲಮಂಗಲ ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಗಡಾರಿ (ಹಾರೆ) ಹಿಡಿದು ಒಬ್ಬಂಟಿಯಾಗಿ ಬರುವ ಕಳ್ಳನೊಬ್ಬ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದಾನೆ. ಈ ಘಟನೆ ಸ್ಥಳೀಯ ವ್ಯಾಪಾರಿಗಳು ಮತ್ತು ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನೆಲಮಂಗಲ ನಗರದ ವೀವರ್ಸ್ ಕಾಲೋನಿಯಲ್ಲಿರುವ ತರಕಾರಿ ಅಂಗಡಿಯೊಂದರ ರೊಲಿಂಗ್ ಶಟರ್ ಮುರಿದು ಕಳ್ಳತನ ನಡೆಸಲಾಗಿದೆ. ಕಳ್ಳನು ಗಡಾರಿಯೊಂದಿಗೆ ಸ್ಥಳಕ್ಕೆ ಬಂದು ಕ್ಷಣಾರ್ಧದಲ್ಲೇ ಶಟರ್ ಮತ್ತು ಬಾಗಿಲುಗಳನ್ನು ಮೀಟಿ ಒಳನುಗ್ಗಿ ಕೈಚಳಕ ತೋರಿಸಿದ್ದಾನೆ.
ಕಣ್ಣಿಗೆ ಕಾಣುವ ಅಂಗಡಿಗಳನ್ನೇ ಈತ ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದು, ಕೃತ್ಯದ ಬಳಿಕ ಯಾರಿಗೂ ಸಿಗದಂತೆ ಪರಾರಿಯಾಗುತ್ತಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾತ್ರಿ ಅಥವಾ ನಿರ್ಜನ ಅವಧಿಯನ್ನು ಬಳಸಿಕೊಂಡು ಒಬ್ಬನೇ ಬಂದು ಇಂತಹ ಕೃತ್ಯಗಳನ್ನು ಎಸಗುತ್ತಿರುವುದು ಅಂಗಡಿ ಮಾಲೀಕರ ನಿದ್ದೆಗೆಡಿಸಿದೆ.
ಕಳ್ಳತನದ ದೃಶ್ಯಗಳು ಹಾಗೂ ಆರೋಪಿಯ ಚಲನವಲನಗಳು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ.
ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಡಾರಿ ಗ್ಯಾಂಗ್ನ ಈ ಕಳ್ಳನನ್ನು ಶೀಘ್ರವೇ ಬಂಧಿಸಿ, ನಗರದಲ್ಲಿ ನಡೆಯುತ್ತಿರುವ ಕಳ್ಳತನಗಳಿಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯ ನಿವಾಸಿಗಳು ಮತ್ತು ವರ್ತಕರು ಒತ್ತಾಯಿಸಿದ್ದಾರೆ.
ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ತಪಾಸಣೆ ಕೇಂದ್ರದ ಶೌಚಾಲಯದಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿ ಅದನ್ನು ಕಾಸರಗೋಡು ಮೂಲದವರಿಗೆ ಕಳ್ಳಸಾಗಣೆ ಮಾಡುತ್ತಿದ್ದ ಮೂವರು ಹೊರಗುತ್ತಿಗೆ ನೌಕರರನ್ನು ಮಂಗಳೂರು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಬಂಧಿಸಿದೆ. ಬಂಧಿತರಿಂದ ₹2 ಕೋಟಿ ಮೌಲ್ಯದ 1.65 ಕೇಜಿ ಚಿನ್ನದ ಪೇಸ್ಟ್, ₹73 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಯುಎಇ ದೇಶದಿಂದ ಸಾಗಣೆ ಮಾಡುತ್ತಿದ್ದ ಚಿನ್ನವನ್ನು ಮಂಗಳೂರು ಏರ್ಪೋರ್ಟ್ನ ವಲಸೆ ತಪಾಸಣೆ ಕೇಂದ್ರದಲ್ಲಿ ಅಡಗಿಸಿಡುತ್ತಿದ್ದರು. ಈ ಚಿನ್ನವನ್ನು ಹೊರಗುತ್ತಿಗೆ ಸಿಬ್ಬಂದಿ ಸಂಗ್ರಹಿಸಿ, ಅದನ್ನು ಕಾಸರಗೋಡು ಮೂಲದವರಿಗೆ ಸಾಗಿಸುತ್ತಿದ್ದ. ಈ ಜಾಲವನ್ನು ಅರಿತ ಡಿಆರ್ಐ, ಮಂಗಳವಾರ ಬೆಳಗ್ಗೆ ಸಿಬ್ಬಂದಿ ಚಿನ್ನ ಸಂಗ್ರಹಿಸುತ್ತಿದ್ದಾಗ ವಶಕ್ಕೆ ಪಡೆದು ಆತನಿಂದ 2 ಚಿನ್ನದ ಪೇಸ್ಟ್ ವಶಪಡಿಸಿಕೊಂಡಿದ್ದಾರೆ.