
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಜೀವನಾಡಿಯಾಗಿರುವ ‘ನಮ್ಮ ಮೆಟ್ರೋ’ ಜಾಲವು ಮತ್ತೊಂದು ಮಹತ್ವದ ವಿಸ್ತರಣೆಗೆ ಸಜ್ಜಾಗಿದೆ. ನಗರದ ಬಹುನಿರೀಕ್ಷಿತ ಗುಲಾಬಿ ಮಾರ್ಗ ಸಾರ್ವಜನಿಕರ ಸೇವೆಗೆ ಮುಕ್ತವಾದ ಬೆನ್ನಲ್ಲೇ, ಇದೀಗ ಹೊರ ವರ್ತುಲ ರಸ್ತೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ‘ಬ್ಲೂ ಲೈನ್’ (ನೀಲಿ ಮಾರ್ಗ) ನಲ್ಲೂ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಇದರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ನವೆಂಬರ್ 10ರಿಂದ ಬ್ಲೂ ಲೈನ್‌ನಲ್ಲಿ ಪ್ರಾಯೋಗಿಕ ಸಂಚಾರವನ್ನು ಪ್ರಾರಂಭಿಸಿದೆ. ಪರೀಕ್ಷಾರ್ಥ ರೈಲು ಬೈಯಪ್ಪನಹಳ್ಳಿ ಡಿಪೋದಿಂದ ಹೊರಟು ಕೆ.ಆರ್. ಪುರಂ ಮಾರ್ಗವಾಗಿ ದೊಡ್ಡನೆಕುಂಡಿ ನಿಲ್ದಾಣದವರೆಗೆ ಸುಮಾರು 6 ಕಿ.ಮೀ. ದೂರ ಮಾತ್ರ ಪರಿಕ್ಷಾರ್ಥ ಸಂಚಾರ ನಡೆಸುತ್ತಿದೆ. ಮುಂಬರುವ ದಿನಗಳಲ್ಲಿ ಈ ಪ್ರಾಯೋಗಿಕ ಸಂಚಾರವನ್ನು ಕೆ.ಆರ್. ಪುರಂ ಮೂಲಕ ಮಾರತ್ತಹಳ್ಳಿಯವರೆಗೆ ವಿಸ್ತರಿಸಲು ನಿಗಮ ಯೋಜಿಸಿದೆ. ಸದ್ಯ 4 ಸ್ಟೇಷನ್‌ನಲ್ಲಿ ಮಾತ್ರ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ.
ಆದರೆ, ಈ ಮಾರ್ಗವು ಸಾರ್ವಜನಿಕರಿಗೆ ಮುಕ್ತವಾಗುವ ಮೊದಲು ಇನ್ನೂ ಕೆಲವು ತಾಂತ್ರಿಕ ದೋಷಗಳು, ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ. ಸುಮಾರು 2 ಕಿ.ಮೀ. ಉದ್ದದ ಹಳಿ ಅಳವಡಿಕೆ, ಕೆಲವು ನಿಲ್ದಾಣಗಳ ಅಂತಿಮ ಹಂತದ ಕಾಮಗಾರಿ , ಅತ್ಯಂತ ಪ್ರಮುಖವಾದ ಸಿಗ್ನಲಿಂಗ್ ಕಾಮಗಾರಿ ಪ್ರಕ್ರಿಯೆ ಬಾಕಿಯಿದೆ.
ದಕ್ಷಿಣ ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಒಟ್ಟು 58.19 ಕಿ.ಮೀ. ಉದ್ದದ ಈ ಮೆಟ್ರೋ ಜಾಲವು ಒಟ್ಟು 29 ನಿಲ್ದಾಣಗಳೊಂದಿಗೆ ಎರಡು ಹಂತಗಳಲ್ಲಿ ನಿರ್ಮಾಣವಾಗುತ್ತಿದೆ.
ಹಂತ 2A: ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕೆ.ಆರ್. ಪುರಂ ನಡುವಿನ 19.75 ಕಿ.ಮೀ. ಎತ್ತರಿಸಿದ ಮಾರ್ಗ. ಇದರಲ್ಲಿ ಒಟ್ಟು 13 ನಿಲ್ದಾಣಗಳು. ಐಟಿ ಕಂಪನಿಗಳ ತಾಣವಾದ ಓಟರ್ ರಿಂಗ್ ರೋಡ್ ನ ಟ್ರಾಫಿಕ್ ದಟ್ಟಣೆ ತಗ್ಗಿಸಲು ಇದು ಸಹಾಯಕವಾಗಲಿದೆ. ಇಲ್ಲಿ ಬರುವ 13 ಸ್ಟೇಷನ್ ಈ ಕೆಳಗಿನಂತಿದೆ. ಈ ಲೈನ್‌ನಲ್ಲೇ ಸದ್ಯಕ್ಕೆ ಪ್ರಾಯೋಗಿಕ ಸಂಚಾರ ನಡೆಯುತ್ತಿರುವುದು.
ಹಂತ 2B: ಕೆ.ಆರ್. ಪುರಂನಿಂದ ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 38.44 ಕಿ.ಮೀ. ಮಾರ್ಗ. ಇದು ಒಟ್ಟು 16 ನಿಲ್ದಾಣಗಳನ್ನು ಹೊಂದಿದೆ.
ಸದ್ಯದ ಯೋಜನೆಯ ಗುರಿಯ ಪ್ರಕಾರ, ಸೆಂಟ್ರಲ್ ಸಿಲ್ಕ್ ಬೋರ್ಡ್–ಕೆ.ಆರ್. ಪುರಂ ವಿಭಾಗವನ್ನು 2027ರ ಮಧ್ಯಭಾಗದಲ್ಲಿ ಮತ್ತು ಸಂಪೂರ್ಣ ವಿಮಾನ ನಿಲ್ದಾಣ ಮಾರ್ಗವನ್ನು ಮಾರ್ಚ್ 2028ರೊಳಗೆ ಸಾರ್ವಜನಿಕರಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಗುರಿ ಹೊಂದಿದೆ.