ಮೆಟ್ರೋ ದರ ಏರಿಕೆಯಿಂದ ದೂರ ಸರಿದಿದ್ದ ಪ್ರಯಾಣಿಕರು ಮತ್ತೆ ಮೆಟ್ರೋಗೆ ಮರಳಿದ್ದಾರೆ. ಅಂಬೇಡ್ಕರ್ ಜಯಂತಿ ರಜೆಯಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಬಿಎಂಆರ್‌ಸಿಎಲ್ 4 ಹೆಚ್ಚುವರಿ ರೈಲು ಸೇವೆ ಒದಗಿಸಿದೆ.
ಬೆಂಗಳೂರು (ಏ.14): ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೇ.100ರಷ್ಟು ಹೆಚ್ಚಳ ಮಾಡಿದ್ದರಿಂದ ಬಿಎಂಆರ್‌ಸಿಎಲ್ ವಿರುದ್ಧ ಆಕ್ರೋಶಗೊಂಡು ಮೆಟ್ರೋ ರೈಲು ಪ್ರಯಾಣದಿಂದ ದೂರ ಉಳಿದಿದ್ದ ಜನರು ಇದೀಗ ಪುನಃ ಹತ್ತಿರವಾಗಿದ್ದಾರೆ. ಸೋಮವಾರ (ಏ.14) ಅಂಬೇಡ್ಕರ್ ಜಯಂತಿ ಅಂಗವಾಗಿ ಸಾರ್ವತ್ರಿಕ ರಜಾದಿನ ಆಗಿದ್ದರೂ, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ 4 ಹೆಚ್ಚುವರಿ ಮೆಟ್ರೋ ರೈಲು ಸೇವೆಯನ್ನು ಒದಗಿಸಲಾಗಿದೆ.
ನಮ್ಮ ಮೆಟ್ರೋ ಬೆಲೆ ಏರಿಕೆಯಿಂದ ಬೇಸತ್ತಿದ್ದ ಪ್ರಯಾಣಿಕರು ಮೆಟ್ರೋ ರೈಲು ಸಂಚಾರದಿಂದ ಕೆಲವು ದಿನಗಳ ಕಾಲ ದೂರ ಉಳಿದಿದ್ದರು. ಆದರೆ, ಇದೀಗ ಬೆಲೆ ಹೆಚ್ಚಾದರೂ ಅತಿಯಾದ ಟ್ರಾಫಿಕ್‌ನಿಂದಾಗಿ ಸಮಯ ಉಳಿತಾಯಕ್ಕಾಗಿ ಮೆಟ್ರೋ ಪ್ರಯಾಣದ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಆದ್ದರಿಂದ ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಸಾರ್ವತ್ರಿಕ ರಜಾ ದಿನವಾಗಿದ್ದರೂ 4 ಹೆಚ್ಚುವರಿ ಮೆಟ್ರೋ ರೈಲು ಸೇವೆಯನ್ನು ಒದಗಿಸಿದೆ. ಈ ಮೂಲಕ ಮೆಟ್ರೋ ಪ್ರಯಾಣಿಕರ ವಿಶ್ವಾಸವನ್ನು ಮತ್ತೆ ಗಿಟ್ಟಿಸಿಕೊಳ್ಳುವತ್ತ ಬಿಎಂಆರ್‌ಸಿಎಲ್ ತನ್ನ ಹೆಜ್ಜೆಯನ್ನಿಟ್ಟಿದೆ.
ಇದನ್ನೂ ಓದಿ: ಮತ್ತೆ ಮೆಟ್ರೋದತ್ತ ಮುಖ ಮಾಡಿದ ಜನ
ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿರುವ ಮೆಟ್ರೋ ಸಂಸ್ಥೆಯು, 'ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ (ಮೆಜೆಸ್ಟಿಕ್) ಜನಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ, ಇಂದು ಸಾರ್ವತ್ರಿಕ ರಜೆ ಇರುವುದರಿಂದ, ಸಾರ್ವಜನಿಕ ಅನುಕೂಲವನ್ನು ಹೆಚ್ಚಿಸಲು ಬಿಎಂಆರ್‌ಸಿಎಲ್ ಬೈಯಪಹನಹಳ್ಳಿಯಿಂದ ನಾಡಪ್ರಭು ಕೆಂಪೇಗೌಡ ನಿಲ್ದಾಣಕ್ಕೆ (ಮೆಜೆಸ್ಟಿಕ್) ನಾಲ್ಕು ಹೆಚ್ಚುವರಿ ರೈಲುಗಳನ್ನು ಓಡಿಸಿದೆ. ಹೆಚ್ಚುವರಿಯಾಗಿ, ಮೆಜೆಸ್ಟಿಕ್‌ರೈಲಿನ ಸಂಚಾರವನ್ನು ಕಡಿಮೆ ಮಾಡಿ ಐಟಿಪಿಎಲ್‌ಗೆ ಹಿಂತಿರುಗಿಸಲಾಗಿದೆ. ಇದರೊಂದಿಗೆ, ಮೆಜೆಸ್ಟಿಕ್, ಗರುಡಾಚಾರ್‌ಪಾಳ್ಯ ಮತ್ತು ವೈಟ್‌ಫೀಲ್ಡ್‌ನಿಂದ ಒಟ್ಟು 7 ಹೊಸ ಟ್ರಿಪ್‌ಗಳು ಪ್ರಾರಂಭವಾಗುತ್ತವೆ. ಅಲ್ಲದೆ, ಇಂದು ಸಂಜೆ ಐಟಿಪಿಎಲ್ ನಿಂದ ರೈಲುಗಳು ಎಂದಿನಂತೆ 5 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ.
ಸಹಜ ಸ್ಥಿತಿಗೆ ಬಂದೇ ಬಿಡ್ತು ಮೆಟ್ರೋ ಪ್ರಯಾಣಿಕರ ಸಂಖ್ಯೆ:
ಕಳೆದ ಫೆ. 9 ರಿಂದ ಶೇ 45 ರಷ್ಟು ಪ್ರಯಾಣ ದರ ಏರಿಸುವುದಾಗಿ ತಿಳಿಸಿದ್ದ ಬಿಎಂಆರ್‌ಸಿಎಲ್ ಕೆಲವೆಡೆ ಶೇ.80ರಷ್ಟು ದರ ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಶಾಕ್ ನೀಡಿತ್ತು. ಇದರಿಂದಾಗಿ ಒಂದೂವರೆ ತಿಂಗಳು ಪ್ರಯಾಣಿಕರು ಮೆಟ್ರೋದಿಂದ ದೂರ ಹೋಗಿದ್ದರು. ಮೆಟ್ರೋ ಪ್ರಯಾಣ ದರ ಏರಿಕೆ ಬಳಿಕ 1.50 ಲಕ್ಷ ಪ್ರಯಾಣಿಕರು ಕಡಿಮೆಯಾಗಿದ್ದರು. ಆದರೆ ಇದೀಗ ಮೆಟ್ರೋ ಪ್ರಯಾಣಿಕರ ಸಂಖ್ಯೆ ಸಹಜಸ್ಥಿತಿಯತ್ತ ಬಂದಿದೆ. ಮೆಟ್ರೋ ಪ್ರಯಾಣ ದರ ಏರಿಕೆ ಮುನ್ನ ನಿತ್ಯ ಪ್ರಯಾಣಿಕರ ಸಂಖ್ಯೆ 8 ಲಕ್ಷ ದಿಂದ 8.5 ಲಕ್ಷ ಇತ್ತು. ಪ್ರಯಾಣ ದರ ಏರಿಕೆ ಬಳಿಕ ಪ್ರಯಾಣಿಕರ ಸಂಖ್ಯೆ ಕೆಲ ದಿನಗಳ ಕಾಲ 7 ಲಕ್ಷಕ್ಕೆ ಇಳಿಕೆ ಕಂಡಿತ್ತು.
ಇದನ್ನೂ ಓದಿ: Bengaluru: ಮೆಟ್ರೋ ನಿಲ್ದಾಣದಲ್ಲೇ ಯುವ ಜೋಡಿಯ ರೋಮ್ಯಾನ್ಸ್, ಇದೆಂಥಾ ಅಸಹ್ಯ ಎಂದ ನೆಟ್ಟಿಗರು!
ಆದರೆ, ಏಪ್ರಿಲ್ ಮೊದಲ ವಾರದಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಪುನಃ ಏರಿಕೆಯಾಗಿದೆ. ಇದೀಗ ನಿತ್ಯ 8 ಲಕ್ಷ ದಿಂದ 8.25 ಲಕ್ಷದವರಿಗೆ ನಿತ್ಯ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಮೆಟ್ರೋ ಪ್ರಯಾಣಿರ ಸಂಖ್ಯೆ ತೀವ್ರ ಕುಸಿತವಾಗಿತ್ತು. ಆದರೆ, ಇದೀಗ ಮತ್ತೆ ಎಂದಿನಂತೆ ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ಪ್ರಯಾಣಿಕರು ಓಡಾಟ ಶುರು ಮಾಡಿದ್ದಾರೆ. ಹಾಗಾಗಿ, ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಸಹಜಸ್ಥಿತಿಗೆ ಬಂದಿದೆ. ಪ್ರಯಾಣಿಕರ ಸಂಖ್ಯೆ ಇಳಿಕೆಯಾದಾಗ ತೀವ್ರ ಆತಂಕಗೊಂಡಿದ್ದ ಬಿಎಂಆರ್‌ಸಿಎಲ್ ಇದೀಗ ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ನಿಟ್ಟುಸಿರು ಬಿಡುವಂತಾಗಿದೆ