ನಮ್ಮ ಮೆಟ್ರೋ ‘ಆರೆಂಜ್ ಲೈನ್’ಗೆ ಕೇಂದ್ರದ ಬ್ರೇಕ್: ಡಬಲ್-ಡೆಕ್ಕರ್ ಸೌಲಭ್ಯ 11 ಕಿ.ಮೀಗೆ ಸೀಮಿತ?

Published : Aug 10, 2026, 04:45 PM IST
Namma Metro

ಸಾರಾಂಶ

ಪ್ರಧಾನಿ ಮೋದಿಯವರಿಂದ ಶಂಕುಸ್ಥಾಪನೆಗೊಂಡು ವರ್ಷವಾದರೂ, ಬೆಂಗಳೂರು ಮೆಟ್ರೋ 3ನೇ ಹಂತದ ‘ಆರೆಂಜ್ ಲೈನ್’ ಯೋಜನೆ ಕಾಮಗಾರಿ ಆರಂಭವಾಗಿಲ್ಲ. ಪೂರ್ಣ ಪ್ರಮಾಣದ ‘ಡಬಲ್-ಡೆಕ್ಕರ್’ ನಿರ್ಮಾಣದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಬೆಂಗಳೂರು (ಆ.10): ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಬೆಂಗಳೂರು ಮೆಟ್ರೋ 3ನೇ ಹಂತದ ‘ಆರೆಂಜ್ ಲೈನ್’ (Orange Line) ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ವರ್ಷ ಕಳೆದರೂ, ಯೋಜನೆ ಮಾತ್ರ ಇನ್ನೂ ಕಾಮಗಾರಿ ಮಟ್ಟಕ್‌ಕೆ ಇಳಿದಿಲ್ಲ. ಪೂರ್ಣ ಪ್ರಮಾಣದ ‘ಡಬಲ್-ಡೆಕ್ಕರ್’ (Double-Decker) ರಸ್ತೆ ಮೇಲ್ಸೇತುವೆ ನಿರ್ಮಾಣದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಈಗಾಗಲೇ ಆಹ್ವಾನಿಸಲಾಗಿರುವ 3 ಪ್ರಮುಖ ಸಿವಿಲ್ ಕಾಮಗಾರಿ ಟೆಂಡರ್‌ಗಳನ್ನು ರದ್ದುಗೊಳಿಸಿ ಮರು ಟೆಂಡರ್ ಕರೆಯುವ ಪರಿಸ್ಥಿತಿ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಎದುರಾಗಿದೆ.

ಹೊರ ವರ್ತುಲ ರಸ್ತೆ ಪಶ್ಚಿಮ (Outer Ring Road West) ಹಾಗೂ ಮಾಗಡಿ ರಸ್ತೆಯುದ್ದಕ್ಕೂ ಮೊದಲ ಹಂತದಲ್ಲಿ ವಾಹನ ಸಂಚಾರಕ್ಕೆ ಫ್ಲೈಓವರ್ ಹಾಗೂ ಅದರ ಮೇಲೆ ಮೆಟ್ರೋ ಮಾರ್ಗ ನಿರ್ಮಿಸುವ ಇಡೀ 44.65 ಕಿ.ಮೀ. ಉದ್ದದ ‘ಡಬಲ್-ಡೆಕ್ಕರ್’ ಯೋಜನೆಗೆ ತಾಂತ್ರಿಕ ಹಾಗೂ ಆರ್ಥಿಕ ಮುಸುಕು ಕವಿದಿದೆ. ಈ ಯೋಜನೆಯ ಆರ್ಥಿಕ ಲಾಭದಾಯಕತೆ (Economic Viability) ಮತ್ತು ಮೆಟ್ರೋ ಪ್ರಯಾಣಿಕರ ಸಂಖ್ಯೆಯ ಮೇಲಾಗುವ ಪರಿಣಾಮಗಳ ಕುರಿತು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ (MoHUA) ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆ 'ರೈಟ್ಸ್' (RITES) ಸಿದ್ಧಪಡಿಸಿರುವ ಅಂತಿಮ ವರದಿಯಲ್ಲಿ, ಡಬಲ್-ಡೆಕ್ಕರ್ ಒಳಗೊಂಡ ಮೆಟ್ರೋ ಹಂತ-3 ಯೋಜನೆಯ 'ಆರ್ಥಿಕ ಆಂತರಿಕ ಆದಾಯ ದರ' (EIRR) ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ನಿಗದಿಪಡಿಸಿರುವ ಶೇಕಡಾ 14 ರ ಮಾನದಂಡಕ್ಕಿಂತ ತೀರ ಕಡಿಮೆಯಿದೆ ಎಂದು ಉಲ್ಲೇಖಿಸಲಾಗಿದೆ. ರೈಟ್ಸ್ ಸಂಸ್ಥೆಯು ತನ್ನ ಕರಡು ವರದಿಯಲ್ಲಿ ಹೆಚ್ಚಿನ ಐಆರ್‌ಆರ್ ತೋರಿಸಿತ್ತಾದರೂ, ಅಂತಿಮ ವರದಿಯಲ್ಲಿ ಇದನ್ನು ಇಳಿಕೆ ಮಾಡಿದೆ.

ಐಐಎಸ್‌ಸಿ (IISc) ವರದಿಯಲ್ಲಿ ಆತಂಕಕಾರಿ ವಿಷಯ ಬಹಿರಂಗ

ಭಾರತೀಯ ವಿಜ್ಞಾನ ಸಂಸ್ಥೆ (IISc) ನಡೆಸಿರುವ ಅಧ್ಯಯನವೂ ಈ ಪ್ರಸ್ತಾವನೆಯ ಲೋಪದೋಷಗಳನ್ನು ಎತ್ತಿ ತೋರಿಸಿದೆ. ಮೆಟ್ರೋ ಮಾರ್ಗದ ಜೊತೆಯಲ್ಲೇ ಫ್ಲೈಓವರ್ ನಿರ್ಮಿಸುವುದರಿಂದ ಜನರು ಖಾಸಗಿ ವಾಹನಗಳನ್ನೇ ಬಳಸಲು ಉತ್ತೇಜನ ಸಿಕ್ಕಂತಾಗುತ್ತದೆ. ಇದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿ, ವಾಯು ಮಾಲಿನ್ಯ ಮತ್ತು ಕಾರ್ಬನ್ ಹೊರಸೂಸುವಿಕೆ ಹೆಚ್ಚಾಗಲಿದೆ ಎಂದು ಐಐಎಸ್‌ಸಿ ಎಚ್ಚರಿಸಿದೆ.

ಅಲ್ಲದೆ, ಪೂರ್ಣ ಪ್ರಮಾಣದ ಡಬಲ್-ಡೆಕ್ಕರ್ ನಿರ್ಮಾಣದಿಂದ ಯೋಜನೆ ವೆಚ್ಚ ಹೆಚ್ಚುವರಿಯಾಗಿ ಬರೋಬ್ಬರಿ ₹2,864 ಕೋಟಿ ಏರಿಕೆಯಾಗಲಿದೆ. ಇದರಿಂದ ಬಿಎಂಆರ್‌ಸಿಎಲ್ ಹೂಡಿಕೆಯ ಆರ್ಥಿಕ ಆದಾಯ ದರ (EIRR) ಶೇ. 9.07 ಕ್ಕೆ ಕುಸಿಯಲಿದ್ದು, ರಸ್ತೆ ಅಭಿವೃದ್ಧಿ ಏಜೆನ್ಸಿಯ ಹೂಡಿಕೆಯನ್ನು ಸೇರಿಸಿದರೆ ಇದು ಶೇ. 5.43 ಕ್ಕೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.

"ಈಗ ಅಂತಿಮ ನಿರ್ಧಾರ ಕೈಗೊಳ್ಳುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಲ್ಲಾ ಮೆಟ್ರೋ ಮಾರ್ಗಗಳಲ್ಲೂ ಡಬಲ್-ಡೆಕ್ಕರ್ ನಿರ್ಮಿಸಲು ಉತ್ಸುಕರಾಗಿದ್ದಾರೆ, ಆದರೆ ಕೇಂದ್ರ ಸರ್ಕಾರ ಇದಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಇದರಿಂದಾಗಿ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ," ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

11 ಕಿ.ಮೀ.ಗೆ ಸೀಮಿತವಾಗಲಿದೆಯೇ ಡಬಲ್-ಡೆಕ್ಕರ್?

ಕೇಂದ್ರ ಸರ್ಕಾರವು ಆಗಸ್ಟ್ 2024 ರಲ್ಲಿ ₹15,611 ಕೋಟಿ ವೆಚ್ಚದ ಬೆಂಗಳೂರು ಮೆಟ್ರೋ ಹಂತ-3 ಕ್ಕೆ ಅನುಮೋದನೆ ನೀಡಿತ್ತು. 2029 ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಿರುವ ಈ 44.65 ಕಿ.ಮೀ ಯೋಜನೆ 31 ನಿಲ್ದಾಣಗಳನ್ನು ಒಳಗೊಂಡಿದೆ.

ಕಾರಿಡಾರ್ 1: ಜೆ.ಪಿ. ನಗರ 4ನೇ ಹಂತದಿಂದ ಹೆಬ್ಬಾಳದ ಕೆಂಪಾಪುರದವರೆಗೆ (ಹೊರ ವರ್ತುಲ ರಸ್ತೆ ಪಶ್ಚಿಮ) 32 ಕಿ.ಮೀ. (21 ನಿಲ್ದಾಣಗಳು).

ಕಾರಿಡಾರ್ 2: ಹೊಸಹಳ್ಳಿಯಿಂದ ಕಡಬಗೆರೆಯವರೆಗೆ (ಮಾಗಡಿ ರಸ್ತೆ) 12.5 ಕಿ.ಮೀ. (10 ನಿಲ್ದಾಣಗಳು).

ಆದರೆ, ಕೇಂದ್ರ ಅನುಮೋದಿಸಿದ ಯೋಜನೆಯಲ್ಲಿ ಡಬಲ್-ಡೆಕ್ಕರ್ ಭಾಗವು ಕೇವಲ 11 ಕಿ.ಮೀ ಗೆ ಸೀಮಿತವಾಗಿದೆ. ಕನಕಪುರ ರಸ್ತೆ ಜಂಕ್ಷನ್‌ನಲ್ಲಿ 1.4 ಕಿ.ಮೀ., ಕಾಮಾಕ್ಯ ಜಂಕ್ಷನ್‌ನಲ್ಲಿ 1.6 ಕಿ.ಮೀ ಹಾಗೂ ಗೊರಗುಂಟೆಪಾಳ್ಯ ಸೇರಿದಂತೆ ಇತರ ದಟ್ಟಣೆಯ ಜಂಕ್ಷನ್‌ಗಳಲ್ಲಿ 8 ಕಿ.ಮೀ ಸೇರಿ ಒಟ್ಟು 11 ಕಿ.ಮೀ ಮಾತ್ರ ಸೇರಿದೆ.ಸಮಾನಾಂತರವಾಗಿ ಫ್ಲೈಓವರ್ ಮತ್ತು ಮೆಟ್ರೋ ನಿರ್ಮಿಸಿದರೆ ಮೆಟ್ರೋದ ಮೂಲ ಉದ್ದೇಶವೇ ವಿಫಲವಾಗುತ್ತದೆ ಎಂಬುದು ಕೇಂದ್ರದ ಪ್ರಮುಖ ಕಾಳಜಿಯಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.

ಟೆಂಡರ್ ರದ್ದು, ಕಾಮಗಾರಿ ವಿಳಂಬದ ಬಿಸಿ ಸಾರ್ವಜನಿಕರಿಗೆ!

ಜನವರಿ 2026 ರಲ್ಲಿ ಬಿಎಂಆರ್‌ಸಿಎಲ್ ಜೆ.ಪಿ. ನಗರದಿಂದ ಮಾಗಡಿ ರಸ್ತೆಯವರೆಗಿನ 18.5 ಕಿ.ಮೀ ಭಾಗದ ಸಿವಿಲ್ ಕಾಮಗಾರಿಗೆ 3 ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆದಿತ್ತು. ಆದರೆ, ಡಬಲ್-ಡೆಕ್ಕರ್ ಪ್ರಸ್ತಾವನೆ ಕೈಬಿಟ್ಟರೆ ಈ ಮೂರೂ ಟೆಂಡರ್‌ಗಳನ್ನು ರದ್ದುಗೊಳಿಸಿ ಹೊಸದಾಗಿ ಕರೆಬೇಕಾಗುತ್ತದೆ.

ಕೇಂದ್ರ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಿ 2 ವರ್ಷ ಹಾಗೂ ಪ್ರಧಾನಿ ಮೋದಿ 2025 ರ ಆಗಸ್ಟ್ 10 ರಂದು ಶಂಕುಸ್ಥಾಪನೆ ನೆರವೇರಿಸಿ 1 ವರ್ಷ ಕಳೆದರೂ ಕಾಮಗಾರಿ ಆದೇಶ (Work Order) ಹೊರಡಿಸಲು ಸಾಧ್ಯವಾಗಿಲ್ಲ. ಯೋಜನೆ ತಡವಾಗುವ ಪ್ರತಿಯೊಂದು ವರ್ಷವೂ ವೆಚ್ಚ ಶೇಕಡಾ 10 ರಷ್ಟು ಹೆಚ್ಚಾಗುತ್ತದೆ. ಈ ಹೆಚ್ಚುವರಿ ಹೊರೆಯನ್ನು ಅಂತಿಮವಾಗಿ ಪ್ರಯಾಣಿಕರ ಮೇಲೆಯೇ ಹಾಕಲಾಗುತ್ತದೆ. ದೇಶದಲ್ಲೇ ಬೆಂಗಳೂರು ಮೆಟ್ರೋ ಪ್ರಯಾಣ ದರ ಅತ್ಯಂತ ದುಬಾರಿಯಾಗಿರಲು ಇಂತಹ ವಿಳಂಬಗಳೇ ಮುಖ್ಯ ಕಾರಣ ಎಂದು ಮೆಟ್ರೋ ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ತೀವ್ರ ಪರಿಶೀಲನೆ

ಭೂಸ್ವಾಧೀನ ವೆಚ್ಚ ಹೆಚ್ಚಿರುವುದರಿಂದ ಡಬಲ್-ಡೆಕ್ಕರ್ ಸೂಕ್ತ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸುತ್ತಿದ್ದು, ಹೆಚ್ಚುವರಿ 37 ಕಿ.ಮೀ ಡಬಲ್-ಡೆಕ್ಕರ್‌ಗೆ ₹9,700 ಕೋಟಿ ಅಂದಾಜು ವೆಚ್ಚ ನಿಗದಿಪಡಿಸಿದೆ. ಆದರೆ ಇದಕ್ಕೆ ಕೇಂದ್ರದ ಹೊಸ ಅನುಮೋದನೆ ಅಗತ್ಯವಿದೆ. ಪ್ರಸ್ತಾವಿತ 37 ಕಿ.ಮೀ ಹೆಬ್ಬಾಳ-ಸರ್ಜಾಪುರ ಮೆಟ್ರೋ ಮಾರ್ಗವೂ (ಅಂದಾಜು ವೆಚ್ಚ ₹25,999 ಕೋಟಿ) ಇದೇ ರೀತಿಯ ಸವಾಲನ್ನು ಎದುರಿಸುತ್ತಿದ್ದು, ಇದರ ಪರಿಶೀಲನೆಗೆ ಐಐಟಿ ರೂರ್ಕಿಗೆ (IIT Roorkee) ಜವಾಬ್ದಾರಿ ನೀಡಲಾಗಿದೆ.

PREV
Read more Articles on
click me!

Recommended Stories

ಅಮೃತ್ ಭಾರತ್ ಯೋಜನೆ: ಕರ್ನಾಟಕದಲ್ಲಿ ಕೇವಲ 12 ರೈಲು ನಿಲ್ದಾಣಗಳು ಮಾತ್ರ ಪೂರ್ಣ! ವಿಳಂಬಕ್ಕೆ ಕಾರಣ ಬಹಿರಂಗ
ಬೆಂಗಳೂರಿನ ಫೈವ್‌ ಸ್ಟಾರ್‌ ಹೋಟೆಲ್‌ಗಳ ಮೇಲೆ FSSAI ದಾಳಿ ಮಾಡಿದ್ದೇಕೆ? ಸಚಿವ ಯು.ಟಿ. ಖಾದರ್ ಕೊಟ್ಟರು ಸ್ಪಷ್ಟನೆ!