
ಕನ್ನಡಪ್ರಭ ವಾರ್ತೆ ಬೆಂಗಳೂರು (ಏ.3): ರಾಜಧಾನಿಯಲ್ಲ ವೈಭವದಿಂದ ಸಂಪನ್ನವಾದ ಕರಗ ಉತ್ಸವದ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ವರ್ಗಾವಣೆಗೆ ವಿಘ್ನ ನಿವಾರಿಸುವಂತೆ ಕೋರಿ ಪೊಲೀಸರೊಬ್ಬರು ಹರಕೆ ಬಾಳೆ ಹಣ್ಣು ಎಸೆದು ಪ್ರಾರ್ಥಿಸಿದ್ದಾರೆ. ಎಂಟು ತಿಂಗಳಿಂದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ತ್ರಿಶಂಕು ಸ್ಥಿತಿ ತಲುಪಿದೆ. ಇತ್ತ ವರ್ಗಾವಣೆ ನಿರೀಕ್ಷೆಯಲ್ಲಿರುವ ಪೊಲೀಸರು ಕಾದು ಸುಸ್ತಾಗಿದ್ದಾರೆ. ಈ ಬವಣೆ ನೀಗಿಸುವಂತೆ ಕರಗದಲ್ಲಿ ದೇವರಿಗೆ ಪೊಲೀಸರು ಮೊರೆಯಿಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಿಲಿಕಾನ್ ಸಿಟಿಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾದ ಬೆಂಗಳೂರು ಕರಗ ಮಹೋತ್ಸವ ಅತ್ಯಂತ ವೈಭವದಿಂದ ಜರುಗಿ ಸಂಪನ್ನಗೊಂಡಿತು. ಭಕ್ತಿ ಮತ್ತು ಪರಂಪರೆಯ 15 ದಿನಗಳ ಆಚರಣೆಯ ಪ್ರಮುಖ ಘಟ್ಟ ಬುಧವಾರ ತಡರಾತ್ರಿ ಜರುಗಿತು. ಮಧ್ಯರಾತ್ರಿ ನಂತರ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇಗುಲದಿಂದ ಹೊರಟ ದ್ರೌಪದಿದೇವಿ ಸ್ವರೂಪಿ ಕರಗ ನಗರದ ಕೇಂದ್ರ ಭಾಗದಲ್ಲಿ ಸುಮಾರು 23 ಕಿ.ಮೀ ಸಂಚರಿಸಿತು.
ಕರಗ ಸಾಗಿದ ಮಾರ್ಗದಲ್ಲಿ ಭಕ್ತರು, ರಸ್ತೆ ಬದಿಗಳಲ್ಲಿ, ಕಟ್ಟಡಗಳ ಮೇಲೆ ನಿಂತು ದರ್ಶನ ಪಡೆದರು. ನಗರದ ಒಟ್ಟು 26 ಪೇಟೆಗಳಲ್ಲಿ ಸಂಚರಿಸಿ, ಅಣ್ಣಮ್ಮ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಭಕ್ತರಿಗೆ ದರ್ಶನ ನೀಡಿ ಅಂತಿಮವಾಗಿ ದೇವಾಲಯದ ಶಕ್ತಿ ಪೀಠದಲ್ಲಿ ದ್ರೌಪದಮ್ಮನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸುವ ಮೂಲಕ ಉತ್ಸವ ಸಂಪನ್ನಗೊಂಡಿತು.
ಪ್ರತಿ ವರ್ಷದಂತೆ ದೇಗುಲದಲ್ಲಿ ಪೂಜೆಯ ಬಳಿಕ ಅರ್ಚಕ ಜ್ಞಾನೇಂದ್ರ ಅವರು ಗರ್ಭಗುಡಿಯ ಪ್ರದಕ್ಷಿಣೆ ಮುಗಿಸಿ, ಶಿರದ ಮೇಲೆ ಕರಗ ಹೊತ್ತು ದೇವಾಲಯದಿಂದ ಹೊರಬಂದರು. ಈ ವೇಳೆ ನೆರೆದಿದ್ದ ಸಾವಿರಾರು ಭಕ್ತರ ‘ಗೋವಿಂದ, ಗೋವಿಂದ’ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಮೆರವಣಿಗೆಯ ಹಾದಿಯುದ್ದಕ್ಕೂ ವಿಘ್ನೇಶ್ವರ ಮತ್ತು ಗ್ರಾಮದೇವತೆ ಮುತ್ಯಾಲಮ್ಮ ದೇವಿಯ ಆಶೀರ್ವಾದ ಪಡೆದು ಕರಗವು ಸಾಗಿತು. ಮಾರ್ಗದ ಉದ್ದಕ್ಕೂ ವಿವಿಧ ದೇವಾಲಯಗಳು, ದರ್ಗಾ ಮೂಲಕ ಸಾಗಿತು.
ಮಸ್ತಾನ್ ಸಾಬ್ ದರ್ಗಾ ಭೇಟಿ: ಕರಗ ಮಹೋತ್ಸವದ ಪ್ರಮುಖ ಆಕರ್ಷಣೆ ಎಂದರೆ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಮಸ್ತಾನ್ ಸಾಬ್ ದರ್ಗಾ ಭೇಟಿ ನೀಡಿತು. ಈ ವೇಳೆ ಮಾತನಾಡಿದ ದರ್ಗಾದ ಮುಜಾವರ್ ಪರ್ವೀಜ್ ಅಹ್ಮದ್, ಇದು ತಲತಲಾಂತರಗಳಿಂದ ನಡೆದು ಬಂದ ಸಂಪ್ರದಾಯ. ಧರ್ಮರಾಯಸ್ವಾಮಿ ಮತ್ತು ಮಸ್ತಾನ್ ಸಾಬ್ ಅವರ ನಡುವಿನ ಪ್ರೀತಿ ಶಾಶ್ವತವಾಗಿರುತ್ತದೆ. ಕರಗವು ಇಲ್ಲಿ ಮೂರು ಸುತ್ತು ಹಾಕಿ ಸಂಪ್ರದಾಯದಂತೆ ಮಂತ್ರಘೋಷಗಳೊಂದಿಗೆ ಆಚರಣೆ ನಡೆಸುತ್ತದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ನಮಗೆ ಅತ್ಯಂತ ಸಂತೋಷದ ವಿಷಯ ಎಂದರು.
ವೀರಕುಮಾರರ ಅಲಗು ಸೇವೆ: ಧರ್ಮರಾಯಸ್ವಾಮಿ ದೇವಸ್ಥಾನದ ಮುಂದೆ ವೀರಕುಮಾರರು ನಡೆಸಿದ ಅಲಗು ಸೇವೆ ಮೆರವಣಿಗೆಗೆ ರೌದ್ರಕಳೆಯನ್ನು ನೀಡಿತ್ತು. ಕೈಯಲ್ಲಿ ಕತ್ತಿ ಹಿಡಿದು ‘ದಿಕ್-ದೀ’ ಎನ್ನುತ್ತಾ ಎದೆಯ ಮೇಲೆ ಹೊಡೆದುಕೊಳ್ಳುವ ದೃಶ್ಯ ಭಕ್ತರಲ್ಲಿ ರೋಮಾಂಚನ ಮೂಡಿಸಿತು.
ಅತ್ತಿಬೆಲೆ: ಇಲ್ಲಿನ ಗ್ರಾಮ ದೇವತೆ ಶ್ರೀ ಪಟ್ಟಲಮ್ಮ ದೇವಿಯ ದೇವಸ್ಥಾನದ ಆವರಣದಲ್ಲಿ 92ನೇ ವರ್ಷದ ಶ್ರೀ ಧರ್ಮರಾಯ ಸ್ವಾಮಿ ದ್ರೌಪತಮ್ಮನವರ ಹೂವಿನ ಕರಗ ಮಹೋತ್ಸವ ಮತ್ತು ಗ್ರಾಮ ದೇವರ ಪಲ್ಲಕ್ಕಿ ಉತ್ಸವ ಗ್ರಾಮದ ಕುರು ಹಿರಿಯರ ಮಾರ್ಗದರ್ಶನದಲ್ಲಿ ಅದ್ಧೂರಿಯಾಗಿ ನೆರವೇರಿತು. ದ್ರೌಪತಮನವರ ಕರಗವು ಪಟಾಲಮ್ಮ ದೇವಸ್ಥಾನದಿಂದ ಬುಧವಾರ ರಾತ್ರಿ 1 ಗಂಟೆಗೆ ಪ್ರಾರಂಭವಾಗಿ ಬೆಳಗ್ಗೆ 7 ಗಂಟೆಯವರೆಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಪಟಲಮ್ಮ ದೇವಿ ಸೇವಾ ಸಮಿತಿ ಮತ್ತು ಕರಗದಮ್ಮ ಸೇವಾ ಸಮಿತಿ ಅಣ್ಣಮ್ಮ ದೇವಿ ಸೇವಾ ಸಮಿತಿ ಬಂಡಿಕಾಳಿ ದೇವಿ ಸೇವಾ ಸಮಿತಿ ಎಲ್ಲ ಸಮಿತಿಗಳ ವತಿಯಿಂದ ಅನ್ನ ದಾಸೋಹವನ್ನು ಹಮ್ಮಿಕೊಳ್ಳಲಾಗಿತ್ತು.