
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯಲ್ಲೇ ಆರು ದಶಕಗಳ ಬಳಿಕ ಅಧಿಕೃತವಾಗಿ ಬೆಂಗಳೂರು ನಗರ ಕಮಿಷನರ್ ಘಟಕವು ವಿಘಟನೆಗೊಂಡಿದ್ದು, ಹೊಸದಾಗಿ ಮುಖ್ಯ ಆಯುಕ್ತ, ಐವರು ಆಯುಕ್ತರು ಹಾಗೂ ಸಂಚಾರ ವಿಭಾಗದ ಆಯುಕ್ತ ಹುದ್ದೆಗಳನ್ನು ಸೃಜಿಸಿ ಹಿರಿಯ ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ನೇಮಿಸಿದೆ. ಸರ್ಕಾರದ ಆದೇಶದ ಬೆನ್ನಲ್ಲೇ ಬೆಂಗಳೂರು ನಗರದ ನೂತನ ಸಂಚಾರ ವಿಭಾಗದ ಆಯುಕ್ತರು ಹಾಗೂ ಐವರು ಪೊಲೀಸ್ ಆಯುಕ್ತರು ಗುರುವಾರ ಅಧಿಕಾರ ಸ್ವೀಕರಿಸಿದರು.
ನಗರದಲ್ಲಿ ಹೊಸದಾಗಿ ಆರಂಭಿಸಿದ ತಮ್ಮ ಆಯುಕ್ತಾಲಯದ ಕಚೇರಿಗಳಲ್ಲಿ ಬೆಳಗ್ಗೆ ಐಜಿಪಿಗಳಾದ ಲಾಭೂರಾಮ್ (ಕೇಂದ್ರ) ಪಿ.ಎಸ್.ಹರ್ಷ (ಪೂರ್ವ), ಡಾ.ಬೋರಲಿಂಗಯ್ಯ (ಉತ್ತರ), ವಿಕಾಸ್ ಕುಮಾರ್ (ಪಶ್ಚಿಮ) ಹಾಗೂ ಡಿಐಜಿ ಸಿ.ವಂಶಿಕೃಷ್ಣ (ದಕ್ಷಿಣ) ಅವರು ಹುದ್ದೆ ಅಲಂಕರಿಸಿದರು. ಅಲ್ಲದೆ ಸಂಚಾರ, ರೌಡಿ ನಿಗ್ರಹ ಪಡೆ ಹಾಗೂ ಅಪರಾಧ ನಿಯಂತ್ರಣ ವಿಭಾಗದ ಆಯುಕ್ತರಾಗಿ ಹೇಮಂತ್ ನಿಂಬಾಳ್ಕರ್ ಅಧಿಕಾರ ಸ್ವೀಕರಿಸಿದರು.
ಇದಕ್ಕೂ ಮುನ್ನ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮುಖ್ಯ ಆಯುಕ್ತ ಆರ್.ಹಿತೇಂದ್ರ ಅವರೊಂದಿಗೆ ನೂತನ ಐವರು ಪೊಲೀಸ್ ಆಯುಕ್ತರುಗಳ ಔಪಚಾರಿಕ ಸಭೆ ನಡೆಯಿತು. ಈ ಸಭೆಯಲ್ಲಿ ಎಲ್ಲ ತಮ್ಮ ವ್ಯಾಪ್ತಿಯಲ್ಲೇ ಕಚೇರಿ ಆರಂಭಿಸಬೇಕು. ಯಾರೊಬ್ಬರಿಗೂ ಮುಖ್ಯ ಆಯುಕ್ತರ ಕೇಂದ್ರ ಕಚೇರಿಯಲ್ಲಿ ಹಂಚಿಕೆ ಮಾಡುವುದಿಲ್ಲ ಎಂದು ಹಿತೇಂದ್ರ ಸೂಚಿಸಿದರು ಎನ್ನಲಾಗಿದೆ.
ಕೇಂದ್ರ: ಕಬ್ಬನ್ ಪಾರ್ಕ್ ಸಮೀಪದ ಕೇಂದ್ರ ವಿಭಾಗದ ಡಿಸಿಪಿ ಕಚೇರಿ
ಪಶ್ಚಿಮ: ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದ ಮುಂದೆ ಪಶ್ಚಿಮ ವಿಭಾಗದ ಡಿಸಿಪಿ ಕಚೇರಿ
ಉತ್ತರ: ಯಶವಂತಪುರ ಮೇಲ್ಸೇತುವೆ ಸಮೀಪ ಉತ್ತರ ವಿಭಾಗದ ಡಿಸಿಪಿ ಕಚೇರಿ
ದಕ್ಷಿಣ: ಕೋರಮಂಗಲದಲ್ಲಿರುವ ಆಗ್ನೇಯ ವಿಭಾಗದ ಡಿಸಿಪಿ ಕಚೇರಿ
ಪೂರ್ವ: ಮಾರತ್ತಹಳ್ಳಿ ಪೊಲೀಸ್ ಠಾಣೆಯ ನೂತನ ಕಟ್ಟಡದ
ಕೇಂದ್ರ : ಕಬ್ಬನ್ ಪಾರ್ಕ್ ಠಾಣೆಯ (ಎನ್‌ಟಿಎಫ್ ಕಚೇರಿ)
ಇಂದಿರಾ ನಗರ: ಪೂರ್ವ ವಿಭಾಗದ ಡಿಸಿಪಿ ಕಚೇರಿ
ಗಾಂಧಿನಗರ: ಪಶ್ಚಿಮ ವಿಭಾಗ (ಸಂಚಾರ)ದ ಕಚೇರಿ
ಸಂಚಾರ (ಕೇಂದ್ರ): ಟಿಎಂಸಿಯ ಪೂರ್ವ (ಸಂಚಾರ) ಡಿಸಿಪಿ ಕಚೇರಿ
ಪಶ್ಚಿಮ: ರಾಜಾಜಿನಗರ ಪೊಲೀಸ್ ಠಾಣೆ
ಪೀಣ್ಯ: ಡಿಸಿಪಿ ನೈಋತ್ಯ ವಿಭಾಗದ ಕಚೇರಿ
ಪಶ್ಚಿಮ (ಸಂಚಾರ): ಮಾಗಡಿ ರಸ್ತೆಯ ಪಶ್ಚಿಮ ಆಯುಕ್ತರ ಕಚೇರಿ
ಆಗ್ನೇಯ: ಹಳೇ ಆಗ್ನೇಯ ಡಿಸಿಪಿ ವಿಭಾಗದ ಕಚೇರಿ
ಉತ್ತರ: ಸಂಜಯನಗರ ಪೊಲೀಸ್ ಠಾಣೆ
ಯಶವಂತಪುರ: ಗಂಗಮ್ಮನಗುಡಿ ಪೊಲೀಸ್ ಠಾಣೆ
ಪೂರ್ವ: ರಾಮಮೂರ್ತಿನಗರ ಪೊಲೀಸ್ ಠಾಣೆ
ಪೂರ್ವ (ಸಂಚಾರ): ಮಹದೇವಪುರ ಪೊಲೀಸ್ ಠಾಣೆ
1963ರಲ್ಲಿ ಬೆಂಗಳೂರು ಪೊಲೀಸ್ ಕಮಿಷನರೇಟ್ ಘಟಕವನ್ನು ಸರ್ಕಾರ ಸ್ಥಾಪಿಸಿತ್ತು. ಪ್ರಾರಂಭದಲ್ಲಿ ಹತ್ತು ವರ್ಷಗಳು ಡಿಐಜಿ ದರ್ಜೆ ಅಧಿಕಾರಿಗಳು ಆಯುಕ್ತರಾಗಿದ್ದರು. ತರುವಾಯ ಜನಸಂಖ್ಯಾ ಹೆಚ್ಚಳ ಹಾಗೂ ನಗರವು ವಿಸ್ತಾರವಾದಂತೆ ಎಡಿಜಿಪಿ ಮಟ್ಟದ ಅಧಿಕಾರಿಗಳು ಆಯುಕ್ತರಾಗುತ್ತಿದ್ದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಹೋಳು ಮಾಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚಿಸಿದ ಮಾದರಿಯಲ್ಲೇ ಪೊಲೀಸ್ ಕಮೀಷನರೇಟ್ ವಿಭಜನೆಗೆ ಸರ್ಕಾರ ನಿರ್ಧರಿಸಿತ್ತು. ಅಂತೆಯೇ 63 ವರ್ಷಗಳ ಬಳಿಕ ಬೆಂಗಳೂರು ಕಮೀಷನರೇಟ್ ಘಟಕವು ವಿಘಟನೆಗೊಂಡು ಐದು ಭಾಗಗಳಾಗಿವೆ. ಈ ವಿಭಜನೆ ಬೆನ್ನಲ್ಲೇ ಅಸ್ವಿತ್ತಕ್ಕೆ ಬಂದ ಮುಖ್ಯ ಪೊಲೀಸ್ ಆಯುಕ್ತ ಹುದ್ದೆಗೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಡಿಜಿಪಿ ಹಿತೇಂದ್ರ ಅವರನ್ನು ಸರ್ಕಾರ ನೇಮಿಸಿದೆ.
ಐದು ಪೊಲೀಸ್ ಕಮಿಷನರ್ ಘಟಕಗಳಿಗೆ ನಾಲ್ವರು ಐಜಿಪಿ ಹಾಗೂ ಓರ್ವ ಡಿಐಜಿ ಮಟ್ಟದ ಅಧಿಕಾರಿಯನ್ನು ಸರ್ಕಾರ ನೇಮಿಸಿದೆ. ಕೇಂದ್ರ ಘಟಕ-ಲಾಬೂ ರಾಮ್, ಉತ್ತರ-ಡಾ.ಬೋರಲಿಂಗಯ್ಯ, ಪಶ್ಚಿಮ- ವಿಕಾಸ್ ಕುಮಾರ್ ವಿಕಾಸ್, ಪೂರ್ವ-ಡಾ.ಪಿ.ಎಸ್.ಹರ್ಷ ಹಾಗೂ ದಕ್ಷಿಣ ಆಯುಕ್ತರಾಗಿ ವಂಶಿಕೃಷ್ಣ ಅವರು ಪ್ರಥಮ ಆಯುಕ್ತರಾಗಲಿದ್ದಾರೆ. ಮುಂದಿನ ಜನವರಿಯಲ್ಲಿ ವಂಶಿಕೃಷ್ಣ ಅವರಿಗೆ ಸೇವಾ ಹಿರಿತನ ಆಧಾರದ ಮೇರೆಗೆ ಐಜಿಪಿ ಹುದ್ದೆಗೆ ಮುಂಬಡ್ತಿ ಸಿಗಲಿದ್ದು, ಅಲ್ಲಿವರೆಗೆ ಅವರಿಗೆ ಆಡಳಿತ ವಿಭಾಗದ ಜತೆ ದಕ್ಷಿಣ ಆಯುಕ್ತ ಹುದ್ದೆಯನ್ನು ಪ್ರಭಾರಿಯಾಗಿ ನಿರ್ವಹಿಸಲಿದ್ದಾರೆ.
ಐದು ದಶಕಗಳ ಬಳಿಕ ಒಕ್ಕಲಿಗ ಸಮುದಾಯದ ಐಪಿಎಸ್ ಅಧಿಕಾರಿಯೊಬ್ಬರಿಗೆ ರಾಜಧಾನಿ ಪೊಲೀಸ್ ಮಹಾದಂಡ ನಾಯಕನ ಹುದ್ದೆ ಸಿಕ್ಕಿದೆ. 1970ರ ದಶಕದಲ್ಲಿ ಒಕ್ಕಲಿಗ ಸಮುದಾಯದ ಚಂದ್ರಶೇಖರ್ ಅವರು ಆಯುಕ್ತರಾಗಿದ್ದರು. ನಂತರ ಅವಕಾಶ ಸಿಗದೆ ಆಯುಕ್ತ ಹುದ್ದೆಯೂ ಆ ವರ್ಗದ ಅಧಿಕಾರಿಗಳ ಪಾಲಿಗೆ ಗಗನ ಕುಸುಮವಾಗಿತ್ತು.
ಈ ಹಿಂದೆ 2013-18ರ ಕಾಂಗ್ರೆಸ್ ಹಾಗೂ 2018-19ರ ಮೈತ್ರಿ ಸರ್ಕಾರದ ಅವಧಿಯಲ್ಲಿ ಪೊಲೀಸ್ ಆಯುಕ್ತ ಹುದ್ದೆಗೆ ಎರಡ್ಮೂರು ಬಾರಿ ಅಂದಿನ ಹಿರಿಯ ಐಪಿಎಸ್ ಅಧಿಕಾರಿ ಕಿಶೋರ್ ಚಂದ್ರ ಅವರ ಹೆಸರು ಪ್ರಸ್ತಾಪವಾದರೂ ರಾಜಕೀಯ ಕಾರಣಗಳಿಗೆ ಅವರು ಅವಕಾಶ ವಂಚಿತರಾದರು. ಇದಾದ ಬಳಿಕ ಆಯುಕ್ತ ಹುದ್ದೆಯೂ ಸೇವಾ ಹಿರಿತನವಿಲ್ಲದೆ ಒಕ್ಕಲಿಗ ಅಧಿಕಾರಿಗಳು ಗಣನೆಗೆ ಬರಲಿಲ್ಲ. ಆದರೆ, ಎಡಿಜಿಪಿ ಹುದ್ದೆಗೆ ಹಿತೇಂದ್ರ ಅವರು ಮುಂಬಡ್ತಿ ಪಡೆದ ಬಳಿಕ ಮತ್ತೆ ಆಯುಕ್ತರ ಪದವಿಗೆ ಆ ಸಮುದಾಯದ ಹಕ್ಕೊತ್ತಾಯ ಪ್ರಾರಂಭವಾಯಿತು.
ಕಳೆದ ಮೂರೂವರೆ ವರ್ಷಗಳಿಂದ ಹಿತೇಂದ್ರ ಅವರ ಹೆಸರು ಚಾಲ್ತಿಯಲ್ಲಿತ್ತು. ಕೊನೆಗೆ ತನ್ನದೇ ಸಮುದಾಯದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಪದವಿಗೇರಿದ ನಂತರ ಆಯುಕ್ತರ ಸ್ಥಾನಕ್ಕೆ ಹಿತೇಂದ್ರ ಅವರ ಹೆಸರು ಮುಂಚೂಣಿಗೆ ಬಂತು. ಮುಖ್ಯಮಂತ್ರಿ ಅವರ ಬಳಿ ಒಕ್ಕಲಿಗರಿಗೆ ಅಧಿಕಾರ ನೀಡುವಂತೆ ಸಮುದಾಯದ ಮಂತ್ರಿಗಳು, ಶಾಸಕರು ಹಾಗೂ ಸ್ವಾಮೀಜಿಗಳು ಒತ್ತಾಯಿಸಿದ್ದರು ಎಂದು ತಿಳಿದು ಬಂದಿದೆ. ಕೊನೆಗೆ ಹಿತೇಂದ್ರ ಅವರಿಗೆ ಮುಖ್ಯ ಕಮಿಷನರ್ ಹುದ್ದೆಗೆ ನೇಮಿಸುವ ಮೂಲಕ ಐದು ದಶಕಗಳ ಒಕ್ಕಲಿಗ ಸಮುದಾಯದ ಬೇಡಿಕೆ ಈಡೇರಿದಂತಾಗಿದೆ ಎನ್ನಲಾಗಿದೆ.
ನೂತನ ಮುಖ್ಯ ಪೊಲೀಸ್ ಆಯುಕ್ತ ಹಿತೇಂದ್ರ ಅವರು ಕೋಲಾರ ಜಿಲ್ಲೆಯವರು. 1996ನೇ ಸಾಲಿನ ಐಪಿಎಸ್ ಅಧಿಕಾರಿ ಆಗಿರುವ ಅವರು, ತುಮಕೂರು, ಮಂಡ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಏಳು ವರ್ಷ ಸಿಬಿಐನಲ್ಲಿ ಕಾರ್ಯನಿರ್ವಹಿಸಿ ಮರಳಿದರು. ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ಮೂರೂವರೆ ವರ್ಷ ಹಾಗೂ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಅನುಭವ ಹೊಂದಿದ್ದಾರೆ. ಇನ್ನು ತನಿಖೆಗೆ ಖ್ಯಾತಿಗಳಿಸಿರುವ ಅವರು ಪ್ರಸುತ್ತ ಕೆಪಿಎಸ್‌ಸಿ ನೇಮಕಾತಿ ಹಗರಣದ ಎಸ್‌ಐಟಿ ಮುಖ್ಯಸ್ಥರಾಗಿದ್ದಾರೆ. ಈ ಹಿಂದೆ ಬಳ್ಳಾರಿ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸಿದ್ದರು. ಇನ್ನು ದಯಾನಂದ್ ಅವರ ಬಳಿಕ ಮತ್ತೆ ಕನ್ನಡಿಗ ಅಧಿಕಾರಿಗೆ ರಾಜಧಾನಿ ಆಡಳಿತ ಹೊಣೆ ಸಿಕ್ಕಂತಾಗಿದೆ.