
ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಆರೋಗ್ಯಕರ ಹಾಗೂ ಮನೆಯೂಟದ ರುಚಿಯ ಆಹಾರ ನೀಡುವ ಉದ್ಯಮ ಆರಂಭಿಸಿದ್ದಾರೆ. ಕೇವಲ ₹15 ಲಕ್ಷ ಬಂಡವಾಳದೊಂದಿಗೆ ಶುರುವಾದ ಇವರ ಉದ್ಯಮ ಕೇವಲ 9 ತಿಂಗಳಲ್ಲಿ ಬರೋಬ್ಬರಿ ₹56 ಲಕ್ಷ ಆದಾಯ ಗಳಿಸಿದೆ. ಅಷ್ಟೇ ಅಲ್ಲ, ಇದುವರೆಗೆ 1,500ಕ್ಕೂ ಹೆಚ್ಚು ಗ್ರಾಹಕರಿಗೆ 55 ಸಾವಿರಕ್ಕೂ ಅಧಿಕ ಊಟದ ಪೊಟ್ಟಣಗಳನ್ನು ತಲುಪಿಸಿದೆ. ಬೆಂಗಳೂರು ಮೂಲದ ದಿಯಾ ಕೃಷ್ಣಕುಮಾರ್ ಮತ್ತು ಆದಿತ್ಯ ನಟರಾಜನ್ ಅವರು ಆರಂಭಿಸಿರುವ ಈ ಸ್ಟಾರ್ಟ್ಅಪ್ ಹೆಸರು 'ವೆಲ್ಫೆಡ್' (Wellfed). ಆರೋಗ್ಯಕರ ಆಹಾರವನ್ನು ಕೈಗೆಟುಕುವ ದರದಲ್ಲಿ ಉದ್ಯೋಗಿಗಳಿಗೆ ತಲುಪಿಸುವ ಉದ್ದೇಶದಿಂದ ಈ ಜೋಡಿ ಉದ್ಯಮ ಆರಂಭಿಸಿದೆ.
ದಿಯಾ ಮತ್ತು ಆದಿತ್ಯ ಇಬ್ಬರೂ ಬೆಂಗಳೂರಿನಲ್ಲಿ ಕಂಪ್ಯೂಟರ್ ಸೈನ್ಸ್ ಓದಿದ್ದು, ಬಳಿಕ ಒಂದೇ ಐಟಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಮೂರು ವರ್ಷಕ್ಕೂ ಹೆಚ್ಚು ಕಾಲ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದ್ದ ಇವರಿಗೆ ಕೆಲಸದ ಒತ್ತಡದ ನಡುವೆ ಆರೋಗ್ಯಕರ ಆಹಾರ ಸೇವಿಸುವುದು ಕಷ್ಟವಾಗುತ್ತಿತ್ತು. ಬಹುತೇಕ ದಿನಗಳಲ್ಲಿ ರೆಸ್ಟೋರೆಂಟ್ ಆಹಾರ ಅಥವಾ ಫುಡ್ ಡೆಲಿವರಿ ಆ್ಯಪ್ಗಳನ್ನೇ ಅವಲಂಬಿಸಬೇಕಾಗಿತ್ತು. ಮನೆಯಲ್ಲೇ ಅಡುಗೆ ಮಾಡಬೇಕೆಂದರೂ ಸಮಯದ ಅಭಾವ ಎದುರಾಗುತ್ತಿತ್ತು.
ಈ ಬಗ್ಗೆ ಮಾತನಾಡಿದ್ದ ಆದಿತ್ಯ, ಕೆಲ ದಿನ ಕೆಲಸ ಮುಗಿಸಿ ಮನೆಗೆ ಬರುವಾಗ ರಾತ್ರಿ ಊಟಕ್ಕೆ ಹೊರಗಿನಿಂದ ಆಹಾರ ತರಬೇಕಾಗುತ್ತಿತ್ತು. ಇನ್ನು ಕೆಲ ದಿನ ದಿಯಾ ಮನೆಯಲ್ಲೇ ಏನಾದರೂ ಅಡುಗೆ ಮಾಡಿ ಊಟ ಸಿದ್ಧಪಡಿಸಲು ಪರದಾಡುತ್ತಿದ್ದರು ಎಂದು ಹೇಳಿದ್ದಾರೆ. ದಿಯಾ ಅವರ ಪ್ರಕಾರ, ಆನ್ಲೈನ್ನಲ್ಲಿ 20 ನಿಮಿಷದಲ್ಲಿ ಸಿದ್ಧವಾಗುತ್ತದೆ ಎಂದು ಹೇಳುವ ರೆಸಿಪಿಯನ್ನು ಮನೆಯಲ್ಲೇ ತಯಾರಿಸಲು ದುಪ್ಪಟ್ಟು ಸಮಯ ಬೇಕಾಗುತ್ತದೆ. ದಿನವಿಡೀ ಒತ್ತಡದ ಕೆಲಸ ಮಾಡಿ ಮನೆಗೆ ಬರುವ ಉದ್ಯೋಗಿಗಳಿಂದ ಪ್ರತಿದಿನ ಅಡುಗೆ ನಿರೀಕ್ಷಿಸುವುದು ಕಷ್ಟದ ಕೆಲಸ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆರೋಗ್ಯಕರ ಆಹಾರ ಒದಗಿಸುವ ಹಲವು ಮೀಲ್ ಸಬ್ಸ್ಕ್ರಿಪ್ಷನ್ ಸೇವೆಗಳನ್ನು ಈ ದಂಪತಿ ಹುಡುಕಿದ್ದರು. ಆದರೆ ಹೆಚ್ಚಿನ ಕಡೆ ವಿಭಿನ್ನ ದೇಶಗಳ ಖಾದ್ಯಗಳು, ಫ್ಯಾನ್ಸಿ ಡಿಶ್ಗಳು ಸಿಗುತ್ತಿದ್ದವು. ಇವರಿಗೆ ಬೇಕಾಗಿದ್ದು ಮಾತ್ರ ಸರಳವಾದ, ಆರೋಗ್ಯಕರ ಭಾರತೀಯ ಮನೆಯೂಟ.
ಕೈಗೆಟುಕುವ ದರದಲ್ಲಿ ಇಂತಹ ಆಹಾರ ಸಿಗದ ಹಿನ್ನೆಲೆಯಲ್ಲಿ ತಾವೇ ಈ ಉದ್ಯಮ ಆರಂಭಿಸಲು ನಿರ್ಧರಿಸಿದರು.
ಸೆಪ್ಟೆಂಬರ್ 2024ರಲ್ಲಿ ತಮ್ಮ ಐಟಿ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಎಂಬಿಎ ಅಧ್ಯಯನದ ಜೊತೆಗೆ 'ವೆಲ್ಫೆಡ್' ಉದ್ಯಮ ಆರಂಭಿಸಿದರು. ಇದಕ್ಕಾಗಿ ತಮ್ಮ ವೈಯಕ್ತಿಕ ಉಳಿತಾಯದಿಂದ ಬಹುತೇಕ ಹಣವನ್ನು ಬಳಸಿಕೊಂಡು ಒಟ್ಟು ₹15 ಲಕ್ಷ ಹೂಡಿಕೆ ಮಾಡಿದರು. ಆರಂಭದಲ್ಲಿ ಈ ತಂಡದಲ್ಲಿ ಆರು ಮಂದಿ ಇದ್ದರು. ಇಬ್ಬರು ಸಂಸ್ಥಾಪಕರ ಜೊತೆಗೆ ಪೌಷ್ಟಿಕಾಂಶ ತಜ್ಞರು, ಅಡುಗೆ ಸಿಬ್ಬಂದಿ, ಸ್ಟೀವರ್ಡ್ ಮತ್ತು ಡೆಲಿವರಿ ಸಿಬ್ಬಂದಿ ಸೇರಿದ್ದರು. ಮೊದಲಿಗೆ ತಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಊಟ ತಯಾರಿಸಿ ನೀಡುವ ಮೂಲಕ ಉದ್ಯಮ ಆರಂಭಿಸಿದರು.
ಆರಂಭದಲ್ಲಿ ಸ್ನೇಹಿತರು ಮತ್ತು ಕುಟುಂಬದವರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಬಳಿಕ ಬೆಂಗಳೂರಿನ ಓರ್ವ ನ್ಯೂಟ್ರಿಷನಿಸ್ಟ್ ವೆಲ್ಫೆಡ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಂಚಿಕೊಂಡರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಉದ್ಯಮಕ್ಕೆ ಮೊದಲ 100 ಗ್ರಾಹಕರು ಸಿಕ್ಕರು. ಆದರೆ ಉದ್ಯಮದ ಹಾದಿ ಅಷ್ಟು ಸುಲಭವಾಗಿರಲಿಲ್ಲ. 2026ರ ಆರಂಭದಲ್ಲಿ ಎಲ್ಪಿಜಿ ಗ್ಯಾಸ್ ಕೊರತೆಯಿಂದ ಅಡುಗೆ ಕಾರ್ಯಾಚರಣೆಗೆ ತೊಂದರೆಯಾಯಿತು. ಇದರಿಂದ ಮೆನು ಬದಲಾಯಿಸಬೇಕಾಯಿತು. ಪರಿಣಾಮ ಉದ್ಯಮದ ಬೆಳವಣಿಗೆಯ ವೇಗವೂ ಸ್ವಲ್ಪ ಕುಂಠಿತವಾಯಿತು.
ವೆಲ್ಫೆಡ್ನಲ್ಲಿ ಪ್ರತಿದಿನದ ಮನೆಯೂಟದ ರುಚಿಯ ಆಹಾರಕ್ಕೆ ಆದ್ಯತೆ ನೀಡಲಾಗುತ್ತದೆ. ದಾಲ್, ಆಲೂ ಗೋಬಿ, ಜೋಳದ ರೊಟ್ಟಿ, ಆದ್ರಕ್ ಚಿಕನ್, ಛೋಲೆ ಚಾಟ್ ಸೇರಿದಂತೆ ಹಲವು ಭಾರತೀಯ ಖಾದ್ಯಗಳು ಇಲ್ಲಿ ಲಭ್ಯವಿವೆ. ಪನೀರ್, ಟೋಫು, ಸೋಯಾ ಮತ್ತು ಚಿಕನ್ನಂತಹ ಪ್ರೋಟೀನ್ಯುಕ್ತ ಆಹಾರ ಪದಾರ್ಥಗಳನ್ನೂ ಮೆನುವಿನಲ್ಲಿ ಸೇರಿಸಲಾಗಿದೆ. ಇದರ ಜೊತೆಗೆ ಗ್ರಾಹಕರಿಗಾಗಿ ರೋಲ್ಗಳು, ಬಿರಿಯಾನಿ ಮತ್ತು ಇಂಡೋ-ಚೈನೀಸ್ ಖಾದ್ಯಗಳಂತಹ ವಿಶೇಷ ಆಯ್ಕೆಗಳೂ ಇವೆ.
ಗ್ರಾಹಕರಿಗಾಗಿ ವೆಲ್ಫೆಡ್ ಮೂರು ರೀತಿಯ ಮೀಲ್ ಸಬ್ಸ್ಕ್ರಿಪ್ಷನ್ ಪ್ಲಾನ್ಗಳನ್ನು ಪರಿಚಯಿಸಿದೆ.
- 3 ದಿನಗಳ ಟ್ರಯಲ್ ಪ್ಲಾನ್: ಪ್ರತಿ ಊಟಕ್ಕೆ ₹289. ಸೋಮವಾರದಿಂದ ಶನಿವಾರದವರೆಗೆ ಲಂಚ್ ಮತ್ತು ಡಿನ್ನರ್ ಆಯ್ಕೆ.
- 2 ವಾರಗಳ ಪ್ಲಾನ್: ಪ್ರತಿ ಊಟಕ್ಕೆ ₹279. ಲಂಚ್ ಮತ್ತು ಡಿನ್ನರ್ ಜೊತೆಗೆ ನ್ಯೂಟ್ರಿಷನಿಸ್ಟ್ ಮಾರ್ಗದರ್ಶನ.
- 1 ತಿಂಗಳ ಪ್ಲಾನ್: ಪ್ರತಿ ಊಟಕ್ಕೆ ₹269. ಲಂಚ್ ಮತ್ತು ಡಿನ್ನರ್ ಜೊತೆಗೆ ಉಚಿತ ಡೆಲಿವರಿ, ಪೌಷ್ಟಿಕಾಂಶ ತಜ್ಞರ ಸಲಹೆ ಹಾಗೂ ಬಳಸದ ಊಟವನ್ನು ಮುಂದಿನ ದಿನಗಳಿಗೆ ವರ್ಗಾಯಿಸುವ ಸೌಲಭ್ಯ.
ಈ ಎಲ್ಲಾ ಪ್ಲಾನ್ಗಳಲ್ಲಿ ಉಚಿತ ಡೆಲಿವರಿ ಸೌಲಭ್ಯವೂ ಇದೆ.
ಆಹಾರದ ಗುಣಮಟ್ಟದ ಜೊತೆಗೆ ಪ್ಯಾಕೇಜಿಂಗ್ ಬಗ್ಗೆಯೂ ದಂಪತಿ ವಿಶೇಷ ಕಾಳಜಿ ವಹಿಸಿದ್ದಾರೆ. ಸಾಮಾನ್ಯವಾಗಿ ಫುಡ್ ಡೆಲಿವರಿಯಲ್ಲಿ ಬಳಸುವ ಪ್ಲಾಸ್ಟಿಕ್ ಪ್ಯಾಕೇಜಿಂಗ್ ತಪ್ಪಿಸಲು ಮಹಾರಾಷ್ಟ್ರದ ತಯಾರಕರಿಂದ ಸ್ಟೀಲ್ ಲೈನಿಂಗ್ ಹೊಂದಿರುವ ಮರುಬಳಕೆ ಮಾಡಬಹುದಾದ ಊಟದ ಡಬ್ಬಿಗಳನ್ನು ತರಿಸಿಕೊಂಡಿದ್ದಾರೆ. ಗ್ರಾಹಕರ ಮನೆಗೆ ಊಟ ತಲುಪಿದಾಗ ಅದು ಮತ್ತೊಂದು ಸಾಮಾನ್ಯ ಫುಡ್ ಡೆಲಿವರಿ ಪ್ಯಾಕೇಜ್ನಂತೆ ಕಾಣಬಾರದು. ಬದಲಿಗೆ ಮನೆಯಲ್ಲಿ ಪ್ರೀತಿಯಿಂದ ಸಿದ್ಧಪಡಿಸಿದ ಊಟದ ಡಬ್ಬಿಯ ಅನುಭವ ನೀಡಬೇಕು ಎಂಬುದು ತಮ್ಮ ಉದ್ದೇಶ ಎಂದು ದಿಯಾ ಹೇಳಿದ್ದಾರೆ.
ವೆಲ್ಫೆಡ್ ಆರಂಭವಾದ ಮೊದಲ ವರ್ಷದಲ್ಲಿ ಸುಮಾರು ₹45 ಲಕ್ಷ ಆದಾಯ ಗಳಿಸಿತ್ತು. ಆದರೆ 2026ರ ಜನವರಿಯಿಂದ ಸೆಪ್ಟೆಂಬರ್ವರೆಗಿನ ಕೇವಲ 9 ತಿಂಗಳ ಅವಧಿಯಲ್ಲಿ ₹56 ಲಕ್ಷ ಆದಾಯ ದಾಖಲಿಸಿದೆ. ಈ ಮೂಲಕ ಮೊದಲ ವರ್ಷದ ಆದಾಯವನ್ನೂ ಮೀರಿಸಿದೆ. ಇದುವರೆಗೆ 1,500ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡಿರುವ ಸಂಸ್ಥೆ, 55 ಸಾವಿರಕ್ಕೂ ಅಧಿಕ ಊಟಗಳನ್ನು ಡೆಲಿವರಿ ಮಾಡಿದೆ. ಐಟಿ ಉದ್ಯೋಗದ ಒತ್ತಡದ ನಡುವೆ ಆರೋಗ್ಯಕರ ಮನೆಯೂಟದ ಅಗತ್ಯವನ್ನು ಗುರುತಿಸಿ ಆರಂಭಿಸಿದ ಈ ಉದ್ಯಮ ಇಂದು ಬೆಂಗಳೂರಿನ ಯಶಸ್ವಿ ಸ್ಟಾರ್ಟ್ಅಪ್ಗಳಲ್ಲಿ ಒಂದಾಗಿ ಬೆಳೆಯುತ್ತಿದೆ.