
ಬೆಂಗಳೂರು (ನ.13) ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನ ಪ್ರಶಾಂತಿ ಕುಟೀರಂನ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಯೋಗ, ಆಧ್ಯಾತ್ಮ, ಪ್ರಕೃತಿ ಚಿಕಿತ್ಸೆ ಮೂಲಕ ಕಳೆದ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವ ಬ್ಲಾಕ್‌ಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದ ಮೋದಿ, ಯೋಗ ವಿಚಾರದಲ್ಲಿ ಕರ್ನಾಟಕ ಪ್ರಮುಖ ಕೇಂದ್ರ ಬಿಂದು ಎಂದಿದ್ದಾರೆ. ಇದೇ ವೇಳೆ ಸಿನಿಮಾದ ಸೂಪರ್ ಸ್ಟಾರ್ ನಟ ಡಾ.ರಾಜ್ ಕುಮಾರ್ ಸಿನಿಮಾ ರಂಗದಲ್ಲಿದ್ದರೂ ಯೋಗಕ್ಕೆ ನೀಡಿದ ಕೊಡುಗೆ ಸ್ಮರಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಯೋಗದ ಅನುಭೂತಿ ಪಡೆಯುವ ಅವಕಾಶ ಲಭಿಸಿತು. ಕರ್ನಾಟಕದ ಈ ಭೂಮಿ ಹಲವು ವರ್ಷಗಳಿಂದ ಯೋಗದ ಕೇಂದ್ರ ಬಿಂದುವಾಗಿದೆ. ಯೋಗದ ಹಲವು ಸಂತರಿಗೆ ಜನ್ಮ ನೀಡಿದ ಪುಣ್ಯ ಭೂಮಿ ಇದು. ಕರ್ನಾಟಕ ಯೋಗ ಪರಂಪರೆಯನ್ನು ಸಮೃದ್ಧಿ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡ ಸಿನಿಮಾದ ಮಹಾನ್ ನಟ ಡಾ.ರಾಜ್‌ಕಮಾರ್ ನಮೆಗೆಲ್ಲಾ ಗೊತ್ತಿದೆ. ಡಾ.ರಾಜ್‌ಕುಮಾರ್ ಅವರಂತ ಯೋಗ ಪಟು ಇದೇ ಕರ್ನಾಟಕ ಮಣ್ಣಿನಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಡಾ.ರಾಜ್‌ಕುಮಾರ್ ನಟನೆ, ಸಿನಿಮಾ ಸೇರಿ ಕಲಾ ರಂಗದ ಜೊತೆಗೆ ಯೋಗ ಸೇವೆಯನ್ನು ಮಾಡಿದ್ದಾರೆ.
ಡಾ.ರಾಜ್ ಕುಮಾರ್ ಪ್ರತಿ ದಿನ ಯೋಗಾಭ್ಯಾಸ ಮಾಡುತ್ತಿದ್ದರು. ಯೋಗದ ಮೂಲಕ ತಮ್ಮ ಫಿಟ್ನೆಸ್ ಮಾತ್ರವಲ್ಲ ಆರೋಗ್ಯವನ್ನು ಕಾಪಾಡಿಕೊಂಡಿದ್ದರು. ಯೋಗ ಎಲ್ಲಾ ಆಸನಗಳನ್ನು ಕರಗತ ಮಾಡಿಕೊಂಡಿದ್ದ ಡಾ.ರಾಜ್ ಮಾದರಿಯಾಗಿದ್ದಾರೆ. ಸಾಮಾನ್ಯವಾಗಿ ಹೀರೋ ಸೇರಿದಂತೆ ನಟ ನಟಿಯರು ಜಿಮ್ ಮೂಲಕ ಫಿಟ್ನೆಸ್ ಕಾಪಾಡಿಕೊಳ್ಳುತ್ತಾರೆ. ಆದರೆ ಡಾ.ರಾಜ್ ಕುಮಾರ್ ಯೋಗದ ಮೂಲಕ ಫಿಟ್ನೆಸ್ ಕಾಪಾಡಿಕೊಂಡಿದ್ದರು.
ಇದೇ ಕರ್ನಾಟಕ ಪುಣ್ಯ ಭೂಮಿಯಲ್ಲಿ ಪ್ರಶಾಂತಿ ಕುಟೀರಂ ಯೋಗ, ಆಧ್ಯಾತ್ಮ, ಪ್ರಕೃತಿ ಚಿಕಿತ್ಸೆ ಮೂಲಕ ಸೇವೆ ಸಲ್ಲಿಸುತ್ತಿದೆ. ಇದೀಗ 50 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಲಕ್ಷಾಂತರ ಮಂದಿಗೆ ನೆರವಾಗಿದೆ. ಒಂದು ಸಣ್ಣ ಯೋಗ ಕೇಂದ್ರ ಇಂದು ಇಷ್ಟು ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿರುವುದು ನಮಗೆ ಹೆಮ್ಮೆಯಾಗಿದೆ. ಇದು ನಮಗೆಲ್ಲಾ ಒಂದು ಪ್ರೇರಣೆಯಾಗಿದೆ. ಇದೇ ವರ್ಷ ಹೆಚ್‌ವಿ ಶೇಷಾದ್ರಿ ಅವರ ಜನ್ಮಶತಮಾನವನ್ನು ಆಚರಿಸುತ್ತಿದ್ದೇವೆ. ಶೇಷಾದ್ರಿ ಅವರು ತಮ್ಮ ಇಡೀ ಜೀವನವನ್ನು ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರನಿರ್ಮಾಣಕ್ಕೆ ಮೀಸಲಿಟ್ಟಿದ್ದರು ಎಂದು ಮೋದಿ ಹೇಳಿದ್ದಾರೆ.
ಇಂದು ಬೆಳಗ್ಗೆ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಬಳಿಕ ಅನೇಕಲ್ ತಾಲೂಕಿನ ಜಿಗಣಿಯಲ್ಲಿರುವ ಪ್ರಶಾಂತಿ ಕುಟೀರಂನನ ಸುವರ್ಣಮಹೋತ್ಸವದಲ್ಲಿ ಪಾಲ್ಗೊಂಡರು. ಬಳಿಕ ಪ್ರಶಾಂತಿ ಕುಟೀರಂನಿಂದ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಪಿಂಕ್ ಲೈನ್ ಮೆಟ್ರೋಗೆ ಚಾಲನೆ ನೀಡಿದರು. ಇದಾದ ಬಳಿಕ ಪಿಂಕ್ ಲೈನ್ ಮೆಟ್ರೋದಲ್ಲಿ ಬೀಳೆಕಹಳ್ಳಿಗೆ ಪ್ರಯಾಣ ಮಾಡಿದ ಪ್ರಧಾನಿ ಮೋದಿ IIMB ಸಂಭಾಗಣದಲ್ಲಿ ಕರ್ನಾಟಕದ 12 ಜಿಲ್ಲೆಗಳ 14 ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಬರೋಬ್ಬರಿ 15,600 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.