
ಬೆಂಗಳೂರು (ಆ.31): ಸಿವಿಲ್ ವಿವಾದದಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸಿ ಕಾಂಪೌಂಡ್ ಕೆಡವಿದ ಆರೋಪ ಎದುರಿಸುತ್ತಿರುವ ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಕರ್ನಾಟಕ ಹೈಕೋರ್ಟ್ ಮತ್ತೆ ಕಟುವಾಗಿ ಟೀಕೆ ಮಾಡಿದೆ. ಖಾಸಗಿ ವ್ಯಕ್ತಿಯೊಬ್ಬರ ಸೂಚನೆಯ ಮೇರೆಗೆ ಸಿವಿಲ್ ವಿವಾದದಲ್ಲಿದ್ದ ಜಾಗದ ಕಾಂಪೌಂಡ್ ಅನ್ನು ಪೊಲೀಸರೇ ಖುದ್ದಾಗಿ ನಿಂತು ಕೆಡವಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠವು ವೈಟ್‌ಫೀಲ್ಡ್ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ವೈಟ್‌ಫೀಲ್ಡ್ ಠಾಣೆಯು ಈಗಾಗಲೇ ಇಂಥದ್ದೇ ಹಲವು ಪ್ರಕರಣಗಳಲ್ಲಿ ಕುಖ್ಯಾತಿ ಗಳಿಸಿದೆ. ಈ ಹಿಂದೆ ಹೈಕೋರ್ಟ್‌ನ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠವು ಈ ಠಾಣೆಯನ್ನು "ವೈಟ್‌ಫೀಲ್ಡ್ ಅಲ್ಲ, ಇದು ಡಾರ್ಕ್ ಫೀಲ್ಡ್ ಠಾಣೆ" ಎಂದು ಅಭಿಪ್ರಾಯಪಟ್ಟಿದ್ದನ್ನು ನ್ಯಾ. ಸೂರಜ್ ಗೋವಿಂದರಾಜ್ ಅವರ ಪೀಠವು ವಿಚಾರಣೆ ವೇಳೆ ಉಲ್ಲೇಖಿಸಿತು.
ಸಿವಿಲ್ ವಿವಾದಗಳಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಪೊಲೀಸರು ಇದೇ ರೀತಿಯ ಚಾಳಿಯನ್ನು ಮುಂದುವರೆಸಿದರೆ, ಅವರ ವಿರುದ್ಧವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೀಠ ಎಚ್ಚರಿಸಿದೆ. ಸಿವಿಲ್ ವ್ಯಾಜ್ಯಗಳಲ್ಲಿ ಮೂಗು ತೂರಿಸುವ ಮತ್ತು ಕಾನೂನು ಕೈಗೆತ್ತಿಕೊಳ್ಳುವ ಪೊಲೀಸ್ ಸಿಬ್ಬಂದಿ ವಿರುದ್ಧ ಗೃಹ ಇಲಾಖೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DGP) ಅಗತ್ಯ ವಿಚಾರಣೆ ನಡೆಸಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೀಠ ಸೂಚನೆ ನೀಡಿದೆ.
ಠಾಣೆಯ ಸಿಸಿಟಿವಿ ಕ್ಯಾಮೆರಾಗಳು ಸದಾ ಕಾರ್ಯನಿರ್ವಹಿಸುವಂತೆ ಈ ಹಿಂದೆ ಕೋರ್ಟ್ ಸೂಚನೆ ನೀಡಿತ್ತು. ಆದರೂ "ಯುಪಿಎಸ್ (UPS) ಕೆಲಸ ಮಾಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿ ಬರೋಬ್ಬರಿ ಒಂದೂವರೆ ವರ್ಷಗಳ ಕಾಲ ಸಿಸಿಟಿವಿಗಳು ಬಂದ್ ಆಗಿದ್ದವು" ಎಂದು ಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಅಂತಿಮವಾಗಿ, ಸಿವಿಲ್ ವಿವಾದಗಳಲ್ಲಿ ಹಸ್ತಕ್ಷೇಪ ಮಾಡದಂತೆ ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಿದ ಹೈಕೋರ್ಟ್, ಎರಡೂ ಪಕ್ಷಕಾರರು ತಮ್ಮ ವ್ಯಾಜ್ಯವನ್ನು ಸಿವಿಲ್ ಕೋರ್ಟ್ ಮೂಲಕವೇ ಬಗೆಹರಿಸಿಕೊಳ್ಳುವಂತೆ ಸೂಚಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.