ಮುಂಬೈ-ಅಹಮದಾಬಾದ್‌ ಬುಲೆಟ್‌ ಟ್ರೇನ್‌ ಪ್ರಾಜೆಕ್ಟ್‌ನಲ್ಲಿ ₹5400 ಕೋಟಿ ಒಪ್ಪಂದ ಪಡೆದುಕೊಂಡ ಬೆಂಗಳೂರಿನ BEML

Published : Sep 21, 2026, 09:25 PM IST
Bemel Bengaluru

ಸಾರಾಂಶ

ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಗಾಗಿ 16 ಬುಲೆಟ್ ರೈಲುಗಳನ್ನು ತಯಾರಿಸಲು ಬೆಂಗಳೂರಿನ ಬಿಇಎಂಎಲ್ (BEML) 5,400 ಕೋಟಿ ರೂ.ಗಳ ಬೃಹತ್ ಗುತ್ತಿಗೆ ಪಡೆದಿದೆ. ಈ ಸುದ್ದಿಯಿಂದ ಷೇರು ಮಾರುಕಟ್ಟೆಯಲ್ಲಿ ಸಂಸ್ಥೆಯ ಮೌಲ್ಯ ಶೇ.6ರಷ್ಟು ಏರಿಕೆಯಾಗಿದೆ.

ಬೆಂಗಳೂರು (ಸೆ.21): ಭಾರತದ ಮಹತ್ವಾಕಾಂಕ್ಷೆಯ 'ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು' (MAHSR) ಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಸಾರ್ವಜನಿಕ ವಲಯದ ಸಂಸ್ಥೆ 'ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್' (BEML - ಬಿಇಎಂಎಲ್) ಬೃಹತ್ ಗುತ್ತಿಗೆಯನ್ನು ತನ್ನದಾಗಿಸಿಕೊಂಡಿದೆ. ಯೋಜನೆಗೆ ಅಗತ್ಯವಿರುವ ಹೆಚ್ಚುವರಿ 16 ಹೈಸ್ಪೀಡ್ ಟ್ರೇನ್‌ಸೆಟ್‌ಗಳನ್ನು (Bullet Trains) ತಯಾರಿಸಿ ಪೂರೈಸಲು ಹಾಗೂ ಅವುಗಳ ನಿರ್ವಹಣೆಗಾಗಿ 5,400 ಕೋಟಿ ರೂಪಾಯಿ ಮೌಲ್ಯದ ಭಾರಿ ಆರ್ಡರ್‌ಅನ್ನು ಬೆಮೆಲ್‌ ಪಡೆದುಕೊಂಡಿದೆ.

ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ಗೆ (NSE) ಸಲ್ಲಿಸಿದ ಅಧಿಕೃತ ಪ್ರಕಟಣೆಯಲ್ಲಿ ಈ ಮಾಹಿತಿಯನ್ನು ನೀಡಿರುವ ಬೆಮೆಲ್‌, "ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ಗಾಗಿ ಅಗತ್ಯವಿರುವ ಹೈಸ್ಪೀಡ್ ರೋಲಿಂಗ್ ಸ್ಟಾಕ್ ಪೂರೈಕೆ, ನಿರ್ವಹಣೆ ಹಾಗೂ ಸಂಬಂಧಿತ ಕಾಮಗಾರಿಗಳಿಗಾಗಿ 'ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್' (NHSRCL) ಸಂಸ್ಥೆಯಿಂದ ಈ ಬೃಹತ್ ಆರ್ಡರ್ ಲಭಿಸಿದೆ" ಎಂದು ತಿಳಿಸಿದೆ.

ಷೇರು ಮಾರುಕಟ್ಟೆಯಲ್ಲಿ ಭಾರಿ ಜಿಗಿತ ಮತ್ತು ಉತ್ಪಾದನಾ ಯೋಜನೆ

ಬಿಇಎಂಎಲ್ ಈ ಬೃಹತ್ ಆದೇಶವನ್ನು ಪಡೆದುಕೊಂಡ ಸುದ್ದಿ ಹೊರಬಿದ್ದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಸಂಸ್ಥೆಯ ಷೇರುಗಳ ಮೌಲ್ಯ ಶೇಕಡಾ 6 ಕ್ಕಿಂತ ಹೆಚ್ಚು ಜಿಗಿತ ಕಂಡಿದೆ. ಶುಕ್ರವಾರ ಸಾಯಂಕಾಲದ ವೇಳೆಗೆ ಬಿಇಎಂಎಲ್ ಷೇರು ಬೆಲೆ 2,013 ರೂಪಾಯಿಯಿಂದ 2,135 ರೂಪಾಯಿಗೆ ಏರಿಕೆಯಾಗಿದೆ.

ಆರ್ಡರ್‌ ಪ್ರಕಾರ, ಭಾರತದ ಮೊದಲ ಬುಲೆಟ್ ರೈಲು ಯೋಜನೆಗಾಗಿ ಬೆಮೆಲ್‌ ಕನಿಷ್ಠ 16 ಟ್ರೇನ್‌ಸೆಟ್‌ಗಳನ್ನು ತಯಾರಿಸಲಿದೆ. ಇವುಗಳನ್ನು ಬೆಮೆಲ್‌ನ ಬೆಂಗಳೂರಿನ ತಿಪ್ಪಸಂದ್ರದಲ್ಲಿರುವ ಆ Aditya ಘಟಕದಲ್ಲಿ ಪ್ರಸ್ತುತ ತಯಾರಾಗುತ್ತಿರುವ 'B-28' (ಬಿ-28) ಹೆಸರಿನ ಎರಡು ಟ್ರೇನ್‌ಸೆಟ್‌ಗಳ ಜೊತೆಗೆ ಹೆಚ್ಚುವರಿಯಾಗಿ ಪೂರೈಸಲಾಗುತ್ತದೆ.

"ಈ 16 ನೂತನ ಟ್ರೇನ್‌ಸೆಟ್‌ಗಳನ್ನು ಸಹ ಬಿ-28 ಟ್ರೇನ್‌ಸೆಟ್‌ಗಳಿಗೆ ಬಳಸಲಾದ ಸ್ವದೇಶಿ ವಿನ್ಯಾಸ ಹಾಗೂ ತಂತ್ರಜ್ಞಾನವನ್ನೇ ಬಳಸಿ ತಯಾರಿಸಲಾಗುತ್ತದೆ. ಇವುಗಳನ್ನು ಸಹ ಬೆಂಗಳೂರಿನ ಘಟಕದಲ್ಲೇ ಉತ್ಪಾದಿಸುವ ಸಾಧ್ಯತೆಯಿದೆ," ಎಂದು ಮೂಲಗಳು ತಿಳಿಸಿವೆ. ಆದರೆ, ಈ ನೂತನ ಟ್ರೇನ್‌ಸೆಟ್‌ಗಳ ಅಂತಿಮ ವಿನ್ಯಾಸ ಇನ್ನೂ ಅಂತಿಮಗೊಳ್ಳಬೇಕಿದೆ.

ಭೋಪಾಲ್ ಘಟಕಕ್ಕೂ ಜವಾಬ್ದಾರಿ ಹಂಚಿಕೆ ಸಾಧ್ಯತೆ

ರೈಲುಗಳ ಪೂರೈಕೆಗೆ ಇನ್ನು ನಿರ್ದಿಷ್ಟ ಕಾಲಮಿತಿಯನ್ನು ಪ್ರಕಟಿಸಿಲ್ಲವಾದರೂ, ಗುತ್ತಿಗೆಯ ಕಟ್ಟುನಿಟ್ಟಿನ ವೇಳಾಪಟ್ಟಿಯನ್ನು ಆಧರಿಸಿ ಬೆಮೆಲ್‌ ತನ್ನ ಉತ್ಪಾದನೆಯ ಕೆಲ ಭಾಗವನ್ನು ಮಧ್ಯಪ್ರದೇಶದ 'ಭೋಪಾಲ್'ನಲ್ಲಿ 900 ಕೋಟಿ ರೂಪಾಯಿ ಹೂಡಿಕೆಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಘಟಕಕ್ಕೆ ವರ್ಗಾಯಿಸುವ ಸಾಧ್ಯತೆಯೂ ಇದೆ. ವಿತರಣಾ ವೇಳಾಪಟ್ಟಿಯನ್ನು (Delivery Schedule) ಪರಿಶೀಲಿಸಿ ಬೆಮೆಲ್‌ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ಮಾರ್ಚ್ 2027ಕ್ಕೆ 'B-28' ಟ್ರೇನ್‌ಸೆಟ್ ಹೊರಬರಲು ಸಿದ್ಧ

ಗರಿಷ್ಠ ಗಂಟೆಗೆ 280 ಕಿ.ಮೀ ವಿನ್ಯಾಸಿತ ವೇಗ (Design Speed) ಹಾಗೂ ಗಂಟೆಗೆ 250 ಕಿ.ಮೀ ಕಾರ್ಯಾಚರಣೆಯ ವೇಗ (Operational Speed) ಹೊಂದಿರುವ 'ಬಿ-28' ಟ್ರೇನ್‌ಸೆಟ್‌ಗಳನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಮತ್ತು ಬೆಮೆಲ್‌ ಜಂಟಿಯಾಗಿ ವಿನ್ಯಾಸಗೊಳಿಸಿವೆ. 866.9 ಕೋಟಿ ರೂಪಾಯಿ ಮೌಲ್ಯದ ಒಪ್ಪಂದದ ಭಾಗವಾಗಿ ನಿರ್ಮಾಣವಾಗುತ್ತಿರುವ ಈ ಎರಡು ಟ್ರೇನ್‌ಸೆಟ್‌ಗಳು 2027ರ ಮಾರ್ಚ್ ವೇಳೆಗೆ ಸಿದ್ಧಗೊಂಡು ಟ್ರ್ಯಾಕ್‌ಗೆ ಇಳಿಯಲಿವೆ.

ದಕ್ಷಿಣ ಭಾರತಕ್ಕೂ ವಿಸ್ತರಿಸಲಿದೆ ಹೈಸ್ಪೀಡ್ ರೈಲು ಜಾಲ

ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ನ ಮೊದಲ ಹಂತವು ಮುಂದಿನ ವರ್ಷ ಲೋಕಾರ್ಪಣೆಗೆ ಸಿದ್ಧಗೊಳ್ಳುತ್ತಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ದೇಶಾದ್ಯಂತ ಒಟ್ಟು 7,000 ಕಿಲೋಮೀಟರ್ ಉದ್ದದ ಹೈಸ್ಪೀಡ್ ರೈಲು ಮಾರ್ಗಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ಚೆನ್ನೈ ಹಾಗೂ ಹೈದರಾಬಾದ್‌ಗೆ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಸಂಪರ್ಕಿಸುವ ಬೃಹತ್ ಯೋಜನೆ ಸಾಕಾರಗೊಳ್ಳಲಿದೆ.

PREV
Read more Articles on
click me!

Recommended Stories

KPSC ಹಗರಣವನ್ನು ಎಸ್ಐಟಿಯಿಂದ ಸಿಬಿಐಗೆ ಹಸ್ತಾಂತರ ಅಷ್ಟು ಸುಲಭವಲ್ಲವೆ? ಎನು ಹೇಳುತ್ತದೆ ಕಾನೂನು!
ಬೆಂಗಳೂರಿನ ವಿಜಯನಗರದ ಮಾರುತಿ ಮೆಡಿಕಲ್ಸ್‌ ಸೇರಿ 24 ಡ್ರಗ್‌ ಸಪ್ಲೈಯರ್‌ಗಳ ಲೈಸೆನ್ಸ್‌ ರದ್ದು ಮಾಡಿದ ಸರ್ಕಾರ