ಇಂಥವರ ಕಂಡರೆ ಎಚ್ಚರ: ಬೆಂಗಳೂರಿನ ಇಂದಿರಾನಗರದಲ್ಲಿ ನಡೆದ ಕರಾಳ ಅನುಭವ ಹಂಚಿಕೊಂಡ ಯುವತಿ

Published : Jul 18, 2025, 10:09 AM ISTUpdated : Jul 18, 2025, 10:11 AM IST
Beggars with Idols Harass People in Bengaluru

ಸಾರಾಂಶ

ಬೆಂಗಳೂರಿನ (Bengaluru) ಇಂದಿರಾನಗರದಲ್ಲಿ(Indiranagar) ಯುವತಿಯೊಬ್ಬರಿಗೆ ಮೂರ್ತಿ ಹಿಡಿದು ಭಿಕ್ಷೆ ಬೇಡುವವರಿಂದ ಕಿರುಕುಳ. ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪೊಲೀಸರು ಸ್ಪಂದಿಸಿದ್ದಾರೆ.

ಮಹಾನಗರಗಳಲ್ಲಿ ಮಗುವನ್ನು ಕಂಕುಳಲ್ಲಿ ತೂಗು ಹಾಕಿಕೊಂಡು ಭಿಕ್ಷೆ ಬೇಡುವವರ ಹಾವಳಿ ಇತ್ತೀಚೆಗೆ ಹೆಚ್ಚಾಗಿದೆ. ಇನ್ನೂ ಕೆಲವರು ದೇವರ ಮೂರ್ತಿಗಳನ್ನು ತಲೆಮೇಲೆ ಇರಿಸಿಕೊಂಡು ಭಾವನಾತ್ಮಕವಾಗಿ ಜನರ ಕತ್ತು ಕುಯ್ಯುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿಯ ಘಟನೆಯೊಂದನ್ನು ಯುವತಿಯೊಬ್ಬರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ.

shreyadiary ಎಂಬ ಇನ್ಸ್ಟಾಖಾತೆಯನ್ನು ಹೊಂದಿರುವ ಶ್ರೇಯಾ ಎಂಬುವವರು ಬೆಂಗಳೂರಿನ ಇಂದಿರಾನಗರದಲ್ಲಿ ಈ ಮೂರ್ತಿಗಳನ್ನು ಹೊತ್ತುಕೊಂಡು ಭಿಕ್ಷಾಟನೆ ಮಾಡುವವರಿಂದ ತಮಗಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅನೇಕರು ದನಿಗೂಡಿಸಿದ್ದು ತಮಗೂ ಇಂತಹ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ. ಜುಲೈ 14ರಂದು ಇಂದಿರಾನಗರದ ಚಿನ್ ಲುಂಗ್ ಬ್ರೆವರಿ ಬಳಿ ಮಧ್ಯಾಹ್ನ ಊಟಕ್ಕೆಂದು ಹೋಗಿದ್ದಾಗ ಈ ಭಯಾನಕ ಅನುಭವ ಆಗಿದೆ ಎಂದು ಯುವತಿ ಹೇಳಿಕೊಂಡಿದ್ದಾರೆ.

ಇಂದು ಜುಲೈ 14ರಂದು ಇಂದಿರಾನಗರದ ಚಿನ್ ಲಂಗ್ ಬ್ರೆವರಿಯಲ್ಲಿ ಸ್ನೇಹಿತರೊಂದಿಗೆ ಊಟಕ್ಕೆ ಹೊರಗೆ ಹೋಗಿದ್ದಾಗ ಅಲ್ಲಿ ಒಂದು ಗೊಂದಲಮಯ ಮತ್ತು ಆಘಾತಕಾರಿ ಘಟನೆ ನಡೆಯಿತು. ನಾವು ಹೊರಗೆ ಇಳಿಯುತ್ತಿದ್ದಂತೆ ದೇವರ ವಿಗ್ರಹಗಳನ್ನು ಹಿಡಿದಿದ್ದ ಮಹಿಳೆಯರ ಗುಂಪೊಂದು ಆಕ್ರಮಣಕಾರಿಯಾಗಿ ನಮ್ಮನ್ನು ಸುತ್ತುವರೆದು ದೇವರ ಹೆಸರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟರು.

ನಾವು ಅವರ ಮಾತನ್ನು ನಿರಾಕರಿಸಿ ದೂರ ಹೋಗಲು ಪ್ರಯತ್ನಿಸಿದಾಗ, ಅವರಲ್ಲಿ ಒಬ್ಬರು ನನ್ನ ಶರ್ಟ್ ಅನ್ನು ಹಿಂದಿನಿಂದ ಎಳೆದರು, ಅವರು ಎಳೆದಾಡಿದ ರಭಸಕ್ಕೆ ನಾನು ಕೆಳಗೆ ಬೀಳುವಂತಾಗಿದ್ದೆ. ನಾವು ಹಣ ನೀಡುವುದಿಲ್ಲ ಎಂದು ನಿರಾಕರಿಸಿದ ಮೇಲೂ ಅವರು ನಮ್ಮ ನಿರಾಕರಣೆಯ ಹೊರತಾಗಿಯೂ, ಅವರು ನಮ್ಮನ್ನು ಹಿಂಬಾಲಿಸುತ್ತಲೇ ಇದ್ದರು. ಬರೀ ಇಷ್ಟೇ ಅಲ್ಲ, ಅವರು ನಮಗೆ ಅಪಘಾತವಾಗಲಿ ಕುರುಡುತನ ಬರಲಿ, ಜೀವನ ನಾಶವಾಗಲಿ ಹೀಗೆ ಭಯಾನಕವಾಗಿ ನಮ್ಮನ್ನು ಶಪಿಸುತ್ತಿದ್ದರು.

ಇವರ ಹಾವಳಿ ತಾಳಲಾಗದೇ ನಮ್ಮನ್ನು ಒಂಟಿಯಾಗಿ ಬಿಡಲಿ ಎಂಬ ಉದ್ದೇಶದಿಂದ ನಾವು ಕೊನೆಗೂ 200 ರೂಪಾಯಿ ಕೊಟ್ಟೆವು. ಆದರೆ ಆಕೆ 500 ರೂಪಾಯಿಗೆ ಡಿಮ್ಯಾಂಡ್ ಮಾಡಿದಳು, ಒಂದು ಆಚರಣೆಗೆ 500 ರೂಪಾಯಿ ಬೇಕೇಬೇಕು ಎಂದು ಆಕೆ ಪಟ್ಟು ಹಿಡಿದಳು. ಇದಕ್ಕೆ ನಾವು ನಿರಾಕರಿಸಿದಾಗ ಅವಳು ನಮ್ಮನ್ನು ತಳ್ಳಿದಳು, ಹಣವನ್ನು ಬಾಯಿಗೆ ತುರುಕಿ, ಚಾಟಿ ಬೀಸುತ್ತಾ, ನಮ್ಮನ್ನು ಮತ್ತಷ್ಟು ಬೆದರಿಸಿದಳು.

ಇವರಲ್ಲಿ ಒಬ್ಬಳು ಮಹಿಳೆ ಮಗುವನ್ನು ಎತ್ತಿಕೊಂಡಿದ್ದಳು. ಆದರೆ ಆ ಮಗು ಅವಳದೋ ಅಥವಾ ಸಹಾನೂಭೂತಿಗಾಗಿ ಬೇರೆ ಯಾರದ್ದೋ ಮಕ್ಕಳನ್ನು ಎತ್ತಿಕೊಂಡು ಬಂದಿದ್ದಾರೋ ತಿಳಿಯದು. ಕೆಲವು ಕ್ಷಣಗಳ ನಂತರ, ಅದೇ ಗುಂಪು ಹತ್ತಿರದ ರಸ್ತೆಯಲ್ಲಿ ಮತ್ತೊಂದು ಕುಟುಂಬಕ್ಕೆ ಕಿರುಕುಳ ನೀಡುತ್ತಿರುವುದನ್ನು ನಾವು ನೋಡಿದ್ದೇವೆ. ಹೀಗಾಗಿ ಜನರಿಗೆ ಈ ಗುಂಪಿನ ಬಗ್ಗೆ ಜಾಗೃತಿ ಮೂಡಿಸಲು ನಾವು ವೀಡಿಯೊವನ್ನು ರೆಕಾರ್ಡ್ ಮಾಡಿದೆವು ಎಂದು ಯುವತಿ ಹೇಳಿಕೊಂಡಿದ್ದಾರೆ.

ಇದು ಹಣದ ಬಗ್ಗೆ ಅಲ್ಲ, ಆದರೆ ಅವರು ನೀಡುವ ಕಿರುಕುಳ ಅವವರು ಹಾಕುವ ಶಾಪದಿಂದ ನಿಮಗಾಗುವ ಭಯ, ಅಸಹಾಯಕತೆ ಮತ್ತು ಭಾವನಾತ್ಮಕ ಆಘಾತದ ಬಗ್ಗೆ. ಈ ರೀತಿಯ ಬೆದರಿಕೆ ಹಗಲು ಹೊತ್ತಿನಲ್ಲಿ, ಸಾರ್ವಜನಿಕ ರಸ್ತೆಗಳಲ್ಲಿ ಮತ್ತು ಬಹುಶಃ ಬೆಂಗಳೂರಿನ ಹಲವಾರು ಭಾಗಗಳಲ್ಲಿ ನಡೆಯುತ್ತಿದೆ ಎಂದು ಯೋಚಿಸುವುದ್ದಕ್ಕೆ ಭಯ ಆಗ್ತಿದೆ. ನಾವು ಇದನ್ನು ಜಾಗೃತಿ ಮೂಡಿಸಲು ಹಾಕಿದ್ದು, ಬೆಂಗಳೂರು ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಲು ಹಂಚಿಕೊಳ್ಳುತ್ತಿದ್ದೇವೆ. ನಮಗಾದ ಅನುಭವ ಬೇರೆ ಯಾರಿಗೂ ಆಗದಿರಲಿ, ದಯವಿಟ್ಟು ಜಾಗರೂಕರಾಗಿರಿ ಮತ್ತು ಇಂತಹ ಕಿರುಕುಳದ ವಿರುದ್ಧ ಒಟ್ಟಾಗಿ ನಿಲ್ಲೋಣ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್‌ಗೆ ಬೆಂಗಳೂರು ಪೊಲೀಸರು ಸ್ಪಂದಿಸಿದ್ದು, ಇಂತಹ ಸಂದರ್ಭಗಳಲ್ಲಿ 112 ಕ್ಕೆ ಕರೆ ಮಾಡಿ ವಿಚಾರ ತಿಳಿಸಿ, ನಮ್ಮ ತಂಡ ಸ್ಥಳಕ್ಕೆ ಹೊಯ್ಸಳ ವಾಹನವನ್ನು ಕಳುಹಿಸುತ್ತದೆ. ಹಾಗೂ ಅಗತ್ಯ ಕ್ರಮ ಕೈಗೊಳ್ಳುವುದು ಎಂದು ಪ್ರತಿಕ್ರಿಯಿಸಿದೆ. ಹಾಗೆಯೇ ಅನೇಕರು ತಮಗಾದ ಅನುಭವನ್ನು ಹಂಚಿಕೊಂಡಿದ್ದಾರೆ. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನನಗೂ ಇದೇ ಆಯಿತು. ಅವರು 500 ಚಿಲ್ಲರೆ ಹಣ ಕೊಡುವುದಾಗಿ ಹೇಳಿ ನೋಟನ್ನು ಬಾಯಿಗೆ ತುರುಕಿಕೊಂಡರು, ಎರಡನೇ ಯೋಚನೆ ಮಾಡದೆ, ನಾನು ಅವನಿಗೆ ಬಾರಿಸಿ ಅವನು ನನಗೆ ಹಣ ವಾಪಸ್ ಕೊಡುವಂತೆ ಮಾಡಿದೆ. ಆಗ ನಾನು ತಿಂಗಳಿಗೆ ಕೇವಲ 15 ಸಾವಿರ ಸಂಪಾದಿಸುತ್ತಿದ್ದೆ ಎಂದು ಒಬ್ಬರು ತಮಗಾದ ಅನುಭವ ಹೇಳಿಕೊಂಡಿದ್ದಾರೆ. ಇಂತಹವರಿಗೆಲ್ಲಾ ಪೆಪ್ಪರ್ ಸ್ಪ್ರೇ ಬೆಸ್ಟ್ ಮದ್ದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು ಕಬ್ಬನ್ ಪಾರ್ಕ್‌ನಲ್ಲಿ ನನಗೆ ಇದೇ ರೀತಿಯ ಅನುಭವ ಆಗಿದೆ ಎಂದು ಹೇಳಿಕೊಂಡಿದ್ದಾರೆ.
 

 

PREV
Read more Articles on
click me!

Recommended Stories

Bengaluru: ಲೈಂ*ಗಿಕತೆಗೆ ಸಹಕರಿಸದ 34 ವರ್ಷದ ಮಹಿಳಾ ಟೆಕ್ಕಿಯನ್ನು ಕೊಂದ ನೆರೆಮನೆಯ 18ರ ಯುವಕ
ದಿನಕ್ಕೆರಡು ಬಾರಿ ಚಿಕನ್‌ ರೈಸ್‌: ಬೆಂಗಳೂರು ಬೀದಿನಾಯಿಗಳ ಶೆಲ್ಟರ್‌ಗಾಗಿ ವಾರ್ಷಿಕ ₹18 ಕೋಟಿ ವೆಚ್ಚ!