ಸಿದ್ದರಾಮಯ್ಯ ಆಪ್ತ ರಾಜಣ್ಣಗೆ ಮುಖಭಂಗ; ಎಸ್.ರವಿಗೆ ಒಲಿದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಪಟ್ಟ

Published : Sep 10, 2026, 06:12 PM IST
kn Rajanna

ಸಾರಾಂಶ

ರಾಜ್ಯ ಸಹಕಾರ ಕ್ಷೇತ್ರದ ಅತ್ಯುನ್ನತ ಸಂಸ್ಥೆ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ (Apex Bank) ಅಧ್ಯಕ್ಷ ಗಾದಿಯ ಜಿದ್ದಾಜಿದ್ದಿನ ಕದನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಂತ್ರ ಫಲಿಸಿದೆ. ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟು ಶತಾಯಗತಾಯ ಪ್ರಯತ್ನ ನಡೆಸಿದ್ದ ಸಿದ್ದರಾಮಯ್ಯರ ಆಪ್ತ, ಮಾಜಿ ಸಚಿವ ಕೆ.ಎನ್. ರಾಜಣ್ಣಗೆ ತೀವ್ರ ಹಿನ್ನಡೆಯಾಗಿದೆ.

ಬೆಂಗಳೂರು: ರಾಜ್ಯ ಸಹಕಾರ ಕ್ಷೇತ್ರದ ಅತ್ಯುನ್ನತ ಸಂಸ್ಥೆ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ (Apex Bank) ಅಧ್ಯಕ್ಷ ಗಾದಿಯ ಜಿದ್ದಾಜಿದ್ದಿನ ಕದನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಂತ್ರ ಫಲಿಸಿದೆ. ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟು ಶತಾಯಗತಾಯ ಪ್ರಯತ್ನ ನಡೆಸಿದ್ದ ಸಿದ್ದರಾಮಯ್ಯರ ಆಪ್ತ, ಮಾಜಿ ಸಚಿವ ಕೆ.ಎನ್. ರಾಜಣ್ಣಗೆ ತೀವ್ರ ಹಿನ್ನಡೆಯಾಗಿದ್ದು, ಡಿ.ಕೆ. ಶಿವಕುಮಾರ್ ಬೆಂಬಲಿತ ಎಸ್. ರವಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಪಟ್ಟ ಒಲಿದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಶರಣಗೌಡ ಪಾಟೀಲ್ ಬಯ್ಯಾಪುರ ಆಯ್ಕೆಯಾಗಿದ್ದಾರೆ.

ರಾಜಣ್ಣ ದೆಹಲಿ ಯಾತ್ರೆ ವಿಫಲ

ಸಚಿವ ಸ್ಥಾನದಿಂದ ವಂಚಿತರಾಗಿದ್ದ ಕೆ.ಎನ್.ರಾಜಣ್ಣಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಲು ಸಿದ್ದರಾಮಯ್ಯ ಬಣ ಯತ್ನಿಸಿತ್ತು. ಇದಕ್ಕಾಗಿ ರಾಜಣ್ಣ ಖುದ್ದು ದೆಹಲಿಗೆ ತೆರಳಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ತೀವ್ರ ಲಾಬಿ ನಡೆಸಿದ್ದರು. ಪೂರ್ಣಾವಧಿಗೆ ಸಿಗದಿದ್ದರೂ ಕನಿಷ್ಠಪಕ್ಷ ಅಧಿಕಾರ ಹಂಚಿಕೆ ಸೂತ್ರದ (ಟರ್ಮ್ ಶೇರಿಂಗ್) ಅಡಿಯಲ್ಲಾದರೂ ಅಧ್ಯಕ್ಷ ಸ್ಥಾನ ಪಡೆಯಬೇಕೆಂದು ರಾಜಣ್ಣ ಹವಣಿಸಿದ್ದರು. ಆದರೆ ಹೈಕಮಾಂಡ್ ಮಟ್ಟದಲ್ಲಿ ಡಿಕೆಶಿ ಹೆಣೆದ ರಣತಂತ್ರದ ಮುಂದೆ ರಾಜಣ್ಣ ಅವರ ಎಲ್ಲಾ ಲೆಕ್ಕಾಚಾರಗಳು ಉಲ್ಟಾಪಲ್ಟಾ ಆಗಿವೆ. ಅಂತಿಮವಾಗಿ ಹೈಕಮಾಂಡ್ ಎಸ್.ರವಿ ಹೆಸರನ್ನಷ್ಟೇ ಅಂತಿಮಗೊಳಿಸುವ ಮೂಲಕ ರಾಜಣ್ಣಗೆ ಶಾಕ್ ನೀಡಿದೆ.

ಅಪೆಕ್ಸ್ ಬ್ಯಾಂಕ್‌ನಲ್ಲಿ ಕಾಂಗ್ರೆಸ್ ಸಂಖ್ಯಾಬಲ ಎಷ್ಟಿದೆ?

ಅಪೆಕ್ಸ್ ಬ್ಯಾಂಕ್‌ನಲ್ಲಿ ಒಟ್ಟು 21 ನಿರ್ದೇಶಕರ ಸ್ಥಾನಗಳಿವೆ. ಬಾಗಲಕೋಟೆ ಜಿಲ್ಲೆಯ ಒಂದು ಸ್ಥಾನದ ಚುನಾವಣೆ ಬಾಕಿ ಉಳಿದಿದ್ದು, 20 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಸದ್ಯ ಆಯ್ಕೆಯಾಗಿರುವ ನಿರ್ದೇಶಕರ ಪೈಕಿಯಲ್ಲಿ ಕಾಂಗ್ರೆಸ್ ಬೆಂಬಲಿತರು 15 ಮಂದಿ, ಬಿಜೆಪಿ-ಜೆಡಿಎಸ್ ಬೆಂಬಲಿತರು 3 ಮಂದಿ ಇದ್ದಾರೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವಿದ್ದ ಹಿನ್ನೆಲೆಯಲ್ಲಿ ಪಕ್ಷದ ಆಂತರಿಕ ಬಣಗಳ ನಡುವಿನ ಹಗ್ಗಜಗ್ಗಾಟವೇ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕವಾಗಿತ್ತು.

ನೂತನ ಅಧ್ಯಕ್ಷ ಎಸ್.ರವಿ ಹೇಳಿದ್ದೇನು?

ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಎಸ್. ರವಿ, ನನ್ನನ್ನು ಅಧ್ಯಕ್ಷರನ್ನಾಗಿ ಹಾಗೂ ಶರಣಗೌಡ ಪಾಟೀಲ್ ಬಯ್ಯಾಪುರ ಅವರನ್ನು ಉಪಾಧ್ಯಕ್ಷರನ್ನಾಗಿ ಎಲ್ಲಾ ನಿರ್ದೇಶಕರು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಯಾವುದೇ ಲೋಪದೋಷಗಳಿಲ್ಲದೆ ಸುಗಮವಾಗಿ ಚುನಾವಣೆ ನಡೆದಿದೆ. ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಪೆಕ್ಸ್ ಬ್ಯಾಂಕ್ ರೈತರಿಗೆ ದೊಡ್ಡ ಆರ್ಥಿಕ ನೆರವು ನೀಡುವ ಪ್ರಮುಖ ಸಂಸ್ಥೆ. ಎಲ್ಲರ ನಂಬಿಕೆಯನ್ನು ಉಳಿಸಿಕೊಂಡು, ಎಲ್ಲರ ಸಹಕಾರ ಪಡೆದು ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂದರು.

PREV
Read more Articles on
click me!

Recommended Stories

KSP: ಖಾಕಿ ಪಡೆಯ ರಜೆ ಮತ್ತು ಕೆಲಸದ ರಹಸ್ಯ; ಇಲ್ಲಿದೆ ಕರ್ನಾಟಕ ಪೋಲಿಸ್ ಸೇವೆಯ ರಿಯಾಲಿಟಿ ಚೆಕ್!
ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ವಿಚಾರಣೆಗೆ ತೆರಳಿದ ಪೊಲೀಸರಿಗೆ ಪ್ರಜ್ವಲ್ ಅವಾಜ್, ನಾನ್ಯಾರು ಗೊತ್ತಾ? ಮಾಜಿ ಸಂಸದ