
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ ಕೊಡುಗೆಹಳ್ಳಿ, ಸ್ಕಂದ ನಗರ, ಮುನೇಶ್ವರ ಬ್ಲಾಕ್ ಸೇರಿದಂತೆ ಇತರೆ ಕಡೆಗಳಲ್ಲಿ ವಾಸವಿರುವ ನಿವಾಸಿಗಳಿಗೆ ವಾರದೊಳಗೆ ಕಟ್ಟಡಗಳನ್ನು ತೆರವುಗೊಳಿಸುವಂತೆ ಬಿಡಿಎ ನೋಟಿಸ್ ನೀಡಿದೆ.
ಈ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿರುವ ನಿವಾಸಿಗಳು ಖಾಸಗಿ ಭೂ ಮಾಲೀಕರಿಂದ ನಿವೇಶಗಳನ್ನು ಖರೀದಿ ಮಾಡಿದ್ದೇವೆ. ಸರಿಯಾಗಿ ಸರ್ವೆ ನಡೆಸದೆ ಏಕಾಏಕಿ ಕಟ್ಟಡಗಳನ್ನು ನೆಲಸಮಗೊಳಿಸುವುದಾಗಿ ಬಿಡಿಎ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಟ್ಟಡಗಳನ್ನು ತೆರವುಗೊಳಿಸುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಸ್ಕಂದನಗರ ಹಾಗೂ ಮುನೇಶ್ವರ ಬಡಾವಣೆಯ 120ಕ್ಕೂ ಹೆಚ್ಚು ಕಟ್ಟಡಗಳು ನೆಲಸಮ ಆಗುವ ಭೀತಿ ಎದುರಾಗಿದೆ. ಕೆಲ ಭೂಮಾಲೀಕರು, ಹಲವರಿಂದ ಹಣ ಪಡೆದು, ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಜೊತೆಗೆ ಬಿಡಿಎಯಿಂದಲೂ ಪರಿಹಾರ ಪಡೆದುಕೊಂಡಿದ್ದಾರೆ. ಇದರಿಂದ ನಿವೇಶನ ಖರೀದಿಸಿದವರು ಸದ್ಯ ಬೀದಿಗೆ ಬೀಳುವಂತ ಸ್ಥಿತಿಗೆ ಬಂದು ತಲುಪಿದ್ದೇವೆ ಎನ್ನುತ್ತಾರೆ ಸ್ಕಂದ ನಗರದಲ್ಲಿ ಕಳೆದ 20 ವರ್ಷಗಳಿಂದ ಮನೆಕಟ್ಟಿಕೊಂಡು ಜೀವನ ನಡೆಸುತ್ತಿರುವ ಕೆಲ ನಿವಾಸಿಗಳು.
ಇನ್ನು ಕೆಲವರು ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತಾಗಿದೆ. ಕೆಂಪೇಗೌಡ ಬಡಾವಣೆಗೆಂದು ಭೂಮಿಯನ್ನು ಗುರುತಿಸಿ ನೋಟಿಫಿಕೇಷನ್ ಮಾಡುವುದಕ್ಕೂ ಮೊದಲಿನಿಂದ ನಿವೇಶನಗಳನ್ನು ಖರೀದಿಸಿ ಇಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದೇವೆ. ಬಡಾವಣೆಯ ಬ್ಲಾಕ್ 1 ಸರ್ವೇ ನಂ 55/1 ಪಿ ಯಿಂದ 55/25ರವರೆಗೆ ಇರುವ ಮನೆಗಳಿಗೂ ಆತಂಕ ಶುರುವಾಗಿದೆ. ಇಲ್ಲಿರುವ ಒಂದೆರಡು ಮನೆಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನು ಗೋಮಾಳವೆಂದು ಗುರುತಿಸಲಾಗಿದೆ. ಬಿಡಿಎ ಸ್ಥಳ ಪರಿಶೀಲನೆ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದು ಯಾವುದೇ ಕಾರಣಕ್ಕೂ ಮನೆಗಳನ್ನು ನೆಲಸಮ ಮಾಡಲು ಬಿಡುವುದಿಲ್ಲ. ಸ್ಥಳೀಯ ನಿವಾಸಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ನಾಡಪ್ರಭು ಕೆಂಪೇಗೌಡ ಬಡಾವಣೆ ಬ್ಲಾಕ್ 1, 8 ಮತ್ತು 9ರ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವರುಣ್ ಅವರು, ಅಕ್ರಮವಾಗಿ ಬಿಡಿಎ ವ್ಯಾಪ್ತಿಯ ಸ್ವತ್ತಿನಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿರುವ ಎಲ್ಲರಿಗೂ ನೋಟಿಸ್ ಕೊಡುತ್ತಿದ್ದೇವೆ. ಒಂದುವೇಳೆ ಒತ್ತುವರಿ ಮಾಡದೆ ಕಟ್ಟಡ ನಿರ್ಮಿಸಿದ್ದರೆ, ನೋಟಿಸ್ ತಲುಪಿದ ಒಂದು ವಾರದೊಳಗೆ ಬಿಡಿಎಯಿಂದ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಪಡೆದಿರುವ ದಾಖಲೆಗಳೊಂದಿಗೆ ಲಿಖಿತ ಹೇಳಿಕೆ ಸಲ್ಲಿಸಬೇಕು.
7 ದಿನಗಳೊಳಗೆ ಸ್ವತ್ತಿನ ಮಾಲೀಕರಿಂದ ಯಾವುದೇ ರೀತಿಯ ಲಿಖಿತ ಉತ್ತರ ಬರದಿದ್ದರೆ ನಿಮ್ಮ ಹೇಳಿಕೆ ಏನೂ ಇಲ್ಲವೆಂದು ಪರಿಗಣಿಸಲಾಗುವುದು. ಜೊತೆಗೆ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವುದು ಖಚಿತವಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದೇವೆ. ಆದ್ದರಿಂದ ನೋಟಿಸ್ ಪಡೆದಿರುವವರು ಸೂಕ್ತ ದಾಖಲೆಗಳೊಂದಿಗೆ ಬಿಡಿಎಗೆ ಲಿಖಿತ ಹೇಳಿಕೆಯನ್ನು ವಾರದೊಳಗೆ ಸಲ್ಲಿಸಬೇಕು ಎಂದು ತಿಳಿಸಿದರು.