ಬೆಂಗಳೂರು ರೇಸ್ ಕೋರ್ಸ್ ಇನ್ನು ಇತಿಹಾಸ: ಕುಣಿಗಲ್‌ಗೆ ಶಿಫ್ಟ್ ಆಗಲಿದೆ ಬಿಟಿಸಿ; ಹೊಸ ಟ್ರ್ಯಾಕ್‌ ವಿನ್ಯಾಸ ಮಾಡಲಿದೆ ಇಂಗ್ಲೆಂಡ್‌ನ 'ಜಾಕಿ ಕ್ಲಬ್'!

Published : Apr 30, 2026, 02:35 PM IST
racecourse

ಸಾರಾಂಶ

ದಶಕಗಳಿಂದ ಬೆಂಗಳೂರಿನಲ್ಲಿದ್ದ ಬೆಂಗಳೂರು ಟರ್ಫ್ ಕ್ಲಬ್ (BTC) ಮುಂದಿನ 2-3 ವರ್ಷಗಳಲ್ಲಿ ಕುಣಿಗಲ್‌ಗೆ ಸ್ಥಳಾಂತರಗೊಳ್ಳುವುದು ಖಚಿತವಾಗಿದೆ. ಇಂಗ್ಲೆಂಡ್‌ನ ವಿಶ್ವಪ್ರಸಿದ್ಧ 'ಜಾಕಿ ಕ್ಲಬ್' ಈ ಹೊಸ ಸೌಲಭ್ಯವನ್ನು ಉಚಿತವಾಗಿ ವಿನ್ಯಾಸಗೊಳಿಸಲು ಒಪ್ಪಿಕೊಂಡಿದೆ,

ಬೆಂಗಳೂರು (ಏ.30): ದಶಕಗಳಿಂದ ಬೆಂಗಳೂರಿನ ಹೃದಯಭಾಗದಲ್ಲಿದ್ದ ಬೆಂಗಳೂರು ಟರ್ಫ್ ಕ್ಲಬ್ (BTC) ಇನ್ನು 2-3 ವರ್ಷಗಳಲ್ಲಿ ಕುಣಿಗಲ್‌ಗೆ ಸ್ಥಳಾಂತರಗೊಳ್ಳುವುದು ಖಚಿತವಾಗಿದೆ. ವಿಶ್ವಪ್ರಸಿದ್ಧ ಇಂಗ್ಲೆಂಡ್‌ನ 'ಜಾಕಿ ಕ್ಲಬ್' ಹೊಸ ಸೌಲಭ್ಯವನ್ನು ಉಚಿತವಾಗಿ ವಿನ್ಯಾಸಗೊಳಿಸಲು ಮುಂದಾಗಿದೆ ಎಂದು ಬಿಟಿಸಿ ಅಧ್ಯಕ್ಷ ಎಲ್. ಶಿವಶಂಕರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೇ 1 ರಿಂದ ಆರಂಭವಾಗಲಿರುವ ಬೇಸಿಗೆ ರೇಸಿಂಗ್ ಋತುವಿನ ಘೋಷಣೆಗಾಗಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಹತ್ವದ ವಿಷಯಗಳನ್ನು ಹಂಚಿಕೊಂಡರು.

ಕುಣಿಗಲ್‌ನಲ್ಲಿ 118 ಎಕರೆ ಭೂಮಿ

"ರಾಜ್ಯ ಸರ್ಕಾರವು ಕುಣಿಗಲ್‌ನಲ್ಲಿ ನಮಗೆ 118 ಎಕರೆ ಭೂಮಿಯನ್ನು ನೀಡಿದೆ. ಸರ್ಕಾರದ ಆದೇಶದಂತೆ ಮುಂದಿನ 2 ರಿಂದ 3 ವರ್ಷಗಳ ಅವಧಿಯಲ್ಲಿ ಹೊಸ ಸೌಲಭ್ಯಕ್ಕೆ ಸ್ಥಳಾಂತರಗೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಬಿಟಿಸಿ ವ್ಯವಸ್ಥಾಪಕ ಸಮಿತಿ ನಿರ್ಧರಿಸಿದೆ," ಎಂದು ಶಿವಶಂಕರ್ ಹೇಳಿದರು.

ಆದರೆ, ಕುಣಿಗಲ್ ಎಲ್ಲರಿಗೂ ಸುಲಭವಾಗಿ ತಲುಪಲು ಸಾಧ್ಯವಾಗದ ಕಾರಣ, ಪ್ರಸ್ತುತ ಇರುವ ಬೆಂಗಳೂರಿನ ರೇಸ್ ಕೋರ್ಸ್ ಆವರಣದಲ್ಲಿಯೇ ಸುಮಾರು 4 ಎಕರೆ ಜಾಗವನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇಲ್ಲಿ ಆನ್-ಕೋರ್ಸ್ ಮತ್ತು ಆಫ್-ಕೋರ್ಸ್ ಬೆಟ್ಟಿಂಗ್‌ ನಡೆಸಲು ಹಾಗೂ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಲು ಬಿಟಿಸಿ ಉದ್ದೇಶಿಸಿದೆ.

ಜಾಕಿ ಕ್ಲಬ್‌ನಿಂದ ಉಚಿತ ಸೇವೆ

ಬಿಟಿಸಿ ವ್ಯವಸ್ಥಾಪಕ ಸಮಿತಿಯ ಸದಸ್ಯ ಉದಯ್ ಕೆ. ಈಶ್ವರನ್ ಮಾತನಾಡಿ, "ಇಂಗ್ಲೆಂಡ್‌ನ ಜಾಕಿ ಕ್ಲಬ್‌ನ ಅಧ್ಯಕ್ಷರು ಮತ್ತು ಸಿಇಒ ಅವರೊಂದಿಗೆ ನಾವು ಸಭೆ ನಡೆಸಿದ್ದೇವೆ. ಅವರು ಕುಣಿಗಲ್‌ನಲ್ಲಿ ರೇಸ್ ಟ್ರ್ಯಾಕ್ ಅನ್ನು ಉಚಿತವಾಗಿ (Pro bono) ವಿನ್ಯಾಸಗೊಳಿಸಲು ಒಪ್ಪಿದ್ದಾರೆ. ಸುಮಾರು 250 ವರ್ಷಗಳ ಹಿಂದೆ ಟಿಪ್ಪು ಸುಲ್ತಾನ್ ಕಾಲದಲ್ಲಿ ಕುದುರೆಗಳ ತಳಿ ಸಂವರ್ಧನೆಗೆ ಆಯ್ಕೆಯಾದ ಭೂಮಿ ಇದಾಗಿದ್ದು, ಕುದುರೆ ರೇಸ್‌ಗೆ ಇಲ್ಲಿನ ಮಣ್ಣು ಅತ್ಯುತ್ತಮವಾಗಿದೆ," ಎಂದು ತಿಳಿಸಿದರು.

ಅಂದಾಜು ವೆಚ್ಚ 350 ರಿಂದ 500 ಕೋಟಿ ರೂ.

ಈ ಬೃಹತ್ ಯೋಜನೆಗೆ ತಗಲುವ ವೆಚ್ಚದ ಕುರಿತು ಸ್ಟೆವಾರ್ಡ್ ಶಂಕರ್ ಬಾಲು ಮಾಹಿತಿ ನೀಡಿದ್ದಾರೆ. ಆರಂಭಿಕ ಅಂದಾಜಿನ ಪ್ರಕಾರ, ಬೆಂಗಳೂರು ಟರ್ಫ್ ಕ್ಲಬ್ ಮಟ್ಟದ ಸೌಲಭ್ಯವನ್ನು ನಿರ್ಮಿಸಲು ಸುಮಾರು 350 ರಿಂದ 500 ಕೋಟಿ ರೂಪಾಯಿ ವೆಚ್ಚವಾಗಬಹುದು. "ನಾವು ಕುಣಿಗಲ್‌ನಲ್ಲಿ ಬೆಂಗಳೂರಿನ ಕ್ಲಬ್‌ನಂತೆಯೇ ಬೃಹತ್ ಗ್ಯಾಲರಿಯನ್ನು ತಕ್ಷಣವೇ ನಿರ್ಮಿಸುವುದಿಲ್ಲ. ಸದ್ಯಕ್ಕೆ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ, ಉದ್ಯಮ ಅಭಿವೃದ್ಧಿಗೊಂಡಂತೆ ವಿಸ್ತರಿಸಲಾಗುವುದು," ಎಂದು ಹೇಳಿದ್ದಾರೆ.

ಇನ್ನೂ ನಡೆಯಬೇಕಿದೆ ಹಲವು ಪ್ರಕ್ರಿಯೆ

ಸಮಿತಿಯ ಸದಸ್ಯ ಆರ್. ಮಂಜುನಾಥ್ ರಮೇಶ್ ಮಾತನಾಡಿ, ಪ್ರೇಕ್ಷಕರಿಗೆ ಗ್ಯಾಲರಿಗಳು, ಸುಸಜ್ಜಿತ ಪಶುವೈದ್ಯಕೀಯ ಆಸ್ಪತ್ರೆ, ಕುದುರೆಗಳ ಲಾಯ (Stables) ಮತ್ತು ಬುಕ್ಕಿಗಳು ಕಾರ್ಯನಿರ್ವಹಿಸಲು ಸ್ಥಳಾವಕಾಶ ಕಲ್ಪಿಸುವ ಬಗ್ಗೆ ಕೆಲಸಗಳು ನಡೆಯುತ್ತಿವೆ. ಈ ಎಲ್ಲಾ ಯೋಜನೆಗಳು ಸದ್ಯಕ್ಕೆ ಪ್ರಾಥಮಿಕ ಹಂತದಲ್ಲಿವೆ ಎಂದು ತಿಳಿಸಿದರು. ಸರ್ಕಾರ ಮತ್ತು ಬಿಟಿಸಿ ನಡುವಿನ ಹಣಕಾಸಿನ ಒಪ್ಪಂದದ ಬಗ್ಗೆ ಸದ್ಯಕ್ಕೆ ಹೆಚ್ಚಿನ ಸ್ಪಷ್ಟತೆ ಇಲ್ಲದಿದ್ದರೂ, ಸ್ಥಳಾಂತರದ ಪ್ರಕ್ರಿಯೆ ಮಾತ್ರ ಅಧಿಕೃತವಾಗಿ ಚಾಲನೆ ಪಡೆದಿದೆ.

 

PREV
Read more Articles on
click me!

Recommended Stories

Bengaluru Rains: ವರುಣನ ಅರ್ಭಟಕ್ಕೆ ಸಿಎಂ ನಿವಾಸವೂ 'ಶೇಕ್'! ಮರ ಬಿದ್ದು ಕಾವೇರಿ ಬಂಗಲೆಯ ಕಂಪೌಂಡ್‌ಗೆ ಹಾನಿ
Bengaluru Rains: ಚರ್ಚ್ ಸ್ಟ್ರೀಟ್‌ನ ಜನಪ್ರಿಯ 'ಬುಕ್ ವರ್ಮ್' ಪುಸ್ತಕ ಮಳಿಗೆಗೆ ನುಗ್ಗಿದ ಮಳೆ ನೀರು, ಮಾಲೀಕ ಕಣ್ಣೀರು