
ಬೆಂಗಳೂರು (ಏ.29): ಕೃತಕ ಬುದ್ಧಿಮತ್ತೆ (Artificial Intelligence - AI) ತಂತ್ರಜ್ಞಾನವು ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರದಲ್ಲಿ ತರುತ್ತಿರುವ ಭಾರಿ ಬದಲಾವಣೆಗಳ ಪರಿಣಾಮವಾಗಿ, ದಶಕಗಳ ಹಿಂದಿನ ಸಾಫ್ಟ್‌ವೇರ್ ಯೋಜನೆಯೊಂದನ್ನು ಹೂಡಿಕೆದಾರರು ಕೈಬಿಟ್ಟಿದ್ದಾರೆ. ಇದರ ಪರಿಣಾಮವಾಗಿ, ಬೆಂಗಳೂರು ಪೂರ್ವ ಭಾಗದಲ್ಲಿ ಐಟಿ ಕಂಪನಿಗೆ ಮೀಸಲಾಗಿದ್ದ ಒಂಬತ್ತು ಎಕರೆ ಭೂಮಿಯನ್ನು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಬಳಸಿಕೊಳ್ಳಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ.
ಸಪ್ತಗಿರಿ ಶಿಕ್ಷಣ ಸಂಸ್ಥೆಗಳ ಸಮೂಹದ ಉದ್ಯಮಿ ಜಿ. ದಯಾನಂದ್ ಅವರಿಗೆ ಸೇರಿದ 'ಮೈಸೂರು ಐಟಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಬಿಪಿಒ (BPO) ಕೇಂದ್ರವನ್ನು ಸ್ಥಾಪಿಸಲು 2006 ರಲ್ಲಿಯೇ ಸರ್ಕಾರದ ಅನುಮೋದನೆ ಪಡೆದಿತ್ತು. ಇದಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ವರ್ತೂರು ಹೋಬಳಿಯ ಕಾಡುಬೀಸನಹಳ್ಳಿಯಲ್ಲಿ ಒಟ್ಟು 9.9 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು (2007 ರಲ್ಲಿ 3.5 ಎಕರೆ ಮತ್ತು 2014 ರಲ್ಲಿ 6.4 ಎಕರೆ).
ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ರೈತರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಕಾನೂನು ಹೋರಾಟಗಳು ಇತ್ತೀಚಿನವರೆಗೂ ಮುಂದುವರಿದಿದ್ದವು. ಸುಪ್ರೀಂ ಕೋರ್ಟ್ ಕಳೆದ ವರ್ಷವಷ್ಟೇ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸಿತ್ತು. ನ್ಯಾಯಾಲಯದ ಪ್ರಕರಣಗಳು ಮುಗಿಯುವ ಹೊತ್ತಿಗೆ ಐಟಿ ಕ್ಷೇತ್ರದ ಚಿತ್ರಣವೇ ಬದಲಾಗಿತ್ತು. ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಕಂಪನಿಯು, "ಮಾರುಕಟ್ಟೆಯಲ್ಲಿನ ಭಾರಿ ಬದಲಾವಣೆಗಳಿಂದ ಐಟಿ ಕ್ಷೇತ್ರ ಈಗ ಮಂದಗತಿಯಲ್ಲಿದೆ. ಆಟೋಮೇಷನ್ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಸಾಂಪ್ರದಾಯಿಕ ಐಟಿ ಮತ್ತು ಬಿಪಿಒ ಕೆಲಸಗಳನ್ನು ಆಪೋಶನ ತೆಗೆದುಕೊಳ್ಳುತ್ತಿವೆ. ಐಟಿ ಕ್ಷೇತ್ರದಲ್ಲಿ ನೇಮಕಾತಿ ಸುಮಾರು ಶೇ. 7 ರಷ್ಟು ಕುಸಿದಿದೆ ಮತ್ತು ಪ್ರಮುಖ ಐಟಿ ಸಂಸ್ಥೆಗಳಲ್ಲಿ ಭಾರಿ ಉದ್ಯೋಗ ಕಡಿತ ವರದಿಯಾಗಿದೆ. ಈ ಸಮಯದಲ್ಲಿ ಹೆಚ್ಚುವರಿ ಐಟಿ ಮೂಲಸೌಕರ್ಯಗಳನ್ನು ನಿರ್ಮಿಸುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಕಂಪನಿ ಸ್ಪಷ್ಟಪಡಿಸಿದೆ.
ಸಾಫ್ಟ್‌ವೇರ್ ಕಂಪನಿ ಲಾಭದಾಯಕವಲ್ಲ ಎಂದು ಅರಿತ ಉದ್ಯಮಿ ದಯಾನಂದ್ ಅವರು, ಅದೇ ಜಾಗದಲ್ಲಿ "ಅತ್ಯಾಧುನಿಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಹಾಗೂ ಬಹುಶಿಸ್ತೀಯ ತಂತ್ರಜ್ಞಾನ ಸಂಸ್ಥೆ"ಯನ್ನು ಸ್ಥಾಪಿಸುವ ಹೊಸ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟರು. ಸರ್ಕಾರವು ಇದಕ್ಕೆ ಇತ್ತೀಚೆಗೆ ಹಸಿರು ನಿಶಾನೆ ತೋರಿಸಿದೆ.
ಯೋಜನೆಯ ಉದ್ದೇಶ ಬದಲಾದ ಬೆನ್ನಲ್ಲೇ ಹೂಡಿಕೆಯ ಮೊತ್ತವೂ ಗಣನೀಯವಾಗಿ ಹೆಚ್ಚಾಗಿದೆ. ಈ ಹಿಂದೆ ಸಾಫ್ಟ್‌ವೇರ್ ಯೋಜನೆಗಾಗಿ 44.97 ಕೋಟಿ ರೂ. ಹೂಡಿಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಈಗ ನಿರ್ಮಾಣವಾಗಲಿರುವ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕಾಗಿ 410 ಕೋಟಿ ರೂ. ಹೂಡಿಕೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ.