ದೊಡ್ಡಬಳ್ಳಾಪುರದಲ್ಲಿ ಆಸ್ಟ್ರೋಬೇಸ್‌ನಿಂದ 500 ಕೋಟಿ, ಬಾಯರ್‌ ಕಂಪನಿಯಿಂದ ಬೆಂಗಳೂರಲ್ಲಿ 200 ಕೋಟಿ ಹೂಡಿಕೆ!

Published : Nov 03, 2026, 09:08 PM IST
Astrobase-Bayer to Invest Rs 700 Cr in Karnataka

ಸಾರಾಂಶ

ಕರ್ನಾಟಕದ ಬಾಹ್ಯಾಕಾಶ ಮತ್ತು ಕೃಷಿ ವಿಜ್ಞಾನ ಕ್ಷೇತ್ರಗಳಿಗೆ ಒಟ್ಟು ₹700 ಕೋಟಿ ಬೃಹತ್ ಬಂಡವಾಳ ಹರಿದುಬಂದಿದೆ. ಆಸ್ಟ್ರೋಬೇಸ್ ಮತ್ತು ಬಾಯರ್ ಕಂಪನಿಗಳ ಈ ಹೂಡಿಕೆಯಿಂದ ರಾಜ್ಯದಲ್ಲಿ 1,470 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದು ಬೆಂಗಳೂರನ್ನು ಜಾಗತಿಕ ಹಬ್ ಆಗಿ ಬೆಳೆಸಲು ನೆರವಾಗಲಿದೆ.

ಬೆಂಗಳೂರು (ನ.3): ಬಾಹ್ಯಾಕಾಶ ತಂತ್ರಜ್ಞಾನ (Space Tech) ಹಾಗೂ ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಭಾರಿ ಪ್ರಮಾಣದ ಬಂಡವಾಳ ಹರಿದುಬಂದಿದೆ. ಬೆಂಗಳೂರು ಮೂಲದ ಸ್ಪೇಸ್ ಟೆಕ್ನಾಲಜಿ ಕಂಪನಿ 'ಆಸ್ಟ್ರೋಬೇಸ್' ₹500 ಕೋಟಿ ಹಾಗೂ ನೆದರ್‌ಲ್ಯಾಂಡ್ಸ್ ಮೂಲದ ದೈತ್ಯ ಕೃಷಿ ವಿಜ್ಞಾನ ಸಂಸ್ಥೆ 'ಬಾಯರ್' ₹200 ಕೋಟಿ ಸೇರಿದಂತೆ ಒಟ್ಟು ₹700 ಕೋಟಿ ಹೂಡಿಕೆ ಮಾಡಲು ಮುಂದಾಗಿದ್ದು, ರಾಜ್ಯದಲ್ಲಿ ಬರೋಬ್ಬರಿ 1,470 ನೂತನ ಉದ್ಯೋಗಗಳು ಸೃಷ್ಟಿಯಾಗಲಿವೆ. ಮಂಗಳವಾರ ವಿಧಾನಸೌಧದಲ್ಲಿ ಎರಡೂ ಕಂಪನಿಗಳ ಹಿರಿಯ ಪ್ರತಿನಿಧಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಈ ಮಹತ್ವದ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ರಾಜ್ಯದಲ್ಲಿ ಬಾಹ್ಯಾಕಾಶ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು (Space-tech Ecosystem) ಬಲಪಡಿಸಲು ಮತ್ತು ಜಾಗತಿಕ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್ (GCC) ಹಬ್ ಆಗಿ ಬೆಂಗಳೂರನ್ನು ಮತ್ತಷ್ಟು ಬೆಳೆಸಲು ಈ ಹೂಡಿಕೆಗಳು ಭಾರಿ ನೆರವಾಗಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಆದಿನಾರಾಯಣ ಹೊಸಹಳ್ಳಿಯಲ್ಲಿ ರಾಕೆಟ್ ಎಂಜಿನ್ ಕಾರ್ಖಾನೆ – ₹500 ಕೋಟಿ ಹೂಡಿಕೆ

ಮಧ್ಯಮ ಮಾದರಿಯ ಉಪಗ್ರಹ ಉಡಾವಣಾ ವಾಹನಗಳು (Medium-lift launch vehicles), ಮರುಬಳಕೆ ಮಾಡಬಹುದಾದ ಉಡಾವಣಾ ವ್ಯವಸ್ಥೆಗಳು (Reusable launch systems) ಮತ್ತು ಸ್ವದೇಶಿ ರಾಕೆಟ್ ಪ್ರೊಪಲ್ಷನ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿರುವ ಆಸ್ಟ್ರೋಬೇಸ್ (Astrobase) ಸಂಸ್ಥೆಯು ತನ್ನ ಸುಸಜ್ಜಿತ ರಾಕೆಟ್ ತಯಾರಿಕಾ ಘಟಕವನ್ನು ನೆಲಮಂಗಲ/ದೊಡ್ಡಬಳ್ಳಾಪುರ ವ್ಯಾಪ್ತಿಯ ಆದಿನಾರಾಯಣ ಹೊಸಹಳ್ಳಿ ಕೈಗಾರಿಕಾ ಪ್ರದೇಶದ 10 ಎಕರೆ ಜಾಗದಲ್ಲಿ ಸ್ಥಾಪಿಸಲಿದೆ. ಈ ನೂತನ ಉತ್ಪಾದನಾ ಘಟಕವು ವರ್ಷಕ್ಕೆ ಬರೋಬ್ಬರಿ 40 ರಾಕೆಟ್ ಎಂಜಿನ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಈ ಒಂದು ಯೋಜನೆಯೊಂದರಿಂದಲೇ ರಾಜ್ಯದಲ್ಲಿ 1,250 ಕ್ಕೂ ಹೆಚ್ಚು ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.

ಈ ಸಂಸ್ಥೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಾಜಿ ವಿಜ್ಞಾನಿಗಳು ಹಾಗೂ ಹಿರಿಯ ಬಾಹ್ಯಾಕಾಶ ತಜ್ಞರು ಮುನ್ನಡೆಸುತ್ತಿದ್ದಾರೆ. ಕಂಪನಿಯು ಈಗಾಗಲೇ 8 ಟನ್‌ನಿಂದ 26 ಟನ್‌ವರೆಗಿನ ಪೇಲೋಡ್‌ಗಳನ್ನು ಹೊತ್ತೊಯ್ಯಬಲ್ಲ 'ಎವರೆಸ್ಟ್' (Everest) ಹೆಸರಿನ ಸ್ವದೇಶಿ ರಾಕೆಟ್ ಎಂಜಿನ್ ಅಭಿವೃದ್ಧಿಪಡಿಸಿದೆ. ಕಂಪನಿಯು ತನ್ನ ಆನ್ಯುಯಲ್ ಪೇಲೋಡ್ ಸಾಮರ್ಥ್ಯವನ್ನು 2032 ರ ವೇಳೆಗೆ 100 ಟನ್‌ಗೆ ಹಾಗೂ 2040 ರ ವೇಳೆಗೆ 1,000 ಟನ್‌ಗೆ ಹೆಚ್ಚಿಸುವ ಬೃಹತ್ ಗುರಿ ಹೊಂದಿದೆ.

ಬೆಂಗಳೂರಿನಲ್ಲಿ 'ಬಾಯರ್' ಗ್ಲೋಬಲ್ ಕೆಪಾಬಿಲಿಟಿ ಸೆಂಟರ್ (GCC) – ₹200 ಕೋಟಿ ಹೂಡಿಕೆ

ಮತ್ತೊಂದೆಡೆ, ಜಾಗತಿಕ ಕೃಷಿ ವಿಜ್ಞಾನ ದೈತ್ಯ ಸಂಸ್ಥೆಯಾದ ಬಾಯರ್ (Bayer) ಬೆಂಗಳೂರಿನಲ್ಲಿ ತನ್ನ 'ಗ್ಲೋಬಲ್ ಕೆಪಾಬಿಲಿಟಿ ಸೆಂಟರ್' (Global Capability Centre - GCC) ಸ್ಥಾಪಿಸಲು ₹200 ಕೋಟಿ ಹೂಡಿಕೆ ಮಾಡಲಿದೆ. ಈ ಕೇಂದ್ರದಿಂದ ಸುಮಾರು 220 ಉನ್ನತ ಮಟ್ಟದ ಉದ್ಯೋಗಗಳು ಸೃಷ್ಟಿಯಾಗಲಿವೆ. ಇತ್ತೀಚೆಗೆ ಸಚಿವ ಎಂ.ಬಿ. ಪಾಟೀಲ್ ಅವರು ಹೂಡಿಕೆದಾರರನ್ನು ಆಕರ್ಷಿಸಲು ನೆದರ್‌ಲ್ಯಾಂಡ್ಸ್‌ನ ಆಮ್‌ಸ್ಟರ್‌ಡ್ಯಾಮ್‌ಗೆ ಭೇಟಿ ನೀಡಿದ್ದ ವೇಳೆ ಬಾಯರ್ ಸಂಸ್ಥೆಯ ಜಾಗತಿಕ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದರು. ಆ ಪ್ರವಾಸದ ಫಲವಾಗಿ ಇದೀಗ ಈ ಯೋಜನೆ ರಾಜ್ಯಕ್ಕೆ ದಕ್ಕಿದೆ.

ಗೊಬ್ಬರಗಳು, ಕೀಟನಾಶಕಗಳು ಹಾಗೂ ಶಿಲೀಂಧ್ರನಾಶಕಗಳನ್ನು ತಯಾರಿಸುವ ಬಾಯರ್ ಸಂಸ್ಥೆಯು, ಮುಂದಿನ ವರ್ಷದ ಏಪ್ರಿಲ್‌ನಲ್ಲಿ ನಡೆಯಲಿರುವ 'ಜಾಗತಿಕ ಹೂಡಿಕೆದಾರರ ಸಮಾವೇಶ'ಕ್ಕೂ (GIM 2027) ಮುಂಚಿತವಾಗಿಯೇ ತನ್ನ ಭೂಮಿಪೂಜೆ ನೆರವೇರಿಸಿ ಶೀಘ್ರವೇ ಕಾರ್ಯಾಚರಣೆ ಆರಂಭಿಸಲು ಆಸಕ್ತಿ ತೋರಿದೆ. ಬಾಯರ್ ಈಗಾಗಲೇ ಭಾರತದಲ್ಲಿ 125 ವರ್ಷಗಳ ಇತಿಹಾಸ ಹೊಂದಿದ್ದು, 11,000 ನೌಕರರನ್ನು ಹೊಂದಿದೆ. ಬೆಂಗಳೂರಿನಲ್ಲಿ ಸರ್ವಿಸ್ ಅಂಡ್ ಇನ್ನೋವೇಶನ್ ಹಬ್ ಹಾಗೂ ಚಾಮರಾಜನಗರದಲ್ಲಿ ಬೆಳೆ ಸಂಶೋಧನಾ ಕೇಂದ್ರವನ್ನು (Crop Research Centre) ಈ ಸಂಸ್ಥೆ ಈಗಾಗಲೇ ಯಶಸ್ವಿಯಾಗಿ ನಡೆಸುತ್ತಿದೆ. ಸಭೆಯಲ್ಲಿ ಆಸ್ಟ್ರೋಬೇಸ್ ಸಂಸ್ಥೆಯ ಸಹ-ಸಂಸ್ಥಾಪಕ ನೀರಜ್ ಖಂಡೇಲ್‌ವಾಲ್, ಸಿಎಫ್‌ಒ ನಿಶಾಂತ್ ಜೈನ್, ಬಿಸಿನೆಸ್ ಅಂಡ್ ಸ್ಟ್ರಾಟಜಿ ಮುಖ್ಯಸ್ಥ ಕ್ಯಾಪ್ಟನ್ ಪುನೀತ್ ಬಾಲಸುಬ್ರಮಣಿಯನ್ ಹಾಗೂ ಬಾಯರ್ ಸಂಸ್ಥೆಯ ಡಾ. ಹಿಮಾಂಶು ಪಟೇಲ್ ಪಾಲ್ಗೊಂಡಿದ್ದರು.

PREV
Read more Articles on
click me!

Recommended Stories

ಬೆಂಗಳೂರಿನಲ್ಲಿ Rapido ರೈಡ್ ವೇಳೆ ಮಹಿಳೆಗೆ ಕಹಿ ಅನುಭವ; 30 ನಿಮಿಷಗಳ ಪ್ರಯಾಣದಲ್ಲಿ ನಡೆದಿದ್ದೇನು?
ಬೆಂಗಳೂರಿನ ಕುಬೇರ ಮೂಲೆ ಕತ್ರಿಗುಪ್ಪೆ ವಾಸ್ತು ರಹಸ್ಯ ಬಿಚ್ಚಿಟ್ಟ ತಜ್ಞರು; ಇಲ್ಲಿದ್ದು ರಾಜಕಾರಣಿ, ಸೆಲೆಬ್ರಿಟಿಗಳಾದವರೆಷ್ಟು?