
ಬೆಂಗಳೂರು (ನ.3): ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಭಾರಿ ಆತಂಕ ಸೃಷ್ಟಿಸಿದ ಘಟನೆಯೊಂದು ನಡೆದಿದೆ. ಮನೆಗೆ ಗ್ಯಾಸ್ ಸಿಲಿಂಡರ್ ಪೂರೈಸಲು ಬಂದಿದ್ದ ಡೆಲಿವರಿ ಬಾಯ್, ಸಿಲಿಂಡರ್ ಅನ್ನು ಹೊತ್ತು ತಂದು ಕೆಳಗಿಡುತ್ತಿದ್ದಂತೆಯೇ ಏಕಾಏಕಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದ್ದು, ಡೆಲಿವರಿ ಬಾಯ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜಧಾನಿಯ ಮಲ್ಲೇಶ್ವರಂ ಪೊಲೀಸ್ ಠಾಣೆ (Malleshwaram Police Station) ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಮನೆಗೆ ಬಂದಿದ್ದ ಗ್ಯಾಸ್ ಸಿಲಿಂಡರ್ ಅನ್ನು ಇಳಿಸಿ ಮನೆಯ ಬಾಗಿಲ ಬಳಿ ಇಡುವಾಗ ಈ ಅವಘಡ ಸಂಭವಿಸಿದೆ.
ಘಟನೆಯ ಹಿನ್ನೆಲೆ ನೋಡುವುದಾದರೆ, ಮನೆಯ ಮಹಿಳೆಯೊಬ್ಬರು ಆಗತಾನೇ ಮನೆಯ ಮುಂಭಾಗದ ಹೊಸ್ತಿಲನ್ನು ತೊಳೆದು, ಪೂಜೆ ಮಾಡಿ ಹಣತೆ ದೀಪವನ್ನು ಹಚ್ಚಿಟ್ಟಿದ್ದರು. ಅದೇ ಸಮಯಕ್ಕೆ ಸರಿಯಾಗಿ ಆ ಮನೆಗೆ ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡಲು ಡೆಲಿವರಿ ಬಾಯ್ ಆಗಮಿಸಿದ್ದರು.
ಮನೆಯ ಹೊಸ್ತಿಲ ಮುಂದೆ ಉರಿಯುತ್ತಿದ್ದ ದೀಪವನ್ನು ಗಮನಿಸದ ಡೆಲಿವರಿ ಬಾಯ್, ತಾವು ಹೆಗಲ ಮೇಲೆ ಹೊತ್ತು ತಂದಿದ್ದ ಸಿಲಿಂಡರ್ ಅನ್ನು ತಂದು ಬಾಗಿಲ ಬಳಿ ಇಟ್ಟಿದ್ದಾರೆ. ಆದರೆ, ಆ ಸಿಲಿಂಡರ್‌ನಲ್ಲಿ ಈಗಾಗಲೇ ಸಣ್ಣ ಪ್ರಮಾಣದ ಗ್ಯಾಸ್ ಲೀಕೇಜ್ (Gas Leakage) ಇತ್ತು ಎನ್ನಲಾಗಿದೆ. ಸಿಲಿಂಡರ್ ಕೆಳಗಿಡುತ್ತಿದ್ದಂತೆಯೇ ಲೀಕ್ ಆಗಿದ್ದ ಅನಿಲವು ಹೊಸ್ತಿಲ ಮೇಲಿದ್ದ ದೀಪದ ಬೆಂಕಿಯ ಸ್ಪರ್ಶಕ್ಕೆ ಸಿಲುಕಿ, ಏಕಾಏಕಿ ಭಾರಿ ಪ್ರಮಾಣದ ಬೆಂಕಿ ಭುಗಿಲೆದ್ದು ಸ್ಫೋಟಗೊಂಡಿದೆ.
ಸಿಲಿಂಡರ್‌ನಿಂದ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿ ಉರಿದಾಗ ತಕ್ಷಣವೇ ಜಾಗರೂಕರಾದ ಡೆಲಿವರಿ ಬಾಯ್ ಹಿಂದಕ್ಕೆ ಸರಿದಿದ್ದರಿಂದ ಭಾರಿ ಅನಾಹುತ ತಪ್ಪಿದ್ದು, ಅವರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮಲ್ಲೇಶ್ವರಂ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ (Fire Brigade) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಸಾರ್ವಜನಿಕರಿಗೆ ಗಾಯಗಳಾಗಲಿ ಅಥವಾ ಪ್ರಾಣಾಪಾಯವಾಗಲಿ ಸಂಭವಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪೂಜೆ ಅಥವಾ ದೀಪಾರಾಧನೆ ಮಾಡುವ ಸಂದರ್ಭಗಳಲ್ಲಿ ಗ್ಯಾಸ್ ಸಿಲಿಂಡರ್ ತರುವಾಗ ಸಾರ್ವಜನಿಕರು ಹಾಗೂ ಡೆಲಿವರಿ ಸಿಬ್ಬಂದಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.