
ಬೆಂಗಳೂರು (ನ.26): ಕಳೆದ 13 ದಿನಗಳಿಂದ ಚಳಿ, ಗಾಳಿ, ಮಳೆಗೂ ಬಗ್ಗದೇ ಗೌರವಧನ 15,000 ರೂ.ಗೆ ಹೆಚ್ಚಳ ಮಾಡುವಂತೆ ನಿರಂತರ ಪ್ರತಿಭಟನೆ ಮಾಡಿದ್ದ ಆಶಾ ಕಾರ್ಯಕರ್ತರ ಬೇಡಿಕೆಗೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ, ಮಾಸಿಕ ಗೌರವಧನವನ್ನು ₹2,000 ಹೆಚ್ಚಿಸುವ ಸಂಬಂಧ ಲಿಖಿತ ರೂಪದಲ್ಲಿ ಅಧಿಕೃತ ಟಿಪ್ಪಣಿಯನ್ನು ಹೊರಡಿಸಿದೆ. ಜನವರಿ 1, 2027ರಿಂದ ಜಾರಿಗೆ ಬರುವಂತೆ ಹೆಚ್ಚುವರಿ ಗೌರವಧನ ಪಾವತಿಗೆ ಅಗತ್ಯ ಪ್ರಕ್ರಿಯೆಗಳನ್ನು ಆದ್ಯತೆ ಮೇರೆಗೆ ಆರಂಭಿಸಲು ಮುಖ್ಯಮಂತ್ರಿ ಕಚೇರಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ರವಾನಿಸಲಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ (ನವೆಂಬರ್ 28, 2026) ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಮಾಸಿಕ ಗೌರವಧನವನ್ನು ₹2,000 ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಸಿಎಂ ಅವರ ಮೌಖಿಕ ಭರವಸೆಗೆ ಬಗ್ಗದ ಆಶಾ ಕಾರ್ಯಕರ್ತರು, ಲಿಖಿತ ರೂಪದ ಆದೇಶ ನೀಡುವಂತೆ ಆಗ್ರಹಿಸಿ 13ನೇ ದಿನಕ್ಕೆ ಧರಣಿಯನ್ನು ಮುಂದುವರಿಸಿದ್ದರು. ಇದೀಗ ಆಶಾ ಕಾರ್ಯಕರ್ತೆಯರ ಸತತ ಹೋರಾಟ ಮತ್ತು ಧರಣಿಗೆ ಮಣಿದ ಸರ್ಕಾರ, ಟಿಪ್ಪಣಿ ರೂಪದಲ್ಲಿ ಅಧಿಕೃತ ಆದೇಶ ಹೊರಡಿಸಿದೆ.
ಸತತ 12 ದಿನಗಳ ಕಾಲ ಚಳಿ, ಗಾಳಿ ಹಾಗೂ ಮಳೆ ಎನ್ನದೆ, ಮಕ್ಕಳು-ಮರಿಗಳನ್ನು ಕಟ್ಟಿಕೊಂಡು ಬಂದು ಪ್ರತಿಭಟನೆ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯರಿಗೆ ಇದೀಗ ದೊಡ್ಡ ಜಯ ಸಿಕ್ಕಂತಾಗಿದೆ. ನಿನ್ನೆ ನಡೆದ ಸಭೆಯ ನಡವಳಿಗಳನ್ನು ಆಧರಿಸಿ, 13ನೇ ದಿನದ ಪ್ರತಿಭಟನೆಗೆ ಬೆಚ್ಚಿದ ಸರ್ಕಾರ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್. ಎಸ್. ನಕುಲ್ (ಭಾ.ಆ.ಸೇ.) ಅವರ ಮೂಲಕ (ಸಂಖ್ಯೆ: ಮುಮಂ/ಕಾ/135/2026) ಈ ಟಿಪ್ಪಣಿಯನ್ನು ಹೊರಡಿಸಿದೆ. ಈ ಪತ್ರದ ಪ್ರತಿಯನ್ನು ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿಗಳ ಮಾಹಿತಿಗಾಗಿಯೂ ಕಳುಹಿಸಲಾಗಿದೆ.
ಕಳೆದ ವರ್ಷವೂ ಆಶಾ ಕಾರ್ಯಕರ್ತೆಯರು ಚಳಿಗಾಲ ಅಧಿವೇಶನಕ್ಕೂ ಮುನ್ನ ಇದೇ ರೀತಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ₹2,000 ಗೌರವಧನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಕೊಟ್ಟ ಮಾತಿನಂತೆ ನಡೆದುಕೊಳ್ಳದ ಕಾರಣ ಒಂದು ವರ್ಷಗಳ ಕಾಲ ಆಶಾ ಕಾರ್ಯಕರ್ತರು ವಂಚಿತರಾಗಿದ್ದಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿಂದೆ ಇದೇ ರೀತಿ ಭರವಸೆ ಪಡೆದು ಬೇಡಿಕೆ ಈಡೇರದೇ ಉಳಿದಿದ್ದ ಅನುಭವದ ಹಿನ್ನೆಲೆಯಲ್ಲಿ, ಈ ಬಾರಿ ಲಿಖಿತ ರೂಪದಲ್ಲಿ ಆದೇಶ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದರು.
ಈ ಬಾರಿಯ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು, "ನಾವು ಏಪ್ರಿಲ್ನಿಂದ ಹೆಚ್ಚಳ ಮಾಡುವ ಬಗ್ಗೆ ತೀರ್ಮಾನ ಮಾಡಿದ್ದೆವು. ಆದರೆ, ನಿಮ್ಮ ಪ್ರತಿಭಟನೆಗೆ ಮಣಿದು ಜನವರಿಯಿಂದಲೇ ₹2,000 ಹೆಚ್ಚಳ ಮಾಡುತ್ತೇವೆ. ಪ್ರತಿಭಟನೆ ವಾಪಸ್ ಪಡೆಯಿರಿ" ಎಂದು ತಿಳಿಸಿದ್ದರು. ಆ ಸಭೆಯಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರು ಒಪ್ಪಿಗೆ ಸೂಚಿಸಿ ಪ್ರತಿಭಟನಾ ಸ್ಥಳಕ್ಕೆ ವಾಪಸ್ ಬಂದು ಮಾಹಿತಿ ನೀಡಿದ್ದರು.
ಆದರೆ, ಇದಕ್ಕೆ ಒಪ್ಪಿಕೊಳ್ಳದ ಪ್ರತಿಭಟನಾ ನಿರತ ಆಶಾ ಸಿಬ್ಬಂದಿ, "ನಾವು ₹15,000 ಕೇಳಿದರೆ ಕೇವಲ ₹2,000 ಭರವಸೆ ಕೊಟ್ಟಿದ್ದಾರೆ. ಈ ಭರವಸೆಯನ್ನಾದರೂ ಲಿಖಿತ ರೂಪದಲ್ಲಿ ಕೊಡಲಿ" ಎಂದು ಆಗ್ರಹಿಸಿ ಹೋರಾಟವನ್ನು ಮುಂದುವರಿಸಿದ್ದರು.
- ಹೆಚ್ಚಳದ ಮೊತ್ತ ಮತ್ತು ದಿನಾಂಕ: ನವೆಂಬರ್ 28, 2026ರ ಸಭೆಯ ನಿರ್ಣಯದಂತೆ, ಜನವರಿ 1, 2027ರಿಂದ ಜಾರಿಗೆ ಬರುವಂತೆ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ಪ್ರತಿ ತಿಂಗಳಿಗೆ ₹2,000 ಹೆಚ್ಚಿಸಲು ನಿರ್ಧರಿಸಲಾಗಿದೆ
- ಅಗತ್ಯ ಪ್ರಕ್ರಿಯೆಗೆ ಸೂಚನೆ: ಹೆಚ್ಚುವರಿ ಗೌರವಧನವನ್ನು ಪಾವತಿಸಲು ಅಗತ್ಯವಿರುವ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಆದ್ಯತೆ ಮೇರೆಗೆ ಆರಂಭಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಲಾಗಿದೆ
- ಸಭೆಯ ಉಲ್ಲೇಖ: ಸಭೆಯಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳು ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಧನ್ಯವಾದ ಸಲ್ಲಿಸಿ, ಪ್ರತಿಭಟನೆ ಹಿಂಪಡೆಯಲು ಒಪ್ಪಿಕೊಂಡಿದ್ದ ಅಂಶವನ್ನೂ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ
ಒಟ್ಟಾರೆಯಾಗಿ, 13ನೇ ದಿನಕ್ಕೆ ಕಾಲಿಟ್ಟಿದ್ದ ಆಶಾ ಕಾರ್ಯಕರ್ತೆಯರ ಆಹೋರಾತ್ರಿ ಧರಣಿ ಮತ್ತು ಲಿಖಿತ ಭರವಸೆಯ ಒತ್ತಾಯದ ಬಳಿಕ, ಜನವರಿ 1ರಿಂದ ₹2,000 ಗೌರವಧನ ಹೆಚ್ಚಳ ಮಾಡುವ ಪ್ರಕ್ರಿಯೆಗೆ ಸಿಎಂ ಕಚೇರಿಯಿಂದ ಅಧಿಕೃತ ಟಿಪ್ಪಣಿ ಮೂಲಕ ಚಾಲನೆ ದೊರೆತಿದೆ.