
ಬೆಂಗಳೂರು: ನಗರದಲ್ಲಿನ ಸ್ಪಾ ಕೇಂದ್ರಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಮೇರೆಗೆ ಪೂರ್ವ ವಿಭಾಗದ ಪೊಲೀಸರ ವಿಶೇಷ ಕಾರ್ಯಾಚರಣೆ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಹೆಣ್ಣೂರು, ರಾಮಮೂರ್ತಿನಗರ, ಮಹದೇವಪುರ, ಕೆ.ಆರ್.ಪುರಂ ಹಾಗೂ ಅವಲಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ 27 ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಪೂರ್ವ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸ್ಪಾ ಕೇಂದ್ರಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆಯೇ ಎಂಬುದನ್ನು ಪರಿಶೀಲಿಸುವ ಜತೆಗೆ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ತಡೆಗಟ್ಟುವುದು. ಕಾನೂನು ಉಲ್ಲಂಘನೆಗಳನ್ನು ಪತ್ತೆಹಚ್ಚುವುದು ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವುದು ಈ ವಿಶೇಷ ಕಾರ್ಯಾಚರಣೆಯ ಉದ್ದೇಶವಾಗಿದೆ. ಇಂತಹ ವಿಶೇಷ ತಪಾಸಣಾ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್ಸ್‌ಪೆಕ್ಟರ್ ನೇತೃತ್ವದ ವಿಶೇಷ ತಂಡಗಳು ವೈಟ್‌ಫೀಲ್ಡ್ ವಿಭಾಗದ 6 ಪೊಲೀಸ್ ಠಾಣೆಗಳ (ಕಾಡುಗೋಡಿ, ವೈಟ್‌ಫೀಲ್ಡ್, ವರ್ತೂರು, ಹೆಚ್.ಎ.ಎಲ್., ಮಾರತ್ತಹಳ್ಳಿ, ಬೆಳ್ಳಂದೂರು) ವ್ಯಾಪ್ತಿಯ 114 ಕೇಂದ್ರಗಳು ಹಾಗೂ ಪೂರ್ವ ವಿಭಾಗದ 5 ಪೊಲೀಸ್ ಠಾಣೆಗಳ (ಹಲಸೂರು, ರಾಮಮೂರ್ತಿನಗರ, ಮಹದೇವಪುರ, ಕೆ.ಆರ್.ಪುರಂ, ಆವಲಹಳ್ಳಿ) ವ್ಯಾಪ್ತಿಯ 77 ಕೇಂದ್ರಗಳು ಸೇರಿದಂತೆ ಒಟ್ಟು 11 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 191 ಸ್ಪಾ ಮತ್ತು ಮಸಾಜ್ ಕೇಂದ್ರಗಳನ್ನು ಏಕಕಾಲದಲ್ಲಿ ಪರಿಶೀಲನೆ ನಡೆಸಲಾಗಿದೆ.
ಈ ತಪಾಸಣೆಯ ವೇಳೆ ವ್ಯಾಪಾರ ಪರವಾನಗಿ (Trade Licence) ಮತ್ತು ಇತರ ಅಗತ್ಯ ದಾಖಲೆಗಳು, ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ಅವುಗಳ ಕಾರ್ಯನಿರ್ವಹಣೆ, ಸಿಬ್ಬಂದಿಯ ಗುರುತಿನ ಚೀಟಿ, ವಿಳಾಸದ ದೃಢೀಕರಣ, ಹಿನ್ನೆಲೆ ಪರಿಶೀಲನೆ (Background Verification) ದಾಖಲೆಗಳು ಹಾಗೂ ಗ್ರಾಹಕರ ಭೇಟಿಯ ವಿವರಗಳನ್ನು ದಾಖಲಿಸುವ ನೋಂದಣಿ ಪುಸ್ತಕದ (Customer Entry Register) ನಿರ್ವಹಣೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು.
ಅಗತ್ಯ ದಾಖಲೆಗಳು ಮತ್ತು ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಹೆಚ್ಚಿನ ಸ್ಪಷ್ಟೀಕರಣ ಪಡೆಯಲು 16 ಪ್ರಕರಣಗಳಲ್ಲಿ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದ್ದು, ನಿಯಮ ಉಲ್ಲಂಘಿಸುವ ಅಥವಾ ಪರವಾನಗಿ ಹೊಂದಿರದ ಕೇಂದ್ರಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿದ್ದು, ಸ್ಪಾ ಮತ್ತು ಮಸಾಜ್ ಕೇಂದ್ರಗಳಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಹಿಂಜರಿಕೆಯಿಲ್ಲದೆ ಪೊಲೀಸರಿಗೆ ಮಾಹಿತಿ ನೀಡುವಂತೆ ಅಥವಾ ತುರ್ತು ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡುವಂತೆ ಮನವಿ ಮಾಡಲಾಗಿದೆ.