
ಬೆಂಗಳೂರು (ಮೇ.19): ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಜೈಲು ಪಾಲಾಗಿರುವ ಸ್ಯಾಂಡಲ್ ವುಡ್ ನಟ ದರ್ಶನ್ ಅವರ ಬದುಕಿನಲ್ಲಿ ಇಂದು ಅತ್ಯಂತ ಭಾವುಕ ಕ್ಷಣ ದಾಖಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ತೀವ್ರ ಮಾನಸಿಕ ತೊಳಲಾಟಕ್ಕೆ ಸಿಲುಕಿ, ಅಕ್ಷರಶಃ ಕುಗ್ಗಿಹೋಗಿದ್ದ ನಟ ದರ್ಶನ್ ಅವರನ್ನು ಭೇಟಿಯಾಗಲು ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಮಂಗಳವಾರ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ಕಳೆದ ಎಂಟು ತಿಂಗಳ ಸುದೀರ್ಘ ಅವಧಿಯ ನಂತರ ಮೊದಲ ಬಾರಿಗೆ ಕುಟುಂಬದವರನ್ನು ನೇರವಾಗಿ ಮುಖಾಮುಖಿ ಭೇಟಿಯಾದ ದರ್ಶನ್, ಪತ್ನಿ ಮತ್ತು ಮಗನನ್ನು ನೋಡಿದ ಕೂಡಲೇ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ 23ನೇ ಮದುವೆ ವಾರ್ಷಿಕೋತ್ಸವದ ಕಾರಣಕ್ಕಾಗಿ ಈ ಅಪರೂಪದ ಭೇಟಿಗೆ ಅವಕಾಶ ನೀಡಲಾಗಿತ್ತು. ಜೈಲಿನ ಕತ್ತಲ ಕೋಣೆಯಲ್ಲಿ ಕಳೆಯುತ್ತಿರುವ ದರ್ಶನ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂಬ ಕಾರಣ ನೀಡಿ ಕುಟುಂಬಸ್ಥರು ನೇರ ಭೇಟಿಗೆ ವಿನಂತಿಸಿದ್ದರು. ಕೊಲೆ ಆರೋಪಿ ದರ್ಶನ್ ಅವರ ಈ ವಿಶೇಷ ಮನವಿಯನ್ನು ಪುರಸ್ಕರಿಸಿದ ಜೈಲಿನ ಮುಖ್ಯ ಅಧೀಕ್ಷಕ ಅನ್ಶುಕುಮಾರ್ ಅವರು, ಕುಟುಂಬದವರೊಂದಿಗೆ ಮುಖಾಮುಖಿ ಮಾತನಾಡಲು ವಿಶೇಷ ಅನುಮತಿ ನೀಡಿದ್ದರು.
ಇಂದು ಮಧ್ಯಾಹ್ನ ತಮ್ಮ ಐಷಾರಾಮಿ ರೇಂಜ್ ರೋವರ್ (Range Rover) ಕಾರಿನಲ್ಲಿ ಜೈಲಿನ ಬಳಿ ಆಗಮಿಸಿದ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೊತೆಯಲ್ಲಿ ಮತ್ತೊಬ್ಬ ಅಪರಿಚಿತ ಮಹಿಳೆಯೂ ಇದ್ದರು. ಭದ್ರತಾ ಕಾರಣಗಳಿಗಾಗಿ ಕಾರನ್ನು ಜೈಲಿನ ಹೊರಗೇ ನಿಲ್ಲಿಸಲಾಗಿತ್ತು. ಅಲ್ಲಿಂದ ಜೈಲಿನ ಕಟ್ಟುನಿಟ್ಟಿನ ಚೆಕ್ ಪೋಸ್ಟ್ ಮೂಲಕ ವಿಜಯಲಕ್ಷ್ಮಿ ಮತ್ತು ವಿನೀಶ್ ನಡೆದುಕೊಂಡೇ ಒಳಗೆ ಸಾಗಿದರು. ಇವರ ಜೊತೆಗೆ ಆಗಮಿಸಿದ್ದ ದರ್ಶನ್ ಮ್ಯಾನೇಜರ್ ನಾಗರಾಜ್ ಅವರು ನಟನಿಗಾಗಿ ಕೇವಲ ಹಣ್ಣುಗಳನ್ನು ಮಾತ್ರ ಕೈಯಲ್ಲಿ ಕೊಂಡೊಯ್ದಿದ್ದರು.
ಸಂಜೆ ಸುಮಾರು 4 ಗಂಟೆಯ ವೇಳೆಗೆ ಜೈಲಿನ ವಿಶೇಷ ಭೇಟಿ ಕೊಠಡಿಯಲ್ಲಿ ಈ ಮುಖಾಮುಖಿ ಸಾಧ್ಯವಾಯಿತು. ಕಳೆದ 8 ತಿಂಗಳಿನಿಂದ ಕೇವಲ ಕಂಬಿಗಳ ಹಿಂದಿನಿಂದ ಅಥವಾ ಸಿಸಿಟಿವಿ ಪರದೆಯ ಮೂಲಕ ನೋಡುತ್ತಿದ್ದ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಅವರನ್ನು ನೇರವಾಗಿ ಕಂಡ ತಕ್ಷಣ ದರ್ಶನ್ ಮುಖದಲ್ಲಿ ಮಂದಹಾಸ ಮೂಡಿದೆ.
ತಮ್ಮ ದುಃಖವನ್ನು ತಡೆದುಕೊಳ್ಳಲಾರದ ದರ್ಶನ್, ತಕ್ಷಣವೇ ಪತ್ನಿ ಮತ್ತು ಮಗನನ್ನು ಗಟ್ಟಿಯಾಗಿ ಅಪ್ಪಿಕೊಂಡು ಭಾವುಕರಾಗಿದ್ದಾರೆ. ಇಷ್ಟು ದಿನಗಳ ಕಾಲ ಅನುಭವಿಸಿದ ಕಷ್ಟದ ನಡುವೆಯೂ ತನಗಾಗಿ ಶ್ರಮಿಸುತ್ತಿರುವ ಪತ್ನಿ ವಿಜಯಲಕ್ಷ್ಮಿ ಅವರನ್ನ ಅಪ್ಪಿಕೊಂಡ ದರ್ಶನ್, ಅವರ ಹಣೆಗೆ ಮುತ್ತಿಟ್ಟು ಕಣ್ಣೀರು ಸುರಿಸುತ್ತಾ ತಮ್ಮ ಆಪ್ತ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಜಾಮೀನು ಸಿಗದೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿ ಜೈಲಿನಲ್ಲೇ ದಿನ ದೂಡುತ್ತಿರುವ ದರ್ಶನ್ ಅವರಿಗೆ, ಈ ಮದುವೆ ವಾರ್ಷಿಕೋತ್ಸವದ ದಿನದಂದು ಪತ್ನಿ ಮತ್ತು ಮಗ ನೀಡಿದ ಭೇಟಿ ದೊಡ್ಡ ಮಟ್ಟದ ಮಾನಸಿಕ ಧೈರ್ಯ ತುಂಬಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.