ಬೆಂಗಳೂರಲ್ಲಿ 60 ಬಾಂಗ್ಲಾ ಅಕ್ರಮ ವಲಸಿಗರ ಬಂಧನ

By Kannadaprabha News  |  First Published Oct 27, 2019, 2:32 PM IST

ರಾಜಧಾನಿಯಲ್ಲಿ ಬೇರೂರಿರುವ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಸಿಸಿಬಿ ಕಾರ್ಯಾಚರಣೆ ಆರಂಭಿಸಿದ್ದು, ಮೊದಲ ದಿನವೇ ನಗರದ ವಿವಿಧೆಡೆ ನೆಲೆಸಿದ್ದ 22 ಮಹಿಳೆಯರು ಸೇರಿದಂತೆ 60 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದ್ದಾರೆ.


ಬೆಂಗಳೂರು [ಅ.27]: ಅಪರಾಧ ಹಾಗೂ ನಿಷೇಧಿತ ಭಯೋತ್ಪಾದಕ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಶಂಕೆ ಮೇರೆಗೆ ರಾಜಧಾನಿಯಲ್ಲಿ ಬೇರೂರಿರುವ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಸಿಸಿಬಿ ಕಾರ್ಯಾಚರಣೆ ಆರಂಭಿಸಿದ್ದು, ಮೊದಲ ದಿನವೇ ನಗರದ ವಿವಿಧೆಡೆ ನೆಲೆಸಿದ್ದ 22 ಮಹಿಳೆಯರು ಸೇರಿದಂತೆ 60 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದ್ದಾರೆ.

ಅಲ್ಲದೆ, ಇದೇ ಮೊದಲ ಬಾರಿಗೆ ಅಕ್ರಮ ಬಾಂಗ್ಲಾ ವಲಸಿಗರನ್ನು ನಗರಕ್ಕೆ ಕರೆ ತರುತ್ತಿದ್ದ ಜಾಲವನ್ನು ಸಹ ಸಿಸಿಬಿ ಭೇದಿಸಿದ್ದು, ಇಬ್ಬರು ದಲ್ಲಾಳಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ.

Tap to resize

Latest Videos

ರಾಮಮೂರ್ತಿ ನಗರ, ಬೆಳ್ಳಂದೂರು ಹಾಗೂ ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಮುಂಜಾನೆ ವಿಶೇಷ ಕಾರ್ಯಾಚರಣೆ ನಡೆದಿದೆ. ಈ ವೇಳೆ 29 ಪುರುಷರು, 22 ಮಹಿಳೆಯರು ಹಾಗೂ 9 ಮಂದಿ ಯುವತಿಯರು ಸೇರಿದಂತೆ ಒಟ್ಟು 60 ಬಾಂಗ್ಲಾದೇಶಿ ಪ್ರಜೆಗಳು ಪತ್ತೆಯಾಗಿದ್ದಾರೆ. ಈಗ ವಶಕ್ಕೆ ಪಡೆಯಲಾಗಿರುವ ಅಕ್ರಮ ವಲಸಿಗರನ್ನು ಅವರ ದೇಶಕ್ಕೆ ಗಡೀಪಾರು ಮಾಡುವಂತೆ ವಿದೇಶಿ ನೋಂದಣಾಧಿಕಾರಿ (ಎಫ್‌ಆರ್‌ಆರ್‌ಓ) ಕಚೇರಿಗೆ ವರದಿ ಕಳುಹಿಸಲಾಗುತ್ತದೆ ಎಂದು ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ನಗರದಲ್ಲಿ ಅಪರಾಧಗಳ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಮುಂಜಾಗ್ರತಾ ಕ್ರಮಗಳನ್ನು ಸಿಸಿಬಿ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶೀಯರನ್ನು ಪತ್ತೆಹಚ್ಚಿ ಅವರನ್ನು ಸ್ವದೇಶಕ್ಕೆ ವಾಪಸ್‌ ಕಳುಹಿಸುವ ವಿಶೇಷ ಕಾರ್ಯಾಚರಣೆ ಕೈಗೊಂಡಿದೆ ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.

ಕಳೆದ ವಾರದ ಇದೇ ರೀತಿಯ ಕಾರ್ಯಾಚರಣೆಯಲ್ಲಿ ಏಳು ಮಂದಿ ಆಫ್ರಿಕಾ ಪ್ರಜೆಗಳನ್ನು ಬಂಧಿಸಲಾಗಿತ್ತು. ವಿದ್ಯಾರ್ಥಿ ಹಾಗೂ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದು ಅವಧಿ ಮುಗಿದರೂ ಅನಧಿಕೃತವಾಗಿ ಅವರು ನೆಲೆಸಿದ್ದರು. ಆ ಪ್ರಜೆಗಳನ್ನು ಎಫ್‌ಆರ್‌ಆರ್‌ಓ ಮೂಲಕ ಗಡೀಪಾರುಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದಿದ್ದಾರೆ.

ಎನ್‌ಐಎ ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತ ಸಿಸಿಬಿ:

ಇತ್ತೀಚೆಗೆ ಬಾಂಗ್ಲಾದೇಶದ ನಿಷೇಧಿತ ಸಂಘಟನೆ ಜಮಾತ್‌-ಉಲ್‌-ಮುಜಾಹಿದೀನ್‌ (ಜೆಎಂಬಿ)ನ ಸದಸ್ಯರಿಗೆ ಬೆಂಗಳೂರು ಆಶ್ರಯ ತಾಣವಾಗಿದೆ. ನಗರದ 20 ಕಡೆಗಳಲ್ಲಿ ಜೆಎಂಬಿ ನೆಲೆ ಪತ್ತೆಯಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಮುಖ್ಯಸ್ಥರು ಆತಂಕ ವ್ಯಕ್ತಪಡಿಸಿದ್ದರು.

ಎನ್‌ಐಎ ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತ ಸಿಸಿಬಿ, ರಾಜಧಾನಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆಗೆ ನಿರ್ಧರಿಸಿತು. ಅದರಂತೆ ಕೆಲ ದಿನಗಳಿಂದ ವಲಸೆ ಹಕ್ಕಿಗಳ ನೆಲೆಗಳ ಮೇಲೆ ನಿಗಾವಹಿಸಿದ ಸಿಸಿಬಿ, ಅಲ್ಲಿನ ಚಟುವಟಿಕೆಗಳ ಕುರಿತು ಮಾಹಿತಿ ಕಲೆ ಹಾಕಿ ದಾಳಿಯ ರೂಪರೇಷೆ ಸಿದ್ಧಪಡಿಸಿತು. ಕೊನೆಗೆ ಭಾನುವಾರ ಮುಂಜಾನೆ 4 ಗಂಟೆಗೆ ಏಕಕಾಲಕ್ಕೆ ಮೂರು ಕಡೆಗಳಲ್ಲಿ ಸಿಸಿಬಿ ಕಾರ್ಯಾಚರಣೆ ಆರಂಭವಾಗಿದ್ದು, ಬೆಳಗ್ಗೆ 11.30ಕ್ಕೆ ಅಂತ್ಯಗೊಂಡಿದೆ.

ರಾಮಮೂರ್ತಿ ನಗರ, ಬೆಳ್ಳಂದೂರು, ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ 60 ಜನ ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ. ಇವರೆಲ್ಲರೂ ಅಕ್ರಮ ಬಾಂಗ್ಲಾ ವಲಸಿಗರು ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿರುವುದಾಗಿ ಸಿಸಿಬಿ ಮುಖ್ಯಸ್ಥರು ಹೇಳಿದ್ದಾರೆ.

ನಗರದ ಪೊಲೀಸ್‌ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಮಾರ್ಗದರ್ಶನಗಲ್ಲಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ನೇತೃತ್ವದಲ್ಲಿ ಡಿಸಿಪಿ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ಹಾಗೂ ಸಿಸಿಬಿ ಎಸಿಪಿ ಎಸ್‌.ಎಂ.ನಾಗರಾಜ್‌ ಅವರನ್ನೊಳಗೊಂಡ ತಂಡ ದಾಳಿ ನಡೆಸಿದೆ.

ಇಬ್ಬರು ದಲ್ಲಾಳಿಗಳ ಸೆರೆ

ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚಣೆ ವೇಳೆ ಸಿಸಿಬಿ ಪೊಲೀಸರು, ಭದ್ರತಾ ಪಡೆಗಳ ಕಣ್ತಪ್ಪಿಸಿ ನಗರಕ್ಕೆ ಅಕ್ರಮ ವಲಸಿಗರನ್ನು ಕರೆತರುವ ಜಾಲದ ಇಬ್ಬರು ದಲ್ಲಾಳಿಗಳನ್ನೂ ಸೆರೆ ಹಿಡಿದಿದ್ದಾರೆ.

ರಾಮಮೂರ್ತಿ ನಗರದ ಜಮಾಲ್‌ ಹಾಗೂ ಮಾರತ್ತಹಳ್ಳಿಯ ಮೆಹಬೂಬ್‌ ಬಂಧಿತರಾಗಿದ್ದು, ಆರೋಪಿಗಳಿಂದ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಡಿಸಿಪಿ ಕುಲದೀಪ್‌ ಕುಮಾರ್‌ ಜೈನ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಅಸ್ಸಾಂ ಗಡಿ ಮೂಲಕ ಕಳ್ಳ ಹಾದಿಯಲ್ಲಿ ಭಾರತಕ್ಕೆ ಪ್ರವೇಶಿಸುತ್ತಿದ್ದ ಬಾಂಗ್ಲಾ ದೇಶದ ಪ್ರಜೆಗಳು, ಬಳಿಕ ಪಶ್ಚಿಮ ಬಂಗಾಳಕ್ಕೆ ಬಂದು ಅಲ್ಲಿಂದ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಈ ವಿದೇಶೀಯರನ್ನು ಕರೆತಂದು ಕಸ ಸಾಗಾಣಿಕೆ, ಸ್ವಚ್ಛತೆ ಹಾಗೂ ಮನೆಗೆಲಸಗಳಿಗೆ ನೇಮಿಸಿಕೊಳ್ಳುತ್ತಿದ್ದರು. ಹೀಗೆ ಬಾಂಗ್ಲಾ ಪ್ರಜೆಗಳ ವೃತ್ತಿ ಆಧರಿಸಿ ದಲ್ಲಾಳಿಗಳಿಗೆ ಕಮಿಷನ್‌ ಸಂದಾಯವಾಗುತ್ತಿತ್ತು.

ಹಲವು ವರ್ಷಗಳಿಂದ ವಲಸಿಗರ ಸಾಗಾಣಿಕೆ ಜಾಲದಲ್ಲಿ ಜಮಾಲ್‌ ಹಾಗೂ ಮೆಹಬೂಬ್‌ ಸಕ್ರಿಯವಾಗಿದ್ದು, ನೂರಾರು ಮಂದಿಯನ್ನು ಅವರು ನಗರಕ್ಕೆ ಕರೆ ತಂದಿದ್ದಾರೆ. ಈ ಸಂಪರ್ಕ ಜಾಲವನ್ನು ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಲಸಿಗರ ಬಳಿ ಆಧಾರ್‌, ವೋಟರ್‌ ಐಡಿ

ಅಕ್ರಮ ಬಾಂಗ್ಲಾ ವಲಸಿಗರ ಮನೆಗಳಲ್ಲಿ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಹಾಗೂ ಪಡಿತರ ಕಾರ್ಡ್‌ ಪತ್ತೆಯಾಗಿವೆ. ಈ ಸರ್ಕಾರಿ ದಾಖಲೆಗಳು ವಲಸಿಗರಿಗೆ ಹೇಗೆ ಲಭ್ಯವಾಗಿವೆ ಎಂಬ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಬಾಂಗ್ಲಾ ವಲಸಿಗರ ಪೂರ್ವಾಪರ ಹಾಗೂ ಅವರ ಸಂಪರ್ಕ ಜಾಲದ ಕುರಿತು ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ಬಂಧಿತರಾಗಿರುವ ಯಾರ ಬಳಿಯೂ ಪಾಸ್‌ಪೋರ್ಟ್‌, ವೀಸಾ ಪತ್ತೆಯಾಗಿಲ್ಲ. ಅವರನ್ನು ಕರೆತಂದವರ ವಿರುದ್ಧ ಪ್ರತ್ಯೇಕವಾಗಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ.

- ಸಂದೀಪ್‌ ಪಾಟೀಲ್‌, ಜಂಟಿ ಆಯುಕ್ತ, ಅಪರಾಧ

click me!