
ಬೆಂಗಳೂರು: ಏಷ್ಯಾ ಖಂಡದಲ್ಲೇ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯಾ ಕೈಗಾರಿಕಾ ಸಂಘದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ಸಂಬಂಧ ಅಂದಾಜು ವೆಚ್ಚ ಸಿದ್ದಪಡಿಸಿ ವಿಸ್ತೃತ ವರದಿ ನೀಡಬೇಕೆಂದು ಸಣ್ಣ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ವಿಜಯಾನಂದ ಕಾಶ್ಯಪ್ಪನವರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿರುವ ಪೀಣ್ಯಾದ ನೇತಾಜಿ ನಗರದಲ್ಲಿ ಪೀಣ್ಯ ಕೈಗಾರಿಕಾ ಸಂಘಕ್ಕೆ ದಿಢೀರನೇ ಭೇಟಿ ನೀಡಿ ಇಲ್ಲಿನ ಮೂಲಭೂತ ಸೌಕರ್ಯಗಳು, ಕಾರ್ಮಿಕರ ಸ್ಥಿತಿಗತಿ ನಿರ್ವಹಣೆ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಶ್ಯಪ್ಪನವರ್, ಈಪ್ರದೇಶದಲ್ಲಿ ಸಣ್ಣ ಕೈಗಾರಿಕೆಗಳಿಗೆ ರಸ್ತೆ, ಚರಂಡಿ, ವಿದ್ಯುತ್, ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆ ಇರುವುದನ್ನು ಸ್ವತಃ ಸಚಿವರೇ ಒಪ್ಪಿಕೊಂಡರು.
ಪೀಣ್ಯ ಕೈಗಾರಿಕಾ ಪ್ರದೇಶವು ಏಷ್ಯಾಖಂಡದಲ್ಲೇ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶ. ಇಲ್ಲಿ 800 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. 13 ಲಕ್ಷ ಕಾರ್ಮಿಕರು ಇದ್ದಾರೆ. ಅದರಲ್ಲಿ 5ಲಕ್ಷ ಮಹಿಳಾ ಕಾರ್ಮಿಕರು ಇದ್ದಾರೆ. ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇಂದು ನಾನು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿರುವುದರಿಂದ ನನ್ನ ಗಮನಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನು ಕಣ್ಣಾರೆ ಕಂಡಿದ್ದೇನೆ. ಮುಖ್ಯವಾಗಿ ರಸ್ತೆ, ಚರಂಡಿ, ನೀರು, ವಿದ್ಯುತ್ ಸೇರಿದಂತೆ ಹಲವು ಸೌಕರ್ಯಗಳುಬೇಕು ಇದನ್ನು ಕಲ್ಪಿಸಿಕೊಡುವ ಸಂಬಂಧ ಅಧಿಕಾರಿಗಳು ಅಂದಾಜು ವೆಚ್ಚವನ್ನು ಸಿದ್ದಪಡಿಸಿ ವರದಿ ನೀಡಬೇಕೆಂದು ಸೂಚಿಸಿದರು.
ಜಿಬಿಎ, ಬಿಡಬ್ಲ್ಯೂ ಎಸ್‌ಎಸ್‌ಬಿ ಬೆಸ್ಕಾಂ, ಸೇರಿದಂತೆ ಮತ್ತಿತರ ಇಲಾಖೆಗಳ ಕೆಲಸಗಳು ನಡೆಯುತ್ತಿರುವ ಕಾರಣ ಕಾಮಗಾರಿಗಳು ವಿಳಂಬವಾಗಿವೆ. ಅಧಿಕಾರಿಗಳಿಗೆ ಹಲವು ಬಾರಿ ಸೂಚನೆ ಕೊಟ್ಟರೂ ಪ್ರಯೋಜನವಾಗಿಲ್ಲ. ಇನ್ನು ಮುಂದೆ ಯಾವುದೇ ಕಾರಣಕ್ಕೂ ವಿಳಂಬ ನೀತಿ ಸಹಿಸುವುದಿಲ್ಲ. ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿಯನ್ನು ಮುಗಿಸಬೇಕೆಂದು ಎಚ್ಚರಿಕೆ ಕೊಟ್ಟರು.
ಶೀಘ್ರದಲ್ಲೇ ಜಿಬಿಎ ಬಿಡಬಲ್ಯುಎಸ್‌ಎಸ್‌ಬಿ, ಬೆಸ್ಕಾಂ, ಸಣ್ಣ ಕೈಗಾರಿಕೆ ಸೇರಿದಂತೆ ಮತ್ತಿತರ ಇಲಾಖೆಯ ಅಧಿಕಾರಿಗಳ ವಿಶೇಷ ಸಭೆಯನ್ನು ಕರೆಯಲಾಗುವುದು. ಯಾವ ಯಾವ ಸಮಸ್ಯೆಗಳು ಇವೆಯೋ ಅದನ್ನು ಪಟ್ಟಿ ಮಾಡಿಕೊಡಿ. ವಿಶೇಷ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಚರ್ಚಿಸಿ ಇತ್ಯರ್ಥಪಡಿಸುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಣ್ಣ ಕೈಗಾರಿಕೆಗಳಿಗೆ ವಿಶೇಷ ಒತ್ತು ಕೊಡಬೇಕೆಂದು ನನಗೆ ಸೂಚನೆ ಕೊಟ್ಟಿದ್ದಾರೆ. ಇಲಾಖೆಗೆ ಅನುದಾನವನ್ನು ಆರ್ಥಿಕ ಇತಿಮಿತಿಯೊಳಗೆ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದು ನಮ ಕೆಲಸ ಎಂದರು. ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ, ಬೃಹತ್ ಕೈಗಾರಿಕೆ, ಗಾರ್ಮೆಂಟ್‌್ಸ, ಬಿಡಿಭಾಗಗಳನ್ನು ತಯಾರು ಮಾಡಲಾಗುತ್ತದೆ. ಅತಿಹೆಚ್ಚಿನ ತೆರಿಗೆಯನ್ನು ಸಹ ಕಟ್ಟಲಾಗುತ್ತದೆ. ನಮ ಸರ್ಕಾರ ಕೈಗಾರಿಕೆಗಳ ಬೆಳವಣಿಗೆಗೆ ಎಲ್ಲ ರೀತಿಯ ಸಹಕಾರ ಕೊಡಲಿದೆ ಎಂದು ಅಭಯ ನೀಡಿದರು.
ಬೆಂಗಳೂರು ಮಾತ್ರವಲ್ಲದೆ ಮೈಸೂರು, ಚಾಮರಾಜನಗರ ಸೇರಿದಂತೆ ಮತ್ತಿತರ ಕಡೆ ಇನ್ನು ಮುಂದೆ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತೇವೆ. ಕೈಗಾರಿಕಾ ಬೆಳವಣಿಗೆಗಳಾದರೆ ದೇಶ ಅಭಿವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಣ್ಣ ಉದ್ಯಮಿಗಳು ಯಾವುದೇ ಕಾರಣಕ್ಕೂ ಆತಂಕ ಪಡಬೇಕಾದ ಅಗತ್ಯವಿಲ್ಲ. ನಿಮ ಹಿತ ಕಾಪಾಡಲು ನಮ ಸರ್ಕಾರ ಬದ್ದವಿದೆ. ಜಿಎಸ್‌ಟಿ, ತೆರಿಗೆ ಸೇರಿದಂತೆ ಕೆಲವು ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ತಂದಿದ್ದೀರಿ. ನೀವು ಹತಾಶರಾಗುವುದು ಬೇಡ. ನಿಮ ರಕ್ಷಣೆಗೆ ನಾವು ಸದಾ ಸಿದ್ದರಿದ್ದೇವೆ.
ಅದೇ ರೀತಿ ಉದ್ಯಮಿಗಳು ಕೂಡ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೆಚ್ಚು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಸಣ್ಣ ಕೈಗಾರಿಕೆ ಉದ್ಯಮಿಗಳು ಯಾರಿಗು ಕಡಿಮೆ ಇಲ್ಲದಂತೆ ಬಂಡವಾಳ ಹೂಡಲು ಮುಂದೆ ಬನ್ನಿ ಸಚಿವರು ಮನವಿ ಮಾಡಿದರು.
ಇದಕ್ಕೂ ಮುನ್ನ ವಿವಿಧ ಕೈಗಾರಿಕೆಗಳಿಗೆ ಸಚಿವರು ದೀಢೀರ್ ಭೇಟಿಕೊಟ್ಟು ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೆ ಕಾರ್ಮಿಕರಿಂದ ತಯಾರಾಗುವ ಉತ್ಪನ್ನಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಈ ವೇಳೆ ಸಣ್ಣ ಮತ್ತು ಸಾರ್ವಜನಿಕ ಉದ್ಯಮಿಗಳ ಇಲಾಖೆಯ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.