
ಬೆಂಗಳೂರು: ನೆಲಮಂಗಲ ಭಾಗದಲ್ಲಿ ಮೆಟ್ರೋ ಹಾಗೂ ಫ್ಲೈಓವರ್ ಯೋಜನೆಗಳನ್ನು ಕೈಗೊಳ್ಳುವ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಅವರು ಭೇಟಿಯಾಗಿ ಯೋಜನೆಗಳ ಕುರಿತು ಚರ್ಚಿಸಿದರು.
ನೆಲಮಂಗಲ ತಾಲೂಕು ಬೆಂಗಳೂರು ನಗರಕ್ಕೆ ತೀರಾ ಹತ್ತಿರವಿದ್ದು, ನೆಲಮಂಗಲಕ್ಕೆ ಮೆಟ್ರೋ ಸಂಪರ್ಕ ತೀರಾ ಅಗತ್ಯವಾಗಿದೆ. ಹಾಗೂ ನೆಲಮಂಗಲ ನಗರದಲ್ಲಿ ಜನಸಂದಣಿ ಹಾಗೂ ವಾಹನ ದಟ್ಟಣೆ ಹೆಚ್ಚಾಗಿದ್ದು, ಹಲವೆಡೆ ಫ್ಲೈಓವರ್ ಗಳನ್ನು ನಿರ್ಮಿಸುವ ಅವಶ್ಯಕತೆಯಿದೆ ಹಾಗೂ ರಸ್ತೆಗಳ ಅಗಲೀಕರಣ ಸಹ ಮಾಡಬೇಕಿದೆ. ಈ ನಿಟ್ಟಿನಲ್ಲಿ ನೆಲಮಂಗಲ ಕ್ಷೇತ್ರದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಮೆಟ್ರೋ ಮತ್ತು ಫ್ಲೈಓವರ್ ಕಾಮಗಾರಿಗಳಿಗೆ ಅಗತ್ಯ ಸಹಕಾರ ಹಾಗೂ ಅನುಮೋದನೆ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿ ಸಕಾರಾತ್ಮಕ ಸ್ಪಂದಿಸಿದ್ದಾರೆ ಎಂದು ಶಾಸಕ ಶ್ರನಿವಾಸ್ ತಿಳಿಸಿದ್ದಾರೆ.
ನೆಲಮಂಗಲ ತಾಲೂಕಿನ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ. ಅನುದಾನ ಬಿಡುಗಡೆ ಮಾಡಲು ಸಿದ್ಧನಿದ್ದು, ಕ್ಷೇತ್ರವನ್ನು ಅಭಿವೃದ್ಧಿಪಡಿಸುವಂತೆ ತಿಳಿಸಿ ಹಲವಾರು ಮಾರ್ಗದರ್ಶನ ನೀಡಿದ್ದಾರೆ. ನಮ್ಮ ಕ್ಷೇತ್ರದಲ್ಲಿನ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಹಾಗೂ ಸಂಚಾರ ಮತ್ತು ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು, ಸರ್ಕಾರದ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ದಿಪಡಿಸಲು ಮುಂದಾಗುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೊಸಕೋಟೆ ಶಾಸಕರಾದ ಶರತ್ ಬಚ್ಚೇಗೌಡ ಹಾಗೂ ಮುಖ್ಯಮಂತ್ರಿಯವರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು.
ಇದನ್ನೂ ಓದಿ: ನನಸಾಗುವ ಸನಿಹ ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಪ್ರಾಜೆಕ್ಟ್, ಈ ಸ್ಥಳಗಳಲ್ಲಿ ಪ್ಲ್ಯಾನ್ ಆಗಿದೆ 25 ಸ್ಟೇಷನ್ಸ್!