
ಬೆಂಗಳೂರು (ಸೆ.14) ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ಅತೀ ದೊಡ್ಡ ಸವಾಲು. ಇನ್ನು ಮನೆ ಹುಡುಕಿ ವಾಸವಾದ ಬಳಿಕ ಮನೆ ಬಿಡುವುದು ಮತ್ತೊಂದು ತಲೆನೋವು. ಮನೆ ಖಾಲಿ ಮಾಡುವಾಗ ನೀಡಿದ ಅಡ್ವಾನ್ಸ್ ಮರಳಿ ಪಡೆಯಲು ಹೋರಾಟ ಮಾಡಬೇಕಾಗುತ್ತದೆ. ಹೀಗೆ ಬಾಡಿಗೆದಾರ ತನ್ನ ಅಡ್ವಾನ್ಸ್ ಹಣದ ಲೆಕ್ಕ ಕೇಳಿದರೆ ಮಾಲೀಕನ ಉತ್ತರ ನೋಡಿ ಕಂಗಾಲಾಗಿದ್ದಾನೆ. 1.3 ಲಕ್ಷ ರೂಪಾಯಿ ಅಡ್ವಾನ್ಸ್ ಹಣದಲ್ಲಿ ಪೈಟಿಂಗ್, ನಿರ್ವಹಣೆ ಸೇರಿದಂತೆ ಹಲವು ಚಾರ್ಜಸ್ ಹೆಸರಿನಲ್ಲಿ 1.11 ಲಕ್ಷ ರೂಪಾಯಿ ಮುರಿದುಕೊಂಡು ಕೇವಲ 19 ಸಾವಿರ ರೂಪಾಯಿ ಮರಳಿ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಿಡದಿಯ ಬಳಿಯ ಮನೆ ಮಾಲೀಕನ ನಡೆ ಕುರಿತು ಬಾಡಿಗೆದಾರ ಹೇಳಿಕೊಂಡಿದ್ದಾನೆ. ರೆಡ್ಡಿಟ್ ಮೂಲಕ ಈ ಘಟನೆ ಪೋಸ್ಟ್ ಮಾಡಿದ್ದಾನೆ. ಬಿಡದಿ ಬಳಿ 3 ಬೆಡ್ ರೂಂ ಮನೆ ಬಾಡಿಗೆ ಪಡೆದುಕೊಂಡಿದ್ದ. ಎರಡು ವರ್ಷ ವಾಸವಿದ್ದ ಈತ ಹಾಗೂ ಕುಟುಂಬ ಮಾಲೀಕನ ಸೂಚನೆಯಿಂದ ಮೂರು ತಿಂಗಳ ಮೊದಲು ಮನೆ ಖಾಲಿ ಮಾಡುವುದಾಗಿ ಸೂಚಿಸಿದ್ದ. 3 ತಿಂಗಳ ಬಳಿಕ ಮನೆ ಖಾಲಿ ಮಾಡಲಾಗಿದೆ.
ಮನೆ ಖಾಲಿ ಮಾಡುವಾಗ ಮನೆ ಮಾಲೀಕನ ಬಳಿ ತಮ್ಮ ಅಡ್ವಾನ್ಸ್ ಮೊತ್ತ ಹಿಂದಿರುಗಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಮಾಲೀಕನ ಕೇವಲ 19 ಸಾವಿರ ರೂಪಾಯಿ ಮರಳಿ ನೀಡಿದ್ದಾನೆ. ಬೇರೆ ಬಾಡಿಗೆದಾರರ ಲೆಕ್ಕ ಎಂದು ನಾನು 1.3 ಲಕ್ಷ ರೂಪಾಯಿ ನೀಡಿದ್ದೆ. ನೀವು ಕೇವಲ 19 ಸಾವಿರ ರೂಪಾಯಿ ಮರಳಿ ಕೊಟ್ಟಿದ್ದೀರಿ. ತಪ್ಪಾಗಿ ಚೆಕ್ ಮಾಡಿ ಎಂದು ಬಾಡಿಗೆದಾರ ಸೂಚಿಸಿದ್ದಾನೆ. ಆದರೆ ಮಾಲೀಕ ನಿಮ್ಮ ಬಾಕಿ ಮೊತ್ತ ಇಷ್ಟೇ ಎಂದು ಉತ್ತರಿಸಿದ್ದಾನೆ.
ಪೈಂಟಿಂಗ್ ಚಾರ್ಜಸ್, ಮನೆ ನಿರ್ವಹಣೆ ಚಾರ್ಜಸ್, ಫ್ಲೋರ್ ಕ್ಲೀನಿಂಗ್ ಚಾರ್ಜಸ್, ಮನೆಯ ಕೆಲ ವಸ್ತುಗಳನ್ನು ಹೊಸದಾಗಿ ಹಾಕಬೇಕಿದೆ ಎಂದು ಹಲವು ಕಾರಣ ನೀಡಿ ಬರೋಬ್ಬರಿ 1.11 ಲಕ್ಷ ರೂಪಾಯಿ ಅಡ್ವಾನ್ಸ್ ಹಣದಲ್ಲಿ ಕಟ್ ಮಾಡಿದ್ದಾನೆ. ಉಳಿದ 19 ಸಾವಿರ ರೂಪಾಯಿ ನೀಡಿದ್ದಾನೆ. ಬಾಡಿಗೆದಾರ ಹಲವು ರೀತಿಯಲ್ಲಿ ಮನವಿ ಮಾಡಿದ್ದಾನೆ. ಪೈಟಿಂಗ್, ಕೊನೆಯ ತಿಂಗಳ ಬಾಡಿಗೆ 16 ಸಾವಿರ ರೂಪಾಯಿ ಎಲ್ಲಾ ಸೇರಿ 40 ಸಾವಿರ ರೂಪಾಯಿವರೆಗೆ ಕಡಿತ ಮಾಡಿ, ಬಾಕಿ ಹಣ ನೀಡಿ ಎಂದು ಮನವಿ ಮಾಡಿದರೂ ಮಾಲೀಕ ಮಾತ್ರ ಕೇಳಿಸಿಕೊಳ್ಳಲಿಲ್ಲ. ನಿಮಗೆ 19 ಸಾವಿರ ರೂಪಾಯಿ ಕೊಟ್ಟಿದ್ದೆ ಹೆಚ್ಚು ಎಂದಿದ್ದಾನೆ.
ಬಾಡಿಗೆ ಕರಾರು ಪತ್ರದಲ್ಲಿ ಈ ರೀತಿಯ ಯಾವುದೇ ಉಲ್ಲೇಖವಿಲ್ಲ. ನಿರ್ವಹಣೆ ಚಾರ್ಜಸ್, ಪೈಟಿಂಗ್ ಚಾರ್ಜಸ್ ನೀಡಬೇಕು ನಿಜ. ಆದರೆ ಇಷ್ಟೊಂದಾ? ಏನು ಮಾಡಲಿ ಎಂದು ಬಾಡಿಗೆದಾರ ರೆಡ್ಡಿಟ್ ಮೂಲಕ ಸಲಹೆ ಕೇಳಿದ್ದಾನೆ.