Hoskote Highway Tragedy: ತಾಯಿಗೆ ಗೊತ್ತಿಲ್ಲದೆ ಸ್ನೇಹಿತರ ಜೊತೆ ಹೋದವ ಹೆಣವಾದ; ಕಣ್ಣಿಲ್ಲದ ಅಮ್ಮನ ನೋಡಿಕೊಳ್ತಿದ್ದ ಮಗ ಛಿದ್ರವಾದ!

Published : Feb 13, 2026, 09:45 AM IST
Hoskote Accident Car and Canter

ಸಾರಾಂಶ

Tragic Hoskote Accident: 7 Dead in XUV and Bike Serial Collision ಹೊಸಕೋಟೆ ಬಳಿ ನಡೆದ ಭೀಕರ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿವೇಗವಾಗಿ ಬಂದ ಎಕ್ಸ್‌ಯುವಿ ಕಾರು ನಿಯಂತ್ರಣ ತಪ್ಪಿ ಬೈಕ್ ಹಾಗೂ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ.

ಹೊಸಕೋಟೆ (ಫೆ.13): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹೊರವಲಯದ ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಸುಕಿನ ಜಾವ ಕರುಳು ಹಿಂಡುವಂತಹ ಭೀಕರ ಸರಣಿ ಅಪಘಾತ ಸಂಭವಿಸಿದೆ. ಅತಿವೇಗವಾಗಿ ಬಂದ ಕಾರೊಂದು ಬೈಕ್ ಹಾಗೂ ಕ್ಯಾಂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಸುಕಿನ ಜಾವ ನಡೆದಿದ್ದೇನು?

ಘಟನೆ ನಸುಕಿನ ಜಾವ ಸುಮಾರು 4:50 ರ ಸಮಯದಲ್ಲಿ ಸಂಭವಿಸಿದೆ. ಹೊಸಕೋಟೆಯಿಂದ ದೇವನಹಳ್ಳಿ ಕಡೆಗೆ ಅತಿವೇಗವಾಗಿ ಧಾವಿಸುತ್ತಿದ್ದ KA 03 NW 0138 ನೋಂದಣಿ ಸಂಖ್ಯೆಯ XUV 700 ಕಾರು, ಎಂ. ಸತ್ಯವರ ಗ್ರಾಮದ ಬಳಿ ನಿಯಂತ್ರಣ ಕಳೆದುಕೊಂಡು ಮುಂದೆ ಚಲಿಸುತ್ತಿದ್ದ ಬೈಕ್‌ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಬೈಕ್‌ಗೆ ಡಿಕ್ಕಿ ಹೊಡೆದ ನಂತರವೂ ನಿಯಂತ್ರಣಕ್ಕೆ ಬಾರದ ಕಾರು, ಡಿವೈಡರ್‌ಗೆ ಅಪ್ಪಳಿಸಿ ಪಲ್ಟಿಯಾಗಿ ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ತೀವ್ರತೆಗೆ ಕ್ಯಾಂಟರ್ ಕೂಡ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಅದರ ಹಿಂಭಾಗದ ಚಕ್ರದ ಭಾಗ ನಡುರಸ್ತೆಯಲ್ಲಿ ಬಿದ್ದಿತ್ತು. ಈ ವೇಳೆ ಅತ್ತ ಬರುತ್ತಿದ್ದ ಬ್ರಿಜಾ ಕಾರೊಂದು ಆ ಚಕ್ರಕ್ಕೆ ಡಿಕ್ಕಿ ಹೊಡೆದಿದೆ. ಹೀಗೆ ಬೈಕ್, ಎಕ್ಸ್‌ಯುವಿ ಕಾರು, ಕ್ಯಾಂಟರ್ ಮತ್ತು ಬ್ರಿಜಾ ಕಾರುಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ.

ಮೃತರ ವಿವರ:

ಈ ದುರಂತದಲ್ಲಿ ಎಕ್ಸ್‌ಯುವಿ ಕಾರಿನಲ್ಲಿದ್ದ ಆರು ಮಂದಿ ಹಾಗೂ ಬೈಕ್ ಸವಾರ ಸೇರಿ ಒಟ್ಟು 7 ಜನರು ಸಾವನ್ನಪ್ಪಿದ್ದಾರೆ.

ಗಗನ್‌ (26 ವರ್ಷ): ಬೈಕ್ ಸವಾರ. ದೇವನಹಳ್ಳಿ ತಾಲೂಕಿನ ದೇವನಾಯಕನಹಳ್ಳಿ ನಿವಾಸಿ. ಫ್ಯಾಕ್ಟರಿಯೊಂದರಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ತಂದೆ-ತಾಯಿಗೆ ಈತ ಏಕೈಕ ಪುತ್ರನಾಗಿದ್ದು, ಕಣ್ಣಿಲ್ಲದ ತಾಯಿಯನ್ನು ನೋಡಿಕೊಂಡು ದಿನಗಳನ್ನು ಕಳೆಯುತ್ತಿದ್ದ ಎನ್ನಲಾಗಿದೆ.

ಅಶ್ವಿನ್ ನಾಯರ್ (17 ವರ್ಷ): ಎಕ್ಸ್‌ಯುವಿ ಕಾರಿನಲ್ಲಿದ್ದ ಮೃತರಲ್ಲಿ ಒಬ್ಬ. ಈತ ಯಲಹಂಕದ ಆರ್.ವಿ. ಪಿಯು ಕಾಲೇಜಿನ ವಿದ್ಯಾರ್ಥಿ. ಇನ್ನುಳಿದ ಐವರು ಕೂಡ ಇದೇ ಕಾಲೇಜಿನ ವಿದ್ಯಾರ್ಥಿಗಳೆಂದು ಶಂಕಿಸಲಾಗಿದೆ.

ಮನೆಯಲ್ಲಿದ್ದಾನೆ ಎಂದುಕೊಂಡಿದ್ದ ಮಗ ಹೆಣವಾಗಿದ್ದ!

ಮೃತ ಅಶ್ವಿನ್ ನಾಯರ್ ಕುಟುಂಬ ಎರಡು ವರ್ಷಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ನೆಲೆಸಿತ್ತು. ಅಮ್ಮನಿಗೆ ಗೊತ್ತಿಲ್ಲದೆ ಅಶ್ವಿನ್ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಹೊರಹೋಗಿದ್ದ. ಮಗ ಮನೆಯಲ್ಲೇ ಮಲಗಿದ್ದಾನೆ ಎಂದು ತಾಯಿ ಭಾವಿಸಿದ್ದರು. ಆದರೆ, ಸೆಕ್ಯೂರಿಟಿ ಗಾರ್ಡ್ ಬಂದು ನಿಮ್ಮ ಮಗ ಯಾರ ಜೊತೆಯೋ ಕಾರಿನಲ್ಲಿ ಹೋಗಿದ್ದಾನೆ ಎಂದು ಹೇಳಿದಾಗ ತಾಯಿಗೆ ಆತಂಕ ಶುರುವಾಗಿದೆ. ಕೂಡಲೇ ಅಶ್ವಿನ್ ಮೊಬೈಲ್‌ಗೆ ಕರೆ ಮಾಡಿದಾಗ, ಪೊಲೀಸರು ಕರೆ ಸ್ವೀಕರಿಸಿ ನಿಮ್ಮ ಮಗ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂಬ ಕಹಿ ಸುದ್ದಿಯನ್ನು ನೀಡಿದ್ದಾರೆ.

ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಹೊಸಕೋಟೆ ಡಿವೈಎಸ್ಪಿ ಮಲ್ಲೇಶ್, ಕೇಂದ್ರ ವಲಯ ಐಜಿಪಿ ಲಾಬುರಾಮ್ ಮತ್ತು ಎಸ್ ಪಿ ಚಂದ್ರಕಾಂತ್ ಅವರು ಸ್ಥಳಕ್ಕೆ ಹಾಗೂ ಹೊಸಕೋಟೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಎಲ್ಲಾ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಹೊಸಕೋಟೆ ಹೊರವಲಯದಲ್ಲಿ ಸಂಭವಿಸಿದ ಈ ಘಟನೆಯಿಂದಾಗಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

PREV
Read more Articles on
click me!

Recommended Stories

ಹೊಸಕೋಟೆ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಏಳು ಮಂದಿ ದುರ್ಮರಣ, ಬೆಂಗಳೂರಿನ ಆರು ಮಂದಿ ಸಾವು!
Karnataka Live: Byrathi Basavaraj ಬಿಕ್ಲು ಶಿವ ಹತ್ಯೆ ಪ್ರಕರಣ - ರಾತ್ರೋರಾತ್ರಿ ಅರೆಸ್ಟ್ ಪ್ರೊಸೆಸ್ ಕಂಪ್ಲೀಟ್; ಇಂದು ಕೋರ್ಟ್‌ಗೆ ಹಾಜರು!