ಹೊಸಕೋಟೆ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಏಳು ಮಂದಿ ದುರ್ಮರಣ, ಬೆಂಗಳೂರಿನ ಆರು ಮಂದಿ ಸಾವು!

Published : Feb 13, 2026, 09:27 AM IST
Hoskote Accident

ಸಾರಾಂಶ

ಹೊಸಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿವೇಗವಾಗಿ ಬಂದ ಕಾರು ಬೈಕ್ ಹಾಗೂ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ.

ಬೆಂಗಳೂರು (ಫೆ.13): ಹೊಸಕೋಟೆ ತಾಲೂಕಿನ ಎಂ.ಸತ್ಯವರ ಗ್ರಾಮದ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದ್ದು, ಅತಿವೇಗ ಮತ್ತು ರಸ್ತೆಯ ಅವೈಜ್ಞಾನಿಕ ವಿನ್ಯಾಸವೇ ಈ ಅನಾಹುತಕ್ಕೆ ಕಾರಣವೆನ್ನಲಾಗಿದೆ.

ಅತಿವೇಗವಾಗಿ ಬಂದ ಎಕ್ಸ್ ‌ಯುವಿ (XUV) ಕಾರು ಮೊದಲು ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ಕಾರು, ಪಕ್ಕದಲ್ಲೇ ಸಾಗುತ್ತಿದ್ದ ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಭೀಕರ ಸರಣಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಆರು ಮಂದಿ ಮತ್ತು ಬೈಕ್ ಸವಾರ ಗಗನ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಕೊತ್ತನೂರು ಮೂಲದವರು

ಮೃತಪಟ್ಟವರಲ್ಲಿ ಆರು ಮಂದಿ ಬೆಂಗಳೂರಿನ ಕೊತ್ತನೂರು ಮೂಲದವರು ಎಂದು ಗುರುತಿಸಲಾಗಿದೆ. ಎಲ್ಲರೂ ಕಾಲೇಜು ವಿದ್ಯಾರ್ಥಿಗಳು ಎನ್ನಲಾಗಿದ್ದು, ಒಬ್ಬನನ್ನು ಅಶ್ವಿನ್‌ ನಾಯರ್‌ ಎಂದು ಪತ್ತೆಮಾಡಲಾಗಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌.ಪಿ ಚಂದ್ರಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಭೀಕರ ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಸಾಧುಪ್ಪನಹಳ್ಳಿಯಿಂದ ಕಮಳಿಪುರ ಬ್ರಿಡ್ಜ್ ವರೆಗಿನ ರಸ್ತೆಯು ಅತ್ಯಂತ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ಈ ಬಗ್ಗೆ ಕಾಮಗಾರಿ ವೇಳೆಯಲ್ಲೇ ಎಂಜಿನಿಯರ್ ಒಬ್ಬರು ಆಕ್ಷೇಪವೆತ್ತಿದ್ದರೂ ಪ್ರಾಧಿಕಾರ ಗಮನಹರಿಸಿಲ್ಲ ಎಂದು ಗ್ರಾಮಸ್ಥ ಮಂಜುನಾಥ್ ದೂರಿದ್ದಾರೆ. ನಿಯಮದ ಪ್ರಕಾರ ಸರ್ವೀಸ್ ರಸ್ತೆಗಳು 18 ಅಡಿ ಇರಬೇಕು. ಆದರೆ ಇಲ್ಲಿ ಕೇವಲ 2.5 ರಿಂದ 3 ಅಡಿ ಮಾತ್ರ ಇದ್ದು, ವಾಹನ ಸವಾರರು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ.

2010ರಲ್ಲಿ ಈ ಯೋಜನೆಗಾಗಿ ಭೂಮಿ ಬಿಟ್ಟುಕೊಟ್ಟ ರೈತರಿಗೆ ಸರಿಯಾದ ಪರಿಹಾರವೂ ಸಿಕ್ಕಿಲ್ಲ, ಇತ್ತ ರಸ್ತೆಯೂ ಸುರಕ್ಷಿತವಾಗಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತದ ನಿಖರ ಕಾರಣಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

PREV
Read more Articles on
click me!

Recommended Stories

ಹೊಸಕೋಟೆ ಭೀಕರ ಅಪಘಾತ: 7 ಮಂದಿ ಮೃತರ ಗುರುತು ಪತ್ತೆ, ಸಾವನ್ನಪ್ಪಿದವರು 17 ವರ್ಷದ ವಿದ್ಯಾರ್ಥಿಗಳು!
ನಸುಕಿನ ನಿದ್ದೆಯಲ್ಲಿದ್ದ ಅಮ್ಮಂದಿರಿಗೆ ಸಿಕ್ಕಿತು ಮಕ್ಕಳ ಸಾವಿನ ನ್ಯೂಸ್‌: ಹೊಸಕೋಟೆ ಆಕ್ಸಿಡೆಂಟ್‌ನ ಭೀಕರತೆ ತಿಳಿಸುವ 10 ಚಿತ್ರಗಳು!