ದೇವನಹಳ್ಳಿ MSME ತಂತ್ರಜ್ಞಾನ ಕೇಂದ್ರದಿಂದ 10 ಸಾವಿರ ಮಂದಿಗೆ ಆಧುನಿಕ ಕೌಶಲ್ಯ ತರಬೇತಿ

Published : Sep 10, 2026, 06:55 PM IST
Devanahalli MSME Technology Centre

ಸಾರಾಂಶ

156 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪನೆಯಾಗಿರುವ ಕೇಂದ್ರದಲ್ಲಿ 10 ಸಾವಿರ ಮಂದಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಏನಿದು MSME ತಂತ್ರಜ್ಞಾನ ಕೌಶಲ್ಯ ತರಬೇತಿ? ಯಾರೆಗೆಲ್ಲಾ ಈ ಕೌಶಲ್ಯ ತರಬೇತಿ ನೀಡಲಾಗುತ್ತದೆ?

ಬೆಂಗಳೂರು(ಸೆ.10) : ದೇವನಹಳ್ಳಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಆರಂಭಗೊಂಡಿರುವ ಎಂಎಸ್‌ಎಂಇ ತಂತ್ರಜ್ಞಾನ ಕೇಂದ್ರ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಉದ್ಯಮ ವಲಯದ ಇಂದಿನ ಅಗತ್ಯಗಳಿಗೆ ಹೊಂದುವ ಆಧುನಿಕ ಕೌಶಲ್ಯ ತರಬೇತಿ ಅವಕಾಶ ಕಲ್ಪಿಸಿದೆ. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ದುಬಾರಿ ತಂತ್ರಜ್ಞಾನ, ವಿನ್ಯಾಸ ಹಾಗೂ ಪರೀಕ್ಷಾ ಸೌಲಭ್ಯಗಳನ್ನು ಬಳಸಿಕೊಳ್ಳುವ ಅವಕಾಶವನ್ನೂ ಈ ಕೇಂದ್ರ ನೀಡಲಿದೆ ಎಂದು ಕರ್ನಾಟಕ ಸರ್ಕಾರದ ಎಂಎಸ್‌ಎಂಇ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

156 ಕೋಟಿ ವೆಚ್ಚದಲ್ಲಿ ಕೇಂದ್ರ ಸ್ಥಾಪನೆ

ಎಂಎಸ್‌ಎಂಇ ತಂತ್ರಜ್ಞಾನ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಎಂಎಸ್‌ಎಂಇ ಸಚಿವಾಲಯವು ಸುಮಾರು ₹156 ಕೋಟಿ ವೆಚ್ಚದಲ್ಲಿ, ಕರ್ನಾಟಕ ಸರ್ಕಾರ ಒದಗಿಸಿರುವ 10 ಎಕರೆ ಜಾಗದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ . ಈ ಕೇಂದ್ರವು ವಿಶೇಷವಾಗಿ *Electronics System Design and Manufacturing (ESDM)* ಹಾಗೂ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳಿಗೆ ಒತ್ತು ನೀಡಲಿದೆ ಎಂದರು.

ಅತ್ಯಾಧುನಿಕ ತಂತ್ರಜ್ಞಾನ ಕೌಶಲ್ಯ ತರಬೇತಿ

ಕೇಂದ್ರದಲ್ಲಿ *Surface Mount Technology (SMT), additive manufacturing, CNC machining, design, prototyping ಹಾಗೂ advanced testing* ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿವೆ. ಇಂತಹ ಮೂಲಸೌಕರ್ಯದಲ್ಲಿ ಪ್ರತ್ಯೇಕವಾಗಿ ಭಾರಿ ಹೂಡಿಕೆ ಮಾಡಲು ಸಾಧ್ಯವಾಗದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಈ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಉತ್ಪನ್ನ, ಉತ್ಪಾದನಾ ಪ್ರಕ್ರಿಯೆ ಹಾಗೂ ಗುಣಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂದು ಅವರು ಹೇಳಿದರು.

“ಈ ಕೇಂದ್ರದ ನಿಜವಾದ ಶಕ್ತಿ ಇಲ್ಲಿ ಸ್ಥಾಪಿಸಿರುವ ಯಂತ್ರೋಪಕರಣಗಳಲ್ಲಿ ಮಾತ್ರವಲ್ಲ; ಅವುಗಳಿಂದ ಸೃಷ್ಟಿಯಾಗುವ ಸಾಮರ್ಥ್ಯದಲ್ಲಿದೆ. ಒಬ್ಬ ಉದ್ಯಮಿ ತನ್ನ ಹೊಸ ಆಲೋಚನೆಯೊಂದಿಗೆ ಇಲ್ಲಿ ಬಂದು ಪ್ರೋಟೋಟೈಪ್ ಅಭಿವೃದ್ಧಿಪಡಿಸಿ, ಪರೀಕ್ಷಿಸಿ, ಗುಣಮಟ್ಟ ಹೆಚ್ಚಿಸಿ, ಉತ್ಪಾದನಾ ಕೌಶಲ್ಯ ಪಡೆದು ಮಾರುಕಟ್ಟೆಯತ್ತ ಸಾಗಲು ಅಗತ್ಯವಿರುವ ಸೌಲಭ್ಯಗಳನ್ನು ಈ ಕೇಂದ್ರ ಒದಗಿಸಲಿದೆ,” ಎಂದು ರೋಹಿಣಿ ಸಿಂಧೂರಿ ಹೇಳಿದರು.

ಕೇಂದ್ರವು ಪ್ರತಿ ವರ್ಷ ಸುಮಾರು 10,000 ಮಂದಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿದ್ದು, ಉದ್ಯಮದ ಪ್ರಸ್ತುತ ಅಗತ್ಯಗಳಿಗೆ ತಕ್ಕ ಪ್ರಾಯೋಗಿಕ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಲಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಯುವ ವೃತ್ತಿಪರರು ತರಗತಿ ಜ್ಞಾನದ ಜೊತೆಗೆ ಕೈಗಾರಿಕೆಗಳಲ್ಲಿ ಬಳಕೆಯಾಗುತ್ತಿರುವ ನವೀನ ತಂತ್ರಜ್ಞಾನಗಳ ನೇರ ಅನುಭವ ಪಡೆಯಲು ಸಾಧ್ಯವಾಗಲಿದೆ ಎಂದರು.

ದೇವನಹಳ್ಳಿ–ಬೆಂಗಳೂರು ವಲಯದಲ್ಲಿ ಏರೋಸ್ಪೇಸ್, ರಕ್ಷಣಾ ಉತ್ಪಾದನೆ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳು ವೇಗವಾಗಿ ಬೆಳೆಯುತ್ತಿವೆ. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನ ಕೇಂದ್ರವು ವಿದ್ಯಾರ್ಥಿಗಳು, ಎಂಎಸ್‌ಎಂಇಗಳು ಮತ್ತು ದೊಡ್ಡ ಕೈಗಾರಿಕೆಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ತಿಳಿಸಿದರು.

“ಸಣ್ಣ ಉದ್ಯಮಗಳು ಪ್ರತ್ಯೇಕವಾಗಿ ದುಬಾರಿ ಯಂತ್ರೋಪಕರಣಗಳು, ಪರೀಕ್ಷಾ ಪ್ರಯೋಗಾಲಯಗಳು, ವಿನ್ಯಾಸ ಸೌಲಭ್ಯಗಳು ಅಥವಾ ವಿಶೇಷ ತಾಂತ್ರಿಕ ಪರಿಣತಿಯಲ್ಲಿ ಹೂಡಿಕೆ ಮಾಡುವುದು ಎಲ್ಲ ಸಂದರ್ಭದಲ್ಲೂ ಸಾಧ್ಯವಿಲ್ಲ. ಇಂತಹ ಸಾಮಾನ್ಯ ತಂತ್ರಜ್ಞಾನ ಸೌಲಭ್ಯಗಳು ಅವರ ಉತ್ಪಾದಕತೆ, ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದರ ಜೊತೆಗೆ ದೊಡ್ಡ ಕೈಗಾರಿಕಾ ಮೌಲ್ಯ ಸರಪಳಿಗಳಲ್ಲಿ ಭಾಗಿಯಾಗಲು ನೆರವಾಗುತ್ತವೆ,” ಎಂದು ಸಿಂಧೂರಿ ಹೇಳಿದರು.

“ಬೆಂಗಳೂರು ಸುತ್ತಮುತ್ತ ರೂಪುಗೊಳ್ಳುತ್ತಿರುವ ಏರೋಸ್ಪೇಸ್, ರಕ್ಷಣಾ, ಎಲೆಕ್ಟ್ರಾನಿಕ್ಸ್ ಮತ್ತು ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಮೌಲ್ಯ ಸರಪಳಿಗಳ ಹೊರಗೆ ನಮ್ಮ ಎಂಎಸ್‌ಎಂಇಗಳು ಉಳಿಯಬಾರದು. ಅವು ಈ ಬೆಳವಣಿಗೆಯ ಅವಿಭಾಜ್ಯ ಭಾಗವಾಗಬೇಕು,” ಎಂದರು.

ಕರ್ನಾಟಕದ ಮುಂದಿನ ಹಂತದ ಎಂಎಸ್‌ಎಂಇ ಅಭಿವೃದ್ಧಿಯಲ್ಲಿ ತಂತ್ರಜ್ಞಾನ ಅಳವಡಿಕೆ, ಕ್ಲಸ್ಟರ್ ಅಭಿವೃದ್ಧಿ, ಸಾಮಾನ್ಯ ಸೌಲಭ್ಯ ಕೇಂದ್ರಗಳು, ಕೌಶಲ್ಯಾಭಿವೃದ್ಧಿ, ಗುಣಮಟ್ಟ, ನವೋದ್ಯಮ, ಡಿಜಿಟಲೀಕರಣ, ಮಾರುಕಟ್ಟೆ ಪ್ರವೇಶ, ಹಸಿರು ಉತ್ಪಾದನೆ ಹಾಗೂ ದೇಶೀಯ ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಪರ್ಕ ಪ್ರಮುಖವಾಗಲಿದೆ ಎಂದು ಅವರು ಹೇಳಿದರು. ದೇವನಹಳ್ಳಿ ಎಂಎಸ್‌ಎಂಇ ತಂತ್ರಜ್ಞಾನ ಕೇಂದ್ರವು ಸಣ್ಣ ಉದ್ಯಮಗಳನ್ನು ಸಾಂಪ್ರದಾಯಿಕ ಉತ್ಪಾದನೆಯಿಂದ ತಂತ್ರಜ್ಞಾನ ಆಧಾರಿತ, ಗುಣಮಟ್ಟ ಕೇಂದ್ರೀಕೃತ ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಉದ್ಯಮಗಳಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ರೋಹಿಣಿ ಸಿಂಧೂರಿ ವಿಶ್ವಾಸ ವ್ಯಕ್ತಪಡಿಸಿದರು.ದೇವನಹಳ್ಳಿ ಏರೋಸ್ಪೇಸ್ ಪಾರ್ಕ್‌ನಲ್ಲಿರುವ ಎಂಎಸ್‌ಎಂಇ ತಂತ್ರಜ್ಞಾನ ಕೇಂದ್ರವನ್ನು ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಖಾತೆ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಕೈಗಾರಿಕಾ ವಲಯದ ಪ್ರತಿನಿಧಿಗಳು ಹಾಗೂ ಉದ್ಯಮಿಗಳು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ವಿಚಾರಣೆಗೆ ತೆರಳಿದ ಪೊಲೀಸರಿಗೆ ಪ್ರಜ್ವಲ್ ಅವಾಜ್, ನಾನ್ಯಾರು ಗೊತ್ತಾ? ಮಾಜಿ ಸಂಸದ
ಜಯಲಲಿತಾ ಮಾದರಿಯಲ್ಲೇ ದರ್ಶನ್ ವಿಚಾರಣೆ? ಖುದ್ದು ಹಾಜರಾತಿ ಅರ್ಜಿಗೆ ಹೈಕೋರ್ಟ್ ಮಹತ್ವದ ಸಲಹೆ