ಪೋಷಕರ ಮಡಿಲು ಸೇರಲು ಬೆಂಗ್ಳೂರಿಂದ-ಆಸ್ಟ್ರೇಲಿಯಾಗೆ ಒಬ್ಬಳೇ ಪ್ರಯಾಣಿಸಿದ 5 ವರ್ಷದ ಬಾಲಕಿ!

By Suvarna NewsFirst Published May 28, 2020, 3:25 PM IST
Highlights

ಕೊರೋನಾ ವೈರಸ್ ವಕ್ಕರಿಸಿದ ಮೇಲೆ ಬಹುತೇಕರು ಒಂದಲ್ಲಾ ಒಂದು ರೀತಿ ಸಂಕಷ್ಟ ಎದುರಿಸಿದ್ದಾರೆ. ವಿದೇಶದಲ್ಲಿ ಸಿಲುಕಿದ್ದ ಹಲವು ಭಾರತೀಯರು ಸ್ವದೇಶಕ್ಕೆ ಮರಳುತ್ತಿದ್ದಾರೆ. ಮಕ್ಕಳನ್ನು ದೂರದಿಂದ ನೋಡಿದ ಪೋಷಕರು ಆನಂದ ಬಾಷ್ಪ ಸುರಿದ ಘಟನೆಗಳು ನಡೆದಿದೆ. ಇದೀಗ 5 ವರ್ಷದ ಬೆಂಗಳೂರು ಹುಡುಗಿ ಪೋಷಕರ ಮಡಿಲು ಸೇರಲು ಒಬ್ಬಳೆ ಆಸ್ಟ್ರೇಲಿಯಾಗೆ ಪ್ರಯಾಣಿಸಿದ್ದಾಳೆ.  ಈ ಹೃದಯಸ್ಪರ್ಶಿ ಘಟನೆ ಕುರಿತ ವಿವರ ಇಲ್ಲಿದೆ.

ಬೆಂಗಳೂರು(ಮೇ.28): ಕಳೆದ 3 ತಿಂಗಳಿನಿಂದ ತಾಯಿಯಿಂದ ದೂರವಿದ್ದ 5 ವರ್ಷದ ಬಾಲಕನೊಬ್ಬ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದಾಗ ಬಿಗಿದಪ್ಪಿ ಮುದ್ದಾಡಿದ ಹೃದಯಸ್ವರ್ಶಿ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಇದೀಗ ಇದೇ ರೀತಿ, ಆದರೆ ಕೊಂಚ ಭಿನ್ನವಾದ ಪ್ರಯಾಣ ಒಂದು ವರದಿಯಾಗಿದೆ.  ಕಳೆದ 8 ತಿಂಗಳಿನಿಂದ ತಾಯಿಯಿಂದ  ದೂರವಿದ್ದ ಬೆಂಗಳೂರಿನ ಬಾಲಕಿ, ಪೋಷಕರ ಮಡಿಲು ಸೇರಲು ಬರೊಬ್ಬರಿ 10,000 ಕಿಲೋಮೀಟರ್ ಒಬ್ಬಳೆ ಪ್ರಯಾಣಿಸಿದ್ದಾಳೆ.

ತಾಯಿ ಮಡಿಲು ಸೇರಲು ವಿಮಾನದಲ್ಲಿ ಒಬ್ಬನೇ ಬಂದ 5ರ ಬಾಲಕ!.

ಬೆಂಗಳೂರಿನ 5 ವರ್ಷದ ಬಾಲಕಿ ವಿಯೋನಾ ಶರತ್ ತಾಯಿ ಸಿಂಧು ಸೊಕ್ಕ ಕಳೆದ 8 ತಿಂಗಳ ಹಿಂದೆ ಉದ್ಯೋಗದ ನಿಮಿತ್ತ ಆಸ್ಟ್ರೇಲಿಯಾದ ಸಿಡ್ನಿಗೆ ತೆರಳಿದ್ದರು. 4 ತಿಂಗಳ ಹಿಂದೆ ವಿಯೋನಾಳ ತಂದೆ ಶರತ್ ಕುಮಾರ್ ಸಿ  ಕೂಡ ಉದ್ಯೋಗಕ್ಕಾಗಿ ಸಿಡ್ನಿಗೆ ತೆರಳಿದ್ದಾರೆ. ಈ ವೇಳೆ ವಿಯೋನಾ ಶರತ್ ಸಂತಸದಿಂದ ಅಪ್ಪನ್ನು ಸಿಡ್ನಿಗೆ ಬೀಳ್ಕೋಟ್ಟಿದ್ದಾಳೆ. ಇತ್ತ ಜೆಪಿ ನಗರದಲ್ಲಿ ಅಜ್ಜ ಅಜ್ಜಿ ಜೊತೆ ವಿಯೋನಾ ಶರತ್ ಆಟ, ಪಾಠ ಮುಂದುವರಿಸಿದ್ದಾಳೆ. ಆದರೆ ಕೊರೋನಾದಿಂದ ಪೋಷಕರು ಸಿಡ್ನಿಯಲ್ಲಿ ಬಂಧಿಯಾಗಲಿದ್ದಾರೆ ಅನ್ನೋ ಅರಿವು ವಿಯೋನಾಳಿಗೆ ಮಾತ್ರವಲ್ಲ ಯಾರಿಗೂ ಗೊತ್ತಿರಲಿಲ್ಲ. 

ಎಪ್ರಿಲ್ ತಿಂಗಳಲ್ಲಿ ವಿಯೋನಾ ಶರತ್ ಪೋಷಕರು ಬೆಂಗಳೂರಿಗ ಆಗಮಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಆದರೆ ಕೊರೋನಾ ವೈರಸ್ ಕಾರಣ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಹೇರಿತ್ತು. ಹೀಗಾಗಿ ವಿಯೋನಾ ಶರತ್ ಪೋಷಕರು ತವರಿಗೆ ಮರಳಲು ಸಾಧ್ಯವಾಗಿಲ್ಲ. ಸರಿ ಸುಮಾರು ತಿಂಗಳಿನಿಂದ  ದೂರವಿದ್ದ ವಿಯೋನಾ ಶರತ್‌ ನೋಡಲು ಪೋಷಕರಿಗೆ ಯಾವುದೇ ದಾರಿ ಇರಲಿಲ್ಲ. ಲಾಕ್‌ಡೌನ್ ವಿಸ್ತರಣೆಯಾಗುತ್ತಿದ್ದಂತೆ, ಪೋಷಕರ ನೋವು ಹೆಚ್ಚಾಗಿದೆ.

ಕೊನೆಗೂ ಭಾರತದಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಯಿತು. ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಗೊಂಡದ್ದೆ ಪೋಷಕರು, ಬೆಂಗಳೂರಿಗೆ ಬರಲು ಸಜ್ಜಾಗಿದ್ದರು. ಆದರೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಕಾರಣ ಆಸ್ಟ್ರೇಲಿಯಾದಿಂದ ಭಾರತಕ್ಕೆ ಯಾವುದೇ ವಿಮಾನ ಸೇವೆ ಇಲ್ಲ ಎಂದಾಗ ಮತ್ತೆ ನಿರಾಸೆಯಾಗಿತ್ತು. ಇತ್ತ ವಿಯೋನಾಗೆ ಪೋಷಕರನ್ನು ನೋಡುವ ಬಯಕೆಯಾಗಿದೆ.  ಭಾರತ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಿಸಿತ್ತು. ಹೀಗಾಗಿ ಭಾರತದಿಂದ ಆಸ್ಟ್ರೇಲಿಯಾದ ಸಿಡ್ನಿಗೆ ವಿಮಾನ ಸೇವೆ ಲಭ್ಯವಿತ್ತು. ಈ ಮೂಲಕ ವಿಯೋನಾಳನ್ನು ಸಿಡ್ನಿಗೆ ಕರೆಯಿಸಿಕೊಳ್ಳಲು ಪೋಷಕರು ನಿರ್ಧರಿಸಿದ್ದರು.

ವಿಯೋನಾ ಜೊತೆಗೆ ವಿಯೋನಾ ಅಜ್ಜ ಕೂಡ ಸಿಡ್ನಿಗೆ ತೆರಳಲು ಸಜ್ಜಾಗಿದ್ದರು. ಆದರೆ ವಿಯೋಜ ಅಜ್ಜನ ವಯಸ್ಸು 70 ದಾಟಿದ ಕಾರಣ ಪ್ರಯಾಣಕ್ಕೆ ಅನುಮತಿ ಸಿಗಲಿಲ್ಲ. ಇಷ್ಟೇ ಅಲ್ಲ ಬೆಂಗಳೂರಿನಿಂದ ಸಿಡ್ನಿಗೆ ವಿಮಾನ ಸೇವೆ ಇರಲಿಲ್ಲ. ಆದರೆ ಚೆನ್ನೈನಿಂದ ನೇರವಾಗಿ ಸಿಡ್ನಿಗೆ ವಿಮಾನ ಸೇವೆ ಲಭ್ಯವಿತ್ತು. ಇತ್ತ ಗಟ್ಟಿಗಿತ್ತಿ ವಿಯೋನಾ ಶರತ್, ಒಬ್ಬಳೆ ಪ್ರಯಾಣಿಸಲು ಮುಂದಾಗಿದ್ದಾಳೆ.  

ವಿಮಾನಯಾನ ಕಂಪನಿಯ ಬಸ್ ಮೂಲಕ ಬೆಂಗಳೂರಿನಿಂದ ಚೆನ್ನೈಗೆ ಒಬ್ಬಳೆ ಪ್ರಯಾಣಿಸಿದ ವಿಯೋನಾ ಶರತ್, ಬಳಿಕ ಚೆನ್ನೈ ವಿಮಾನ ನಿಲ್ದಾಣದಿಂದ ಒಬ್ಬಳೆ ಸಿಡ್ನಿಗೆ ವಿಮಾನಯಾನ ಆರಂಭಿಸಿದ್ದಾಳೆ. ಚೆನ್ನೈನಿಂದ ಸಿಡ್ನಿ ತಲುಪಿದ ವಿಯೋನಾಳನ್ನು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಬಳಿಕ ಪೊಲೀಸರು ವಿಯೋನಾಳನ್ನು ಪೋಷಕರ ಬಳಿಕ ಕರೆದುಕೊಂಡು  ಹೋಗಿದ್ದಾರೆ.  ಬೆಂಗಳೂರಿನಿಂದ ಚೆನ್ನೈ 350 ಕಿ.ಮೀ ಹಾಗೂ ಚೆನ್ನೈನಿಂದ ಸಿಡ್ನಿಗೆ 9,120 ಕಿ.ಮೀ ದೂರವಿದೆ. ವಿಯೋನಾ ಶರತ್ ಒಟ್ಟು ಪೋಷಕರನ್ನು ಸೇರಲು 10,000 ಕಿ.ಮೀ ಒಬ್ಬಳೆ ಪ್ರಯಾಣಿಸಿದ್ದಾಳೆ.

8 ತಿಂಗಳಿನಿಂದ ಮಗಳನ್ನು ನೋಡದ ತಾಯಿ, ವಿಯೋನಾ ಬಿಗಿದಪ್ಪಿ ಮುದ್ದಾಡಿದ್ದಾರೆ. ಪೋಷಕರನ್ನು ನೋಡಿದ ವಿಯೋನಾ ಕೂಡ ಭಾವುಕರಾಗಿದ್ದಾಳೆ. ಕೊರೋನಾ ವೈರಸ್ ಕಾರಣ ಬೆಂಗಳೂರಿನ ಈ ವಿಯೋನಾ 10 ಸಾವಿರ ಕಿಲೋಮೀಟರ್ ಒಬ್ಬಳೆ ಪ್ರಯಾಣಿಸಿದ್ದಾಳೆ. ಇದೀಗ ವಿಯೋನಾ ಧೈರ್ಯಕ್ಕೆ ಎಲ್ಲಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. 

click me!