ಟೀಚರ್ ಬೈದ್ರು ಎಂದು ದುರಂತ ಅಂತ್ಯಕಂಡ ವಿದ್ಯಾರ್ಥಿನಿ.. ಕಣ್ಣಾಲೆಗಳ ಒದ್ದೆ ಮಾಡ್ತಿವೆ ಆಕೆಯ ವಿದಾಯದ ಸಾಲುಗಳು..

Published : Jul 09, 2026, 05:11 PM IST
student madhushree died

ಸಾರಾಂಶ

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಮಡಿವಾಳದಲ್ಲಿ ಎಳೆಯ ಮನಸ್ಸೊಂದು ಶಿಕ್ಷಕಿಯ ನಿರ್ಲಕ್ಷ್ಯ ಮತ್ತು ಅವಮಾನಕ್ಕೆ ಬಲಿಯಾಗಿದೆ. ಮರಸೂರು ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಮಧುಶ್ರೀ (14) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಘಟನೆ ಇಡೀ ರಾಜ್ಯದ ಗಮನ ಸೆಳೆದಿದ್ದು, ಬಾಲಕಿ ಬರೆದಿಟ್ಟ ಚೀಟಿಯು ಕಣ್ಣಂಚನ್ನು ತೇವಗೊಳಿಸಿದೆ

ಆನೇಕಲ್ (ಬೆಂಗಳೂರು): ಕಲಿಯುವ ವಯಸ್ಸಿನಲ್ಲೇ ಶಿಕ್ಷಕರ ಕಿರುಕುಳ ಅಥವಾ ಅವಮಾನಕ್ಕೆ ಬಲಿಯಾಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ. ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳದಲ್ಲಿ 8ನೇ ತರಗತಿಯ ವಿದ್ಯಾರ್ಥಿನಿ ಶಿಕ್ಷಕಿ ಬೈದಿದ್ದಕ್ಕೆ ಮನನೊಂದು ನೇಣು ಬಿಗಿದುಕೊಂಡು ಪ್ರಾಣಬಿಟ್ಟಿರುವ ಆರೋಪ ಕೇಳಿಬಂದಿದೆ.

ಘಟನೆಯ ವಿವರ

ಮರಸೂರು ಮಡಿವಾಳ ನಿವಾಸಿ ಮಧುಶ್ರೀ (14) ಆತ್ಮ*ತ್ಯೆ ಮಾಡಿಕೊಂಡ ಬಾಲಕಿ. ಈಕೆ ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಗುರುವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಧುಶ್ರೀ ನೇಣು ಹಾಕಿಕೊಂಡಿದ್ದಾಳೆ. ಇಂದು (ಶುಕ್ರವಾರ) ಬೆಳಿಗ್ಗೆ ಪೋಷಕರು ಎದ್ದು ನೋಡಿದಾಗ ಮಗಳ ಮೃತದೇಹ ಪತ್ತೆಯಾಗಿದೆ.

ಕಣ್ಣಾಲೆಗಳ ಒದ್ದೆ ಮಾಡಿದ ಪತ್ರ

ದುಡುಕಿನ ನಿರ್ಧಾರಕ್ಕೂ ಮುನ್ನ ಮಧುಶ್ರೀ ಬರೆದಿರುವ ನೋಟ್ ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸುವಂತಿದೆ. ಅದರಲ್ಲಿ ತನ್ನ ಸಾವಿಗೆ ಶಾಲೆಯಲ್ಲಿ ನಡೆದ ಘಟನೆಯೇ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾಳೆ ಎಂದು ಹೇಳಲಾಗುತ್ತಿರುವ ಫೋಟೋ ವೈರಲ್ ಆಗಿದೆ. ಅದರಲ್ಲಿ ಏನಿದೆ ಅನ್ನೋ ವಿವರ ಹೀಗಿದೆ..

"ಅಮ್ಮ ನನ್ನ ಕ್ಷಮಿಸಿ ಬಿಡು. ನನಗೆ ಈ ಭೂಮಿ ಮೇಲೆ ಬದುಕಲು ಇಷ್ಟವೇ ಇಲ್ಲ. ಶಾಲೆಯಲ್ಲಿ ನಡೆದ ಘಟನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿದೆ. ನನ್ನ ಮೇಲೆ ಇಲ್ಲಸಲ್ಲದ ಅಪವಾದಗಳನ್ನು (ಆರೋಪ) ಹೊರಿಸಿದರು. ಆ ಅವಮಾನವನ್ನು ಸಹಿಸಿಕೊಂಡು ಬದುಕಲು ನನ್ನ ಮನಸ್ಸು ಒಪ್ಪುತ್ತಿಲ್ಲ. ತುಂಬಾ ಹಿಂಸೆಯಾಗುತ್ತಿದೆ ಎಂದು ಪತ್ರದಲ್ಲಿ ನೋವು ತೋಡಿಕೊಂಡಿದ್ದಾಳೆ.

ಅಮ್ಮನ ಮೇಲೆ ಆಣೆ ಹಾಕಿದ ಮಗಳು

ತಾನು ಇಲ್ಲದಿದ್ದರೂ ತನ್ನ ತಾಯಿ ಮತ್ತು ಒಡಹುಟ್ಟಿದವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಪತ್ರದಲ್ಲಿ ಬೇಡಿಕೊಂಡಿದ್ದಾಳೆ. ನನ್ನ ತಮ್ಮ, ತಂಗಿ, ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳಿ. ಅಮ್ಮನನ್ನು ಯಾರೂ ಬೈಯಬೇಡಿ. ಒಂದು ವೇಳೆ ಅಮ್ಮನನ್ನು ಬೈದರೆ ನನ್ನ ಮೇಲೆ ಆಣೆ ಎಂದು ಬರೆಯುವ ಮೂಲಕ ತನ್ನ ತಾಯಿಯ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ. ಕೊನೆಯಲ್ಲಿ I am sorry mom and all ಎಂದು ಬರೆದು ಜೀವನಕ್ಕೆ ವಿದಾಯ ಹೇಳಿದ್ದಾಳೆ.

ಶಾಲೆಯಲ್ಲಿ ನಡೆದಿದ್ದೇನು?

ಲಭ್ಯವಿರುವ ಮಾಹಿತಿಗಳ ಪ್ರಕಾರ, ಶಾಲೆಯಲ್ಲಿ ಕೆಲವು ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಸಣ್ಣಪುಟ್ಟ ವಿಚಾರಕ್ಕೆ ಅಪವಾದ ಹೊರಿಸುವುದು, ದಂಡ ವಿಧಿಸುವುದು ಮತ್ತು ಅವಮಾನ ಮಾಡುವುದು ಮಾಡುತ್ತಿದ್ದರು ಎನ್ನಲಾಗಿದೆ. ಮಧುಶ್ರೀಯ ಮೇಲೆ ಹೊರಿಸಲಾದ ಯಾವುದೋ ಒಂದು ಸುಳ್ಳು ಆರೋಪ ಅಥವಾ ಅವಮಾನ ಆಕೆಯ ಎಳೆಯ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದೆ ಎಂಬುದು ಈ ಪತ್ರದಿಂದ ತಿಳಿದುಬರುತ್ತಿದೆ.

ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿ ಹೀಗೆ ಅಕಾಲಿಕವಾಗಿ ಪ್ರಾಣ ಕಳೆದುಕೊಂಡಿರುವುದು ಇಡೀ ಆನೇಕಲ್ ಭಾಗದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ಮದ್ಯಪ್ರಿಯರ ಶೈಲಿ ಬದಲಿಸಿದ ಹೊಸ AIB ನೀತಿ: ಮೊದಲ ತ್ರೈಮಾಸಿಕದಲ್ಲೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ದಾಖಲೆಯ ಆದಾಯ!
ಅಂದುಕೊಂಡದ್ದಕ್ಕಿಂತಲೂ ಹೆಚ್ಚು ಕೊಟ್ಟ ‘ನಮ್ಮ ಬೆಂಗಳೂರು’; ಮೊದ್ಲೇ ಇಲ್ಲಿಗೆ ಬರಬಾರದಿತ್ತಾ? ತಲೆ ಚಚ್ಚಿಕೊಂಡ ಯುವಕ