
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ದಂಪತಿ ನಡುವಿನ ಸಣ್ಣ ಜಗಳವೊಂದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ಜಾತ್ರೆಗೆ ಹೋಗುವ ವಿಚಾರವಾಗಿ ಗಂಡನೊಂದಿಗೆ ಜಗಳವಾಡಿದ ಪತ್ನಿಯೊಬ್ಬಳು ಮನನೊಂದು ನದಿಗೆ ಹಾರಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಸದಲಗಾ ಪಟ್ಟಣದ ನಿವಾಸಿ ಮಂಜುಳಾ ವಂಜೀರೆ (25) ನದಿಗೆ ಹಾರಿದ ಗೃಹಿಣಿ. ಮಂಜುಳಾ ಹಾಗೂ ಆಕೆಯ ಪತಿ ಅನಿಲ್ ನಡುವೆ ಕಳೆದ ಕೆಲವು ದಿನಗಳಿಂದ ಜಾತ್ರೆಗೆ ಹೋಗುವ ವಿಚಾರವಾಗಿ ಚರ್ಚೆ ನಡೆಯುತ್ತಿತ್ತು. ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಈ ವಿಚಾರವಾಗಿ ಭಾರಿ ಜಗಳ ನಡೆದಿದೆ ಎನ್ನಲಾಗಿದೆ.
ಪತಿಯೊಂದಿಗೆ ಜಗಳವಾಡಿದ ಮಂಜುಳಾ, ತೀವ್ರ ಆಕ್ರೋಶ ಮತ್ತು ಬೇಸರದಿಂದ ಮನೆಯಿಂದ ಹೊರಬಂದಿದ್ದಾರೆ. ಬಳಿಕ ಪಟ್ಟಣದ ಹೊರವಲಯದಲ್ಲಿ ಹರಿಯುವ ದೂದಗಂಗಾ ನದಿಯ ಬಳಿ ತೆರಳಿ, ಯಾರಿಗೂ ತಿಳಿಸದೆ ನದಿಗೆ ಹಾರಿದ್ದಾರೆ. ನದಿಯ ದಡದಲ್ಲಿ ಮಂಜುಳಾ ಅವರ ಚಪ್ಪಲಿ ಹಾಗೂ ಬಟ್ಟೆಗಳು ಪತ್ತೆಯಾಗಿವೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್ (NDRF) ತಂಡ ಧಾವಿಸಿದ್ದು, ದೂಧಗಂಗಾ ನದಿಯ ಆಳವಾದ ನೀರಿನಲ್ಲಿ ಮಂಜುಳಾ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆಯುತ್ತಿದ್ದರೂ ಸಹ ನೀರಿನ ಹರಿವು ಹೆಚ್ಚಿರುವುದರಿಂದ ಮಹಿಳೆಯ ಪತ್ತೆಯಾಗಿಲ್ಲ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿ ಅನಿಲ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಣ್ಣ ವಿಚಾರಕ್ಕೆ ಗೃಹಿಣಿ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿರುವುದು ಕುಟುಂಬಸ್ಥರಲ್ಲಿ ಹಾಗೂ ಪಟ್ಟಣದಲ್ಲಿ ಆತಂಕ ಮೂಡಿಸಿದೆ.