
ಬೆಳಗಾವಿ (ಏ.20): ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ಕಲಹಕ್ಕೆ ಬೇಸತ್ತು ವಿವಾಹಿತ ಮಹಿಳೆಯೊಬ್ಬರು ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ನಗರದ ಜ್ಯೋತಿ ನಗರದಲ್ಲಿ ನಡೆದಿದೆ. ಶ್ರೀನಿಧಿ ಸಂತೋಷ ನಾವಿ (28) ಆ*ತ್ಮಹ*ತ್ಯೆಗೆ ಶರಣಾದ ದುರ್ದೈವಿ. 2021ರಲ್ಲಿ ಸಂತೋಷ ಎಂಬಾತನೊಂದಿಗೆ ಶ್ರೀನಿಧಿ ಅವರ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಖವಾಗಿರಬೇಕಾಗಿದ್ದ ಸಂಸಾರದಲ್ಲಿ ವರದಕ್ಷಿಣೆ ವಿಷಯವಾಗಿ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಪತಿ ಸಂತೋಷ್, ಶ್ರೀನಿಧಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಲ್ಲದೆ, ತವರು ಮನೆಯವರೊಂದಿಗೆ ಮಾತನಾಡಬಾರದೆಂದು ಆಕೆಯ ಮೊಬೈಲ್ ಫೋನನ್ನೂ ಕಿತ್ತುಕೊಂಡಿದ್ದ ಎಂದು ಆರೋಪಿಸಲಾಗಿದೆ.
ಶನಿವಾರ ಮನೆಯ ಮೊದಲ ಮಹಡಿಯಲ್ಲಿ ಕಿಟಕಿ ಗ್ರೀಲ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡು ಶ್ರೀನಿಧಿ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತಳ ಪೋಷಕರು ನೀಡಿದ ದೂರಿನ ಮೇರೆಗೆ ಪತಿ, ಅತ್ತೆ ಹಾಗೂ ಇನ್ನಿಬ್ಬರು ಸಂಬಂಧಿಕರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ಬೆಳಗಾವಿ ಎಪಿಎಂಸಿ ಪೊಲೀಸರು ಪತಿ ಸಂತೋಷ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.