Belagavi Farmers ಆಕ್ರೋಶದ ನಡುವೆಯೇ ಹಲಗಾ ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ

By Suvarna NewsFirst Published Apr 27, 2022, 3:06 PM IST
Highlights
  • ಕೆಲಸಕ್ಕೆ ಹೈಕೋರ್ಟ್ ಅನುಮತಿ ನೀಡಿದೆ ಎಂದ ಡಿಸಿ
  • ಝೀರೋ ಪಾಯಿಂಟ್ ಫಿಕ್ಸ್ ಆಗೋವರೆಗೂ ಕಾಮಗಾರಿ ನಡೆಸಲು ಬರಲ್ಲ ಎಂದು ರೈತರ ವಾದ
  • ನಾಳೆ ಬೆಳಗಾವಿಗೆ ಆಗಮಿಸುತ್ತಿರುವ ಸಿಎಂ ಭೇಟಿಗೆ ರೈತರ ನಿರ್ಧಾರ

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ: ರೈತರ ತೀವ್ರ ವಿರೋಧದ ಮಧ್ಯೆ ಹಲಗಾ ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ಮತ್ತೆ ನಿನ್ನೆಯಿಂದ ಶುರುವಾಗಿದೆ. ಹಲಗಾ ಮತ್ತು ಮಚ್ಛೆ ಗ್ರಾಮದ ಮಧ್ಯೆ 9.5 ಕಿಲೋಮೀಟರ್ ಬೈಪಾಸ್ ರಸ್ತೆ ಕಾಮಗಾರಿಗೆ ಒಟ್ಟು 100 ಎಕರೆ ಫಲವತ್ತಾದ ಕೃಷಿ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಬೈಪಾಸ್ ರಸ್ತೆ ಕಾಮಗಾರಿಗೆ ಈ ಹಿಂದಿನಿಂದಲೂ ರೈತರು ವಿರೋಧಿಸುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಯಾವುದೇ ಕಾರಣಕ್ಕೂ ಬೈಪಾಸ್ ರಸ್ತೆ ಮಾಡಲು ನಾವು ನಮ್ಮ ಫಲವತ್ತಾದ ಜಮೀನು ನೀಡಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ‌.

2021ರ ನವೆಂಬರ್ 11ರಂದು ಕಾಮಗಾರಿ ನಡೆಯುತ್ತಿದ್ದ ವೇಳೆಯೇ ರೈತನ ಮಗ ಆಕಾಶ್ ಅನಗೋಳ್ಕರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ‌‌. ಬಳಿಕ ಬೆಳಗಾವಿ ಜಿಲ್ಲಾ ನ್ಯಾಯಾಲಯ ಮೊರೆ ಹೋಗಿದ್ದ ರೈತರು ಕಾಮಗಾರಿಗೆ ತಡೆಯಾಜ್ಞೆ ತಂದಿದ್ರು. ಆದ್ರೆ ಈಗ ಎನ್‌ಹೆಚ್‌ಎಐ ಹೈಕೋರ್ಟ್ ಮೊರೆ ಹೋಗಿ ಕಾಮಗಾರಿ ಆರಂಭಕ್ಕೆ ಅನುಮತಿ ಪಡೆದಿದ್ದು ಕಾಮಗಾರಿ ಆರಂಭಿಸಿದ್ದೇವೆ ಅನ್ನೋದು ಅಧಿಕಾರಿಗಳ ವಾದ‌. ಆದ್ರೆ ರೈತರ ಕಣ್ಣಿಗೆ ಮಣ್ಣೆರಚುವ ಕೆಲಸ ಜಿಲ್ಲಾಡಳಿತ ಮಾಡ್ತಿದೆ ಅಂತಾ ರೈತರು ಆರೋಪಿಸುತ್ತಿದ್ದಾರೆ. ಇಂದು ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ಭೇಟಿಯಾದ ರೈತರು ಬೆಳಗಾವಿ ಜಿಲ್ಲಾ ನ್ಯಾಯಾಲಯ ನೀಡಿದ ತಡೆಯಾಜ್ಞೆ ತೆರವಿಗೆ ಆದೇಶ ಆಗಿಲ್ಲ. ಹೀಗಾಗಿ ಕಾಮಗಾರಿ ನಡೆಸಲು ಅವಕಾಶ ನೀಡಬಾರದು ಅಂತಾ ಮನವಿ ಮಾಡಿದ್ರು.

Udupi ಕೆಳ ಪರ್ಕಳದಲ್ಲಿ ಸುರಂಗ ಪತ್ತೆ! ಏನಿದರ ರಹಸ್ಯ?

ನಾಳೆ ಬೆಳಗಾವಿಗೆ ಆಗಮಿಸುತ್ತಿರುವ ಸಿಎಂ ಭೇಟಿಗೆ ರೈತರ ನಿರ್ಧಾರ: ಬೆಳಗಾವಿ ಡಿಸಿ ಎಂ.ಜಿ.ಹಿರೇಮಠಗೆ ಮನವಿ ಸಲ್ಲಿಸಿ ಮಾತನಾಡಿದ ರೈತ ಮುಖಂಡ ರಾಜು ಮೊರ್ವೆ, 'ಪ್ರೊಸೆಡಿಂಗ್ ಸ್ಟೇ ರದ್ದು ಮಾಡಿದೆ ಅಂತಾ ಹೇಳಿದ್ದಾರೆ. ಹೈಕೋರ್ಟ್ ಬಿಟ್ಟು ಬೇರೆ ಕಮಿಟಿ ಮಾಡಿದ್ದಾರೆ. ಆ ಕಮಿಟಿಯಲ್ಲಿ ಠರಾವು ಪಾಸ್ ಮಾಡಿ ತಡೆಯಾಜ್ಞೆ ರದ್ದು ಮಾಡಿದ್ದಾರೆ. ಹೈಕೋರ್ಟ್‌ನಲ್ಲಿ ಆದೇಶ ಆಗಿಲ್ಲ, ಹಾಗೇ ಇದ್ರೆ ನಮ್ಮ ವಕೀಲರಿಗೆ ಏಕೆ ಮಾಹಿತಿ ಬಂದಿಲ್ಲ.

ತಡೆಯಾಜ್ಞೆ ತೆರವು ಆಗುವ ಪ್ರಶ್ನೆಯೇ ಇಲ್ಲ. ಈಗಾಗಲೇ 50 ರೈತರು ನ್ಯಾಯಾಲಯ ಮೊರೆ ಹೋಗಿದ್ದಾರೆ. ಈ ಕೇಸ್ ಮುಗಿಯೋವರೆಗೂ ಯಾವುದೇ ಕೆಲಸ ಮಾಡಬಾರದು. ಕಾಮಗಾರಿ ಝೀರೋ ಪಾಯಿಂಟ್ ಫಿಕ್ಸ್ ಆಗೋವರೆಗೂ ಕಾಮಗಾರಿ ನಡೆಸಲಾಗಲ್ಲ. ರೈತರ ಜಮೀನಿನಲ್ಲಿನ ಒಂದು ಕಡ್ಡಿಗೂ ಕೈ ಹಚ್ಚಬಾರದು ಅಂತಾ ಆದೇಶ‌ವಿದೆ. ಆದರೂ ಪ್ರೊಸೆಡಿಂಗ್ ಸ್ಟೇ ತಂದು ನಮ್ಮ ಕಣ್ಣಿನಲ್ಲಿ ಮಣ್ಣೆರಚಿ ಕೆಲಸ ಶುರು ಮಾಡಿದ್ದಾರೆ. ಇದೆಲ್ಲ ನಕಲು ಇದೆ. ಸರ್ಕಾರ ಈ ಬಗ್ಗೆ ‌ಗಮನಹರಿಸಬೇಕು.

International Yoga Day ಹಂಪಿ ಸ್ಮಾರಕಗಳ ಮುಂದೆ ನಡೆಸಲು ಚಿಂತನೆ

ಬಿಜೆಪಿ ಸರ್ಕಾರ ರೈತ ಪರ ಸರ್ಕಾರ ಅಂತಾರೆ. ಆದ್ರೆ ಬಿಜೆಪಿ ಸರ್ಕಾರ ರೈತರನ್ನು ಮಣ್ಣಾಗ ಹಾಕೋ ಸರ್ಕಾರ ಅಂತಾ ನಾವು ಹೇಳ್ತೀವಿ. ನಾಳೆ ಬೆಳಗಾವಿಗೆ ಸಿಎಂ ಬರ್ತಾರಲ್ಲ ಆ ವೇಳೆ ಭೇಟಿಯಾಗಿ ಮನವಿ ಕೊಡ್ತೇವೆ. ಚನ್ನಂಗಿ, ಬಾಸುಮತಿ ಭತ್ತ ಹಸಿರು ಟಾವೆಲ್‌ನಲ್ಲಿ ಕಟ್ಟಿ ಸಿಎಂಗೆ ಕೊಟ್ಟಿದ್ದೇವೆ. ನಮ್ಮ ಮೇಲೆ ಗುಂಡು ಹಾಕಿ ಕಾಮಗಾರಿ ನಡೆಸರಿ. ಪ್ರೊಸೆಡಿಂಗ್ ಸ್ಟೇ ಕಾಪಿ ಹಾಗೂ ನಮ್ಮ ಪರ ಆದೇಶ ಪ್ರತಿ ನೋಡಿ ವಿಚಾರ ಮಾಡಲಿ' ಅಂತಾ ತಿಳಿಸಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಮಚ್ಛೆ ಗ್ರಾಮದ ರೈತ ಅನಿಲ್ ಅನಗೋಳ್ಕರ್, ಹಿಂದಿನ ಬಾರಿ ಕಾಮಗಾರಿ ಆರಂಭಿಸಿದ ವೇಳೆ ನಾಶ ಮಾಡಿದ ಬೆಳೆಗೆ ಪರಿಹಾರ ಕೊಟ್ಟಿಲ್ಲ. ನಿನ್ನೆಯೂ ಕಬ್ಬಿನ ಬೆಳೆ ನಾಶ ಮಾಡಿದ್ದಾರೆ. ಪರಿಹಾರ ಕೊಡ್ತೀವಿ ಅಂತಾ ಪ್ರಾಮಿಸ್ ಮಾಡಿದ್ರು ಅದನ್ನು ಕೊಟ್ಟಿಲ್ಲ' ಅಂತಾ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಮನವಿ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡ್ತೀವಿ ಎಂದ ಡಿಸಿ
ಇನ್ನು ಈ ಕುರಿತು ಮಾತನಾಡಿದ ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ, 'ಹಲಗಾ ಮಚ್ಛೆ ಕಾಮಗಾರಿ ನಡೆಯಬೇಕಾದರೆ ಜಿಲ್ಲಾ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿತ್ತು. ಇದಾದ ಮೇಲೆ ಕೆಲಸ ನಿಂತಿತ್ತು. ಬಳಿಕ ಎನ್‌ಹೆಚ್‌ಎಐ ದವರು ಹೈಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಿದ್ದರು. ಎನ್‌ಹೆಚ್‌ಎಐ ಕಾನೂನು ಸಲಹೆಗಾರ ಸಾಗರ ಲಡ್ಡಾ 2022ರ ಫೆಬ್ರವರಿ 4ರಂದು ಕೆಲಸ ಮಾಡಲು ಅನುಕೂಲ ಮಾಡಿ ಕೊಡಿ ಅಂತಾ ನ್ಯಾಯಾಲಯದಲ್ಲಿ ಕೇಳಿಕೊಂಡಿದ್ರು. ಕಾಮಗಾರಿ ಮಾಡಲು ಯಾವುದೇ ನಿರ್ಬಂಧ ಹಾಕಿಲ್ಲ ಅಂತಾ ಹೈಕೋರ್ಟ್‌ನವರೇ ಹೇಳಿದ್ದಾರೆ.

ಈಗ ಇವರು ರಿಕ್ಚೆಸ್ಟ್ ರಿಜೆಕ್ಟ್ ಆಗಿದೆ. ತಡೆಯಾಜ್ಞೆ ಇನ್ನೂ ಇದೆ ಅಂತಾ ವಾದ ಮಾಡ್ತಿದ್ದಾರೆ. ನಾವು ಕಾನೂನು ಸಲಹೆ ಪಡೆಯುತ್ತೇವೆ. ನಮ್ಮ ಪ್ರಕಾರ ಕೆಲಸಕ್ಕೆ ಮಾನ್ಯ ಹೈಕೋರ್ಟ್ ಅನುಮತಿ ನೀಡಿದೆ. ಇದರ ಬಗ್ಗೆ ಇನ್ನೊಮ್ಮೆ ಪರಿಶೀಲನೆ ಮಾಡ್ತೀವಿ. ಕಳೆದ ಸಲ ಹಾಗೂ ಈಗಿನ ಸಲ ಆದ ಬೆಳೆ ಹಾನಿ ಎರಡೂ ಸೇರಿಸಿ ಪರಿಹಾರ ಕೊಡ್ತೀವಿ' ಅಂತಾ ಭರವಸೆ ನೀಡಿದ್ದಾರೆ‌.

ಒಟ್ಟಿನಲ್ಲಿ ರೈತರ ವಿರೋಧದ ಮಧ್ಯೆ ಕಾಮಗಾರಿ ಆರಂಭವಾಗಿದ್ದು ಒಂದೆಡೆಯಾದ್ರೆ ಹೈಕೋರ್ಟ್ ಆದೇಶದಂತೆ ಕಾಮಗಾರಿ ಆರಂಭಿಸಿದೆವೆ ಅಂತಾ ಅಧಿಕಾರಿಗಳು ಹೇಳುತ್ತಿದ್ದಾರೆ. ಮತ್ತೊಂದೆಡೆ ರೈತರ ಕಣ್ಣಿಗೆ ಮಣ್ಣೆರಚುವ ಕೆಲಸ ಆಗ್ತಿದೆ ಎಂಬುದು ರೈತರ ಆರೋಪ. ನಾಳೆ ಬೆಳಗಾವಿಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದ್ದು ಸಿಎಂ ಭೇಟಿಗೆ ರೈತರು ನಿರ್ಧರಿಸಿದ್ದು ಮುಂದೇನಾಗುತ್ತೋ ಕಾದು ನೋಡಬೇಕು.

click me!