
ಬಳ್ಳಾರಿ: ನಗರದ ಸಿರುಗುಪ್ಪ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದ ಬ್ಯಾನರ್ ಗಲಾಟೆ ಪ್ರಕರಣ ತೀವ್ರ ಬೇಸರ ತಂದಿದೆ. ಘಟನೆ ಹಿನ್ನೆಲೆಯಲ್ಲಿ ಬಳ್ಳಾರಿ ಜನರ ಕ್ಷಮೆ ಕೋರುವೆ. ಸಂವಿಧಾನ ರಚನೆ ಮಾಡುವ ನಾವು, ಅದನ್ನು ಪಾಲನೆ ಮಾಡುವುದನ್ನು ಕಲಿಯಬೇಕು ಎಂದು ಸಂಸದ ಈ.ತುಕಾರಾಂ ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆಯಲ್ಲಿ ಅಮಾಯಕ ಯುವಕನ ಜೀವ ಹೋಗಿದೆ. ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಜನಾರ್ದನ ರೆಡ್ಡಿ ಮಾಡಬಾರದು. ಘಟನೆಯಿಂದ ಮುಖ್ಯಮಂತ್ರಿ ಸಹ ಬೇಸರಗೊಂಡಿದ್ದಾರೆ. ಸಿಎಂಗೆ ಬಳ್ಳಾರಿ ಬಗ್ಗೆ ಪ್ರೀತಿಯಿದೆ. ಹೀಗಾಗಿಯೇ ಇಲ್ಲಿನ ಸ್ಥಿತಿಗತಿಯ ಕುರಿತು ವರದಿ ಕೇಳಿದ್ದಾರೆ. ಘಟನೆಯಲ್ಲಿ ಭಾಗಿಯಾದವರು ಯಾರೇ ಆಗಲಿ, ಬಿಡುವ ಪ್ರಶ್ನೆಯೇ ಇಲ್ಲ. ಖಂಡಿತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಗರ ಶಾಸಕ ನಾರಾ ಭರತ್ ರೆಡ್ಡಿ, ಬಳ್ಳಾರಿಯಲ್ಲಿ ಗುರುವಾರ ರಾತ್ರಿ ಜರುಗಿದ ಬ್ಯಾನರ್ ಗಲಾಟೆ ಪ್ರಕರಣ ಕುರಿತು ವಿವರಿಸಿದರು.
ಹಾಸನ: ವಾಲ್ಮೀಕಿ ಬ್ಯಾನರ್ ಕಟ್ಟುವ ವಿಚಾರವನ್ನು ನೆಪವಾಗಿಸಿಕೊಂಡು ಬಳ್ಳಾರಿಯಲ್ಲಿ ನಡೆದ ಗಲಭೆ ಪ್ರಕರಣ ಕಾಂಗ್ರೆಸ್ ಸರ್ಕಾರದ ಉದ್ದೇಶಿತ ಹಾಗೂ ಪೂರ್ವನಿಯೋಜಿತ ಪಿತೂರಿಯಾಗಿದೆ. ಈ ಗಲಭೆಯ ಹಿಂದಿರುವ ನಿಜವಾದ ಕಾರಣಗಳನ್ನು ಬಯಲಿಗೆ ತರುವ ಸಲುವಾಗಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲೇಬೇಕು ಎಂದು ಎಂದು ಶಾಸಕ ಸಿಮೆಂಟ್ ಮಂಜುನಾಥ್ ಅವರು ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಗಲಭೆ ನಡೆದ ಘಟನೆಯಿಂದ ಕೇವಲ ಒಂದು ದಿನದ ಹಿಂದಷ್ಟೇ ಅಧಿಕಾರ ಸ್ವೀಕರಿಸಿದ್ದ ಬಳ್ಳಾರಿ ಎಸ್ಪಿ ಅಮಾನತು ಮಾಡಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಈ ಘಟನೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡು ಸೃಷ್ಟಿಸಲಾದ ರಾಜಕೀಯ ದ್ವೇಷದ ಫಲಿತಾಂಶ ಎಂದು ಆರೋಪಿಸಿದರು.
ಬಳ್ಳಾರಿ: ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಗಲಾಟೆ ಪ್ರಕರಣ ಹಿನ್ನೆಲೆಯಲ್ಲಿ ಪ್ರಕ್ಷುಬ್ಧ ವಾತಾವರಣವಿದ್ದ ಬಳ್ಳಾರಿ ಸಹಜ ಸ್ಥಿತಿಗೆ ಮರಳಿದೆ. ಶುಕ್ರವಾರ ರಾತ್ರಿ ನಗರದಲ್ಲಿದ್ದ ಎಲ್ಲ ಬ್ಯಾನರ್ ತೆರವುಗೊಳಿಸಲಾಯಿತು. ಘಟನಾ ಸ್ಥಳದಲ್ಲಿ ಎಂದಿನಂತೆ ಜನರ ಓಡಾಟ ಕಂಡು ಬಂತು. ಜನಾರ್ದನ ರೆಡ್ಡಿ ನಿವಾಸದ ಎದುರು ಹಾಗೂ ಎಸ್ಪಿ ವೃತ್ತದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿದಿತ್ತು. ಗಲಾಟೆ ಪ್ರಕರಣದಿಂದ ಜಿಲ್ಲಾ ಕೇಂದ್ರದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ವ್ಯಾಪಾರ ವಹಿವಾಟಿನಿಂದ ದೂರ ಉಳಿದಿದ್ದರು. ಪರಿಸ್ಥಿತಿ ತಿಳಿಗೊಳ್ಳುತ್ತಿದ್ದಂತೆಯೇ ಎಂದಿನಂತೆ ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳ ಬಳಿ ಜನಜಂಗುಳಿ ಕಂಡು ಬಂತು. ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ನಡೆದವು.
ಗುರುವಾರ ಸಂಜೆ ನಗರದಲ್ಲಿ ನಡೆದ ಬ್ಯಾನರ್ ಗಲಾಟೆ ಹಿನ್ನೆಲೆಯಲ್ಲಿ ಕಲ್ಲು ತೂರಾಟ ನಡೆಸಿದವರನ್ನು ವಿಡಿಯೋ ಸಾಕ್ಷಿ ನೋಡಿ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಹೀಗಾಗಿ, ಬಂಧನ ಭೀತಿ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಬೆಂಬಲಿಗರು ಊರು ತೊರೆಯುತ್ತಿದ್ದಾರೆ. ಗಲಾಟೆ ವೇಳೆ ರೋಷಾವೇಷದಲ್ಲಿ ಕಲ್ಲು, ಬಾಟಲಿ ತೂರಾಟ ಮಾಡಿದವರಿಗೆ ಈಗ ಆತಂಕ ಆರಂಭವಾಗಿದೆ.
ದೊಡ್ಡವರನ್ನು ಮೊದಲು ಯಾರೂ ಬಂಧಿಸುವುದಿಲ್ಲ. ಕೈಗೆ ಸಿಗುವವರೇ ಸಣ್ಣ ಪುಟ್ಟ ವ್ಯಕ್ತಿಗಳು ಎನ್ನುವ ಮನೋಭಾವದ ಹಿನ್ನೆಲೆಯಲ್ಲಿ ಪರಿಸ್ಥಿತಿ ತಣ್ಣಗಾಗುವವರೆಗೂ ನಾಲ್ಕು ದಿನ ಊರು ತೊರೆದರೆ ಉಳಿದುಕೊಳ್ಳುತ್ತೇವೆ ಎಂದು ಊರು ಬಿಟ್ಟು ಹೋಗುತ್ತಿದ್ದಾರೆ.