ಶುಕ್ರವಾರ ತಡರಾತ್ರಿಯಿಂದ ಹಿಡಿದು ಶನಿವಾರ ಬೆಳಗಿನ ಜಾವ 4 ರವರೆಗೂ ಭಾರಿ ಮಳೆ| ತಾಲೂಕಿನಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದು, ಕೆರೆ ಕಟ್ಟೆಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ರೈತರ ಮೊಗದಲ್ಲಿ ಸಂತಸ| ಕಂದಾಯ ಇಲಾಖೆಯ ಅಧಿಕಾರಿಗಳು ಎಲ್ಲೆಲ್ಲಿ ಮನೆಗಳು, ಬೆಳೆಹಾನಿಯಾಗಿದೆ ಎನ್ನುವುದರ ಕುರಿತು ಪರಿಶೀಲನೆ ಕೈಗೊಂಡಿದ್ದಾರೆ|
ಕೂಡ್ಲಿಗಿ(ಅ.20): ಶುಕ್ರವಾರ ತಡರಾತ್ರಿಯಿಂದ ಹಿಡಿದು ಶನಿವಾರ ಬೆಳಗಿನ ಜಾವ 4 ರವರೆಗೂ ಸುರಿದ ಭಾರಿ ಮಳೆಗೆ ತಾಲೂಕಿನಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದು, ಕೆರೆ ಕಟ್ಟೆಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೂಡ್ಲಿಗಿ ತಾಲೂಕಿನ ತುಪ್ಪಾಕನಹಳ್ಳಿಯ ಕರಿಸಬಸಯ್ಯ ಹಾಗೂ ಬಸಮ್ಮ ಎಂಬವರ ಮನೆಗಳು ಮಳೆಗೆ ಕುಸಿದಿದ್ದು, ಶಿವಪುರ ಗೊಲ್ಲರಹಟ್ಟಿಯಲ್ಲಿ ಮುದ್ದಪ್ಪ ಹಾಗೂ ಪಾಲಯ್ಯನಕೋಟೆ ಗ್ರಾಮದ ಬಸವಕುಮಾರ ಎಂಬವರ ಮನೆ ಗೋಡೆ ಕುಸಿದು ಅಪಾರ ಪ್ರಮಾಣದ ಹಾನಿಯಾಗಿದೆ.ಶನಿವಾರ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಎಲ್ಲೆಲ್ಲಿ ಮನೆಗಳು, ಬೆಳೆಹಾನಿಯಾಗಿದೆ ಎನ್ನುವುದರ ಕುರಿತು ಪರಿಶೀಲನೆ ಕೈಗೊಂಡಿದ್ದಾರೆ.
ಮಳೆಯ ವಿವರ:
ಶುಕ್ರವಾರ ತಡರಾತ್ರಿ ಹಾಗೂ ಶನಿವಾರ ನಸುಕಿನ ಜಾವದವರೆಗೂ ಬಿಟ್ಟೂ ಬಿಡದೆ ರಾತ್ರಿಯಿಡೀ ಸುರಿದ ಮಳೆ ತಾಲೂಕಿನ ಜನತೆಗೆ ಆಶ್ಚರ್ಯ ಮೂಡಿಸಿದೆ. ಕೂಡ್ಲಿಗಿಯಲ್ಲಿ 51.6 ಮಿಮೀ ಮಳೆಯಾಗಿದ್ದು, ಕೊಟ್ಟೂರಿನಲ್ಲಿ 120.4 ಮಿಮೀ ದಾಖಲೆಯ ಮಳೆಯಾಗಿದೆ. ಬಣವಿಕಲ್ಲು ಗ್ರಾಮದಲ್ಲಿ 16.2 ಹೊಸಹಳ್ಳಿಯಲ್ಲಿ 19.8 ಚಿಕ್ಕಜೋಗಿಹಳ್ಳಿ 2.2 ಮಿಮೀ ಮಳೆಯಾಗಿದ್ದರೆ ಗುಡೇಕೋಟೆ ಹೋಬಳಿಯಲ್ಲಿ ಮಳೆಯೇ ಆಗಿಲ್ಲ. ಕೂಡ್ಲಿಗಿ, ಹೊಸಹಳ್ಳಿ, ಕೊಟ್ಟೂರು ಹೋಬಳಿಗಳಲ್ಲಿ ಸುರಿದ ಮಳೆಗೆ ಅಪಾರ ಪ್ರಮಾಣದ ನೀರು ಹರಿದು ಬಂದು ಕೆರೆಕಟ್ಟೆಗಳು ತುಂಬುತ್ತಿವೆ. ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗುವುದರಿಂದ ರೈತರು, ಅಧಿಕಾರಿಗಳು, ಜನತೆ ಮಳೆಗೆ ಪುಳಕಗೊಂಡಿದ್ದಾರೆ.