ಮಹಾಮಳೆ ದಶಕಗಳ ದಾಖಲೆ ಬರೆದಿದೆ| 10 ವರ್ಷಗಳಲ್ಲಿಯೇ ಅತ್ಯಂತ ಮಹಾಮಳೆ ಇದಾಗಿದೆ ಎಂದು ತಾಲೂಕಿನ ರೈತಾಪಿ ವರ್ಗ ಬಣ್ಣಿಸುತ್ತಿದೆ| ಸತತ 6 ಗಂಟೆಗಳ ಕಾಲ ಮಳೆ| ಅಲ್ಲದೇ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ| ಮಾಲವಿ ಜಲಾಶಯಕ್ಕೆ ಎರಡ್ಮೂರು ಅಡಿಯಷ್ಟು ನೀರು ಒಂದೇ ದಿನದಲ್ಲಿ ಹರಿದು ಬಂದಿದೆ| ಮಾಲವಿ ಜಲಾಶಯದಲ್ಲಿ ಒಟ್ಟು 13 ಅಡಿ ನೀರು ಸಂಗ್ರಹ|
ಹಗರಿಬೊಮ್ಮನಹಳ್ಳಿ(ಅ.20): ತಾಲೂಕಿನಲ್ಲಿ ಶುಕ್ರವಾರ ಸುರಿದ ಮಹಾಮಳೆ ದಶಕಗಳ ದಾಖಲೆ ಬರೆದಿದೆ. ಅಂದರೆ, 10 ವರ್ಷಗಳಲ್ಲಿಯೇ ಅತ್ಯಂತ ಮಹಾಮಳೆ ಇದಾಗಿದೆ ಎಂದು ತಾಲೂಕಿನ ರೈತಾಪಿ ವರ್ಗ ಬಣ್ಣಿಸುತ್ತಿದೆ. ಶುಕ್ರವಾರ ರಾತ್ರಿ 11.15 ಕ್ಕೆ ಮಳೆ ಆರಂಭವಾಗಿ ಮಧ್ಯರಾತ್ರಿ 12.15 ರ ಸುಮಾರಿನಲ್ಲಿ 10 ನಿಮಿಷ ವಿಶ್ರಾಂತಿಯಾಗಿ ಮತ್ತೆ ಆರಂಭವಾದ ಮಳೆ ಸತತ 6 ಗಂಟೆಗಳ ಕಾಲ ಅಂದರೆ, ಶನಿವಾರ ಬೆಳಗ್ಗೆ 6.10 ರವರೆಗೂ ಒಂದೇ ಸಮನಾಗಿ ಸುರಿಯಿತು. ಅಲ್ಲದೇ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ.
ಮಳೆ ದಾಖಲೆ:
ದಶಕಗಳಿಚೆಗೆ ಉತ್ತಮ ಮಳೆಯಾಗಿದ್ದು, ತಂಬ್ರಹಳ್ಳಿ ಭಾಗದಲ್ಲಿ 111.01 ಮಿಮೀ ಮಳೆಯಾಗಿದರೆ, ಹಗರಿಬೊಮ್ಮನಹಳ್ಳಿಯಲ್ಲಿ 100.08, ಕೋಗಳಿ ಭಾಗದಲ್ಲಿ 58, ಮಾಲವಿ ಭಾಗದಲ್ಲಿ 844.ಹಂಪಸಾಗರ ವ್ಯಾಪ್ತಿಯಲ್ಲಿ 28.6 ಮಿಮೀ ಮಳೆಯಾಗಿದೆ.
ಹರಿದು ಬರುತ್ತಿರುವ ನೀರು:
ತಾಲೂಕಿನ ಅಲಬೂರು, ಅಂಬಳಿ, ಇಟ್ಟಿಗಿ ಹಾಗೂ ಬೆಣಕಲ್ಲು ಮತ್ತು ಕೋಗಳಿ ಭಾಗಗಳಲ್ಲಿ ಉತ್ತಮ ಮಳೆಯಾದ ಕಾರಣ ಮಾಲವಿ ಜಲಾಶಯಕ್ಕೆ ಎರಡ್ಮೂರು ಅಡಿಯಷ್ಟು ನೀರು ಒಂದೇ ದಿನದಲ್ಲಿ ಹರಿದು ಬಂದಿದೆ. ಇದರಿಂದ ಮಾಲವಿ ಜಲಾಶಯದಲ್ಲಿ ಕಳೆದ ಬಾರಿ ಸುರಿದ ಮಳೆ ಮತ್ತು ಈಗ ಮಳೆಯಾದ ಹಿನ್ನೆಲೆಯಲ್ಲಿ ಒಟ್ಟು 13 ಅಡಿಯಷ್ಟು ನೀರು ಸಂಗ್ರಹವಾಗಿರುವುದಾಗಿ ನೀರಾವರಿ ಇಲಾಖೆಯ ಸಿಬ್ಬಂದಿಯವರು ತಿಳಿಸಿದ್ದಾರೆ.
ಮನೆಗಳ ಕುಸಿತ:
ಮಳೆಯಿಂದ ತಾಲೂಕಿನ ಹಂಪಾಪಟ್ಟಣದಲ್ಲಿ ಭೋವಿ ರಾಮಪ್ಪ ಎಂಬವರಿಗೆ ಸೇರಿದ ಮನೆ ನಿರ್ಮಾಣ ಹಂತದಲ್ಲಿದ್ದು, ಇನ್ನೊಂದು ದಿನ ಕಳೆದರೆ, ಚಾವಣಿ(ಆರ್‌ಸಿಸಿ) ಹಾಕಲಾಗುತಿತ್ತು. ಆದರೆ, ಮಳೆಯಾದ ಪರಿಣಾಮ ಗ್ರಾಂಡಲ್ ಸಮೇತವಾಗಿ ಸಂಪೂರ್ಣ ನೆಲಕಟ್ಟಿದೆ. ತಂಬ್ರಹಳ್ಳಿಯ ಡಾ. ಅಂಬೇಡ್ಕರ್ ಕಾಲನಿಯಲ್ಲಿ ರೇಣುಕಮ್ಮ ಮತ್ತು ಹುಲಿಗೆಮ್ಮ ಎಂಬವರಿಗೆ ಸೇರಿದ ಎರಡು ಮನೆಗಳು ಸಹ ನೆಲಕ್ಕುರುಳಿವೆ. ಪಟ್ಟಣದ ನೆಹರು ನಗರದ ಕೆಲ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಬೆಳೆನಷ್ಟ:
ತಂಬ್ರಹಳ್ಳಿಯ ಕಾಕಳ್ಳಿ ಗವಿಯಪ್ಪ ಎನ್ನುವವರ 1 ಎಕರೆಯಷ್ಟು ಈರುಳ್ಳಿ ಕಿತ್ತು ಹಾಕಲಾಗಿತ್ತು. ಮಳೆಯಿಂದ ಸಂಪೂರ್ಣ ಕೊಚ್ಚಿಕೊಂಡು ಹೋಗಿ ಹಳ್ಳ ಸೇರಿದೆ. ಬಾಚಿಗೊಂಡನಹಳ್ಳಿಯಲ್ಲಿ ಚೆಂಡುಹೂವು ಬೆಳೆ, ಮೆಕ್ಕೆಜೋಳ, ಸಜ್ಜೆ, ರಾಗಿ, ನವಣಿ ಮತ್ತು ಈರುಳ್ಳಿ ನೀರಿನಿಂದ ಆವೃತ್ತಗೊಂಡಿವೆ. ಗ್ರಾಮಗಳತ್ತ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ನಷ್ಟವಾಗಿರುವ ಬಗ್ಗೆ ವರದಿ ಸಂಗ್ರಹಿಸುತಿದ್ದಾರೆ ಎಂದು ತಹಸೀಲ್ದಾರ್ ಆಶಪ್ಪ ಪೂಜಾರ್ ತಿಳಿಸಿದರು.
ಕೊಟ್ಟೂರು ತಾಲೂಕಿನಲ್ಲೂ ವರುಣನ ಆರ್ಭಟ
ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ನಂತರ ಇದೀಗ ಹಿಂಗಾರು ಮಳೆ ಭರ್ಜರಿಯಾಗಿ ಸುರಿಯತೊಡಗಿದೆ. ದಿನ ಬಿಟ್ಟು ದಿನ ಎಂಬಂತೆ ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ತಾಲೂಕಿನ ಗ್ರಾಮಗಳ ಕೆರೆಗಳು, ಗೋಕಟ್ಟೆಗಳು ಮತ್ತು ಹಳ್ಳಗಳು ತುಂಬಿ ಹರಿಯುತ್ತಿವೆ. ಶುಕ್ರವಾರ ಮಧ್ಯರಾತ್ರಿ 12 ರಿಂದ ಬೆಳಗಿನ ಜಾವದವರೆಗೆ ಮಳೆ ಜೋರಾಗಿ ಸುರಿದಿದೆ. ಭಾರಿ ಮಳೆಯಿಂದಾಗಿ ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿ ವಡ್ಡರಹಳ್ಳ ತುಂಬಿ ರಸ್ತೆ ಮೇಲೆ ನೀರು ಹರಿದಿದ್ದರಿಂದ ಕೆಲಗಂಟೆಗಳ ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪಟ್ಟಣದ ಇಟಿಗಿ ರಸ್ತೆಯ ರೈಲ್ವೆ ಸೇತುವೆ ಕೆಳಭಾಗ ಸಂಪೂರ್ಣ ಜಲಾವೃತಗೊಂಡಿತ್ತು. ಇಟಿಗಿ ರಸ್ತೆಯ ಕೆಲ ಗ್ಯಾರೇಜ್‌ಗಳಿಗೆ ನೀರು ನುಗ್ಗಿದ್ದು, ಗ್ಯಾರೇಜ್‌ನಲ್ಲಿ ಕೆಲಸ ನಿರ್ವಹಿಸದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ತಾಲೂಕಿನ ಕುಡುತಿನ ಮಗ್ಗಿ ಹಳ್ಳ 10 ವರ್ಷಗಳ ನಂತರ ಭಾರಿ ಮಳೆಯಿಂದಾಗಿ ತುಂಬಿ ಹರಿಯುತ್ತಿವೆ.