
ಬಳ್ಳಾರಿ: ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿಯಾಗಿದೆ. "ಕಾಪಾಡಿ.. ಕಾಪಾಡಿ.." ಎಂದು ಕಂಬದ ಮೇಲೆಯೇ ನರಳಾಡುತ್ತಾ, ಜೀವ ಉಳಿಸಿಕೊಳ್ಳಲು ಹೋರಾಡಿದ ಯುವಕನೊಬ್ಬ ಆಸರೆಯಿಲ್ಲದೆ ಕಂಬದ ಮೇಲೆಯೇ ನೇತಾಡಿ ಪ್ರಾಣಬಿಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಸಂಗನಕಲ್ ಗ್ರಾಮದ ಬಳಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಯರ್ರಗುಡಿ ಗ್ರಾಮದ ನಿವಾಸಿ ಹುಲಗಪ್ಪ (22) ಮೃತಪಟ್ಟ ದುರ್ದೈವಿ. ಬಡತನದ ಹಿನ್ನೆಲೆಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಈ ಯುವಕನಿಗೆ ಸಾವು ಇಷ್ಟು ಭೀಕರವಾಗಿ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸಂಗನಕಲ್ ಗ್ರಾಮದ ಧ್ಯಾನ ಮಂದಿರದ ಬಳಿ ವಿದ್ಯುತ್ ಲೈನ್ ಸರಿಪಡಿಸಲು ಈತನನ್ನು ಕಂಬ ಹತ್ತಿಸಲಾಗಿತ್ತು.
ವಿದ್ಯುತ್ ಕಂಬ ಏರಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಹೈವೋಲ್ಟೇಜ್ ಕರೆಂಟ್ ತಗುಲಿದ ಪರಿಣಾಮ ಹುಲಗಪ್ಪ ಕಂಬದ ಮೇಲೆಯೇ ಸಿಲುಕಿಕೊಂಡಿದ್ದಾನೆ. ಮೈ ನಡುಗಿಸುವ ಈ ದೃಶ್ಯ ನೋಡುಗರ ಎದೆ ಒಡೆಯುವಂತಿತ್ತು. ಸುಮಾರು 15 ನಿಮಿಷಗಳ ಕಾಲ ಹುಲಗಪ್ಪ ನನ್ನನ್ನು ಉಳಿಸಿ.. ಯಾರಾದರೂ ಕಾಪಾಡಿ ಎಂದು ಕಿರುಚಾಡಿದ್ದಾನೆ. ಆದರೆ ಕೆಳಗೆ ನಿಂತಿದ್ದ ಇತರ ಕಾರ್ಮಿಕರು ಅಸಹಾಯಕರಾಗಿ ನೋಡುತ್ತಿದ್ದರೇ ಹೊರತು, ಆತನನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಸರಿಯಾದ ಸುರಕ್ಷತಾ ಸಾಧನಗಳಿಲ್ಲದೆ, ಅಧಿಕಾರಿಗಳ ಮಾರ್ಗದರ್ಶನವಿಲ್ಲದೆ ಆ ಯುವಕ ನರಳಾಡಿ ನರಳಾಡಿ ಕಂಬದ ಮೇಲೆಯೇ ಶವವಾಗಿದ್ದಾನೆ.
ಈ ಸಾವಿಗೆ ಜೆಸ್ಕಾಂ (JESCOM) ಅಧಿಕಾರಿಗಳು ಮತ್ತು ಲೇಬರ್ ಗುತ್ತಿಗೆದಾರನ ನೇರ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಲೈನ್ ಸರಿಪಡಿಸುವ ಮೊದಲು ಲೈನ್ ಕ್ಲಿಯರೆನ್ಸ್ (LC - Line Clearance) ಪಡೆಯುವುದು ಕಡ್ಡಾಯ. ಆದರೆ ಅಧಿಕಾರಿಗಳು ಎಲ್‌ಸಿ ಪಡೆಯದೆಯೇ ಹುಲಗಪ್ಪನನ್ನು ಕಂಬ ಹತ್ತಿಸಿದ್ದಾರೆ. ಅಷ್ಟೇ ಅಲ್ಲದೆ, ಅಪಾಯಕಾರಿ ಕೆಲಸ ನಡೆಯುವಾಗ ಸ್ಥಳದಲ್ಲಿ ಯಾವುದೇ ಲೈನ್ ಮ್ಯಾನ್ ಅಥವಾ ಜವಾಬ್ದಾರಿಯುತ ಅಧಿಕಾರಿ ಇರಲಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮೃತ ಹುಲಗಪ್ಪನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಬಡ ಕುಟುಂಬದ ಆಧಾರಸ್ತಂಭವಾಗಿದ್ದ ಯುವಕ, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಹೆಣವಾಗಿ ಮನೆಗೆ ಮರಳಿದ್ದಾನೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಘಟನೆಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಡವರ ಜೀವಕ್ಕೆ ಬೆಲೆಯೇ ಇಲ್ಲವೇ? ಎಂದು ಸಾರ್ವಜನಿಕರು ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ.