ಬಿಎಸ್ ವೈ ನೇತೃತ್ವದ ಬಿಜೆಪಿ ಸರ್ಕಾರ ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ಇತಿಹಾಸ ಕೈ ಬಿಡುವ ಬಗ್ಗೆ ಚಿಂತಿಸುತ್ತಿದೆ. ಇದರ ಮಧ್ಯೆ ಕನ್ನಡ ರಾಜ್ಯೋತ್ಸದಂದು ಸರ್ಕಾರಿ ಉರ್ದು ಹಿರಿಯ ಶಾಲೆಯೊಂದು ಮಕ್ಕಳಿಗೆ ಟಿಪ್ಪು ವೇಷ ಹಾಕಿಸಿ ಮೆರವಣಿಗೆ ಮಾಡಿಸಿದೆ. ಈ ಮೂಲಕ ಪರೋಕ್ಷವಾಗಿ ಸರ್ಕಾರಕ್ಕೆ ಸೆಡ್ಡು ಹೊಡೆದಂತಿದ್ದು, ಇದೀಗ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಬಾಗಲಕೋಟೆ, [ನ.01]: ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ಇತಿಹಾಸ ಕೈ ಬಿಡುವ ರಾಜ್ಯ ಸರ್ಕಾರದ ಚಿಂತನೆಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದೇ ವಿಚಾರವಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೊಂದು ವಿವಾದ ಸೃಷ್ಟಿಯಾಗಿದೆ.
ಶುಕ್ರವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಸರ್ಕಾರಿ ಉರ್ದು ಹಿರಿಯ ಶಾಲೆಯ ಮಕ್ಕಳು ಟಿಪ್ಪು ವೇಷ ಧರಿಸಿಕೊಂಡು ಪಾಲ್ಗೊಂಡಿರುವುದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಮೈಸೂರು ಹುಲಿ ‘ಅಧ್ಯಾಯ’ ಅಂತ್ಯ: ಕಾಂಗ್ರೆಸ್-ಬಿಜೆಪಿ ಮಧ್ಯೆ ಟಿಪ್ಪು ಯುದ್ಧ
ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಮಕ್ಕಳು ನಾನಾ ವೇಷ, ಪೋಷಾಕುಗಳನ್ನು ಧರಿಸಿಕೊಂಡಿದ್ದರು. ಇದೇ ವೇಳೆ ಮುಧೋಳ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಹಾಗೂ ಆತನ ಸೈನಿಕರ ವೇಷ-ಭೂಷಣ-ಪೋಷಾಕನ್ನು ತೊಡಿಸಿ, ಮೆರವಣಿಗೆಯಲ್ಲಿ ಬರಲು ಅವಕಾಶ ನೀಡಲಾಗಿದೆ.
ಇದೀಗ ಇದು ತಾಲೂಕಿನ ಎಲ್ಲೆಡೆ ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಮುಧೋಳ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ-1 ರ ಮುಖ್ಯಗುರು ಉದ್ದೇಶಪೂರ್ವಕವಾಗಿ ಮಕ್ಕಳಿಗೆ ಟಿಪ್ಪು ವೇಷ ತೊಡಿಸಿದ್ದಾರೆ ಎಂದು ಆರೋಪಗಳು ಕೇಳಿಬಂದಿದ್ದು, ಇದನ್ನು ನಾನಾ ಸಂಘ-ಸಂಸ್ಥೆಗಳು ಖಂಡಿಸಿವೆ.
ಅತ್ತ ಟಿಪ್ಪು 'ಅಧ್ಯಾಯ'ಕ್ಕೆ ಕತ್ತರಿ: ಇತ್ತ IPS ಆಫೀಸರ್ ಬಾಯಲ್ಲಿ ಎಂಥಾ ಮಾತುಗಳು ರೀ...!
ಮಕ್ಕಳನ್ನು ಬಳಸಿಕೊಂಡು ಟಿಪ್ಪು ಸುಲ್ತಾನನ ಮೇಲಿನ ಅಭಿಮಾನ-ಮಮತೆಯನ್ನು ವ್ಯಕ್ತಪಡಿಸಿದ್ದನ್ನು ಜಮಖಂಡಿಯ ನಗರಸಭೆ ಸದಸ್ಯರೊಬ್ಬರು ಖಂಡಿಸಿದ್ದು, ಶಿಕ್ಷಣ ಇಲಾಖೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿ ಬಿಇಒ ಅವರನ್ನು ಒತ್ತಾಯಿಸಿದ್ದಾರೆ.