‘ಬಿಜೆಪಿ ಇದ್ರೆ ದೇಶ ಸರ್ವನಾಶ ಆಗೋದು ಗ್ಯಾರಂಟಿ’

By Web Desk  |  First Published Oct 31, 2019, 2:16 PM IST

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ| ಪ್ರಧಾನಿ ಮೋದಿಗೆ 56 ಇಂಚಿನ ಎದೆ ಇದ್ದರೆ ಸಾಲು ಅದರಲ್ಲಿ ಮಾತೃ ಹೃದಯ ಇರಬೇಕು| ರಾಜ್ಯದಲ್ಲಿ ಪ್ರವಾಹದಿಂದ ಒಂದು ಲಕ್ಷ ಕೋಟಿಗೂ ಅಧಿಕ ಹಾನಿ| ಕೇಂದ್ರ ಸರ್ಕಾರ ಕೇವಲ 1200 ಕೋಟಿ ಬಿಡುಗಡೆ ಮಾಡಿದೆ| ನಮ್ಮ ಪಕ್ಷ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತದೆ|ಬಿಜೆಪಿಯವರು ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ ಎನ್ನುತ್ತಾರೆ. ಆದರೆ, ಅವರು ಹಿಂದುಳಿದವರಿಗೆ ಏನು ಮಾಡಿದ್ದಾರೆ?|


ಜಮಖಂಡಿ[ಅ.30]: ಬಿಜೆಪಿಯವರಿಂದ ಯಾವುದೇ ಅಭಿವೃದ್ಧಿ ಆಗುವುದಿಲ್ಲ. ಅವರು ಆಡಳಿತ ನಡೆಸುವ ರಾಜ್ಯಗಳಲ್ಲಿ ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಬಿಜೆಪಿ ಇರುವಷ್ಟು ದಿನ ದೇಶ ಸರ್ವನಾಶ ಆಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಇಲ್ಲಿನ ಬಸವ ಭವನದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಆಶ್ರಯದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹದಿಂದ ಒಂದು ಲಕ್ಷ ಕೋಟಿಗೂ ಅಧಿಕ ಹಾನಿಯಾಗಿದೆ. ಆದರೆ, ಕೇಂದ್ರ ಸರ್ಕಾರ ಕೇವಲ 1200 ಕೋಟಿ ಬಿಡುಗಡೆ ಮಾಡಿದೆ. 56 ಇಂಚಿನ ಎದೆ ಇದ್ದರೆ ಸಾಲದು, ಅದರಲ್ಲಿ ಮಾತೃ ಹೃದಯ ಇರಬೇಕು ಎಂದು ಪ್ರಧಾನಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ನಮ್ಮ ಪಕ್ಷ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತದೆ. ಆದರೆ, ಬಿಜೆಪಿಯವರು ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ ಎನ್ನುತ್ತಾರೆ. ಆದರೆ, ಅವರು ಹಿಂದುಳಿದವರಿಗೆ ಏನು ಮಾಡಿದ್ದಾರೆ? ಪುಲ್ವಾಮಾ, ಪಾಕಿಸ್ತಾನ, ಅದು ಇದು ಎಂದು ಸುಳ್ಳು ಹೇಳುತ್ತಾರೆ. ಅವರು ಲಜ್ಜಿಗೆಟ್ಟವರು. ಸಂವಿಧಾನಕ್ಕೆ ವಿರೋಧವಾಗಿ ನಡೆಯುವರು. ಇಂತವರು ಅಧಿಕಾರದಲ್ಲಿ ಇರಬೇಕಾ ಎಂದು ನೆರೆದಿದ್ದ ಜನತೆಯನ್ನು ಪ್ರಶ್ನಿಸಿದರು.

Latest Videos

undefined

ಅನರ್ಹರಿಗೆ ತಕ್ಕ ಪಾಠ:

ಕಾಂಗ್ರೆಸ್‌ ಬಿಟ್ಟು ಶಿವಸೇನಾ, ಎನ್‌ಸಿಪಿ ಸೇರಿದಂತೆ ಬೇರೆ ಪಕ್ಷಗಳಿಗೆ ಪಕ್ಷಾಂತರ ಮಾಡಿದ್ದ ಅಭ್ಯರ್ಥಿಗಳಿಗೆ ಮಹಾರಾಷ್ಟ್ರದ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಅದರಂತೆ ರಾಜ್ಯದಲ್ಲಿ ಪಕ್ಷಕ್ಕೆ ಮತ್ತು ಮತದಾರರಿಗೆ ಅವಮಾನ ಮಾಡಿದ 15 ಜನರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಬಿ.ಎಸ್‌ ಯಡಿಯೂರಪ್ಪ ಸರ್ಕಾರ ತನ್ನಿಂದ ತಾನೆ ಬಿದ್ದುಹೋಗುತ್ತದೆ ಎಂದು ಭವಿಷ್ಯ ನುಡಿದರು.

ನಾನು ಸಿಎಂ ಆಗುವ ಕನಸು ಕಾಣುತ್ತಿಲ್ಲ. ನಾನು ದೇವರಾಜ ಅರಸ ನಂತರ ಅಧಿಕಾರ ಪೂರ್ಣಾವಧಿ ಪೂರೈಸಿ ಬಡವರ ಸೇವೆ ಮಾಡಿದ್ದೇನೆ. ಅದನ್ನು ಕುಮಾರಸ್ವಾಮಿಯವರು ತಿಳಿದುಕೊಳ್ಳಬೇಕು ಎಂದು ಕುಟುಕಿದರು.

ಹೋರಾಟ:

ನ.4 ರಂದು ವಿದೇಶದಿಂದ ಹಾಲು ರಫ್ತು ಮಾಡುವುದಕ್ಕೆ ಒಪ್ಪಂದ ಮಾಡಿಕೊಂಡರೆ ದೊಡ್ಡ ಹೋರಾಟ ಮಾಡಬೇಕಾಗುತ್ತದೆ. ರಾಜ್ಯದಲ್ಲಿ 1.5 ಕೋಟಿ ಜನರು ಹೈನುಗಾರಿಕೆ ಮೇಲೆ ಬದುಕು ನಡೆಸುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ವಿದೇಶದಿಂದ ಹಾಲು ತರುವ ಒಪ್ಪಂದಕ್ಕೆ ಮುಂದಾಗಿರುವುದು ರೈತ ಸಮೂಹಕ್ಕೆ ಭಾರಿ ಪೆಟ್ಟು ಬೀಳುತ್ತದೆ. ದಿನಕ್ಕೆ 78 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ವಿದೇಶ ಹಾಲು ಬಂದರೆ ದೇಶದ ಅರ್ಥವ್ಯವಸ್ಥೆ ತೀರಾ ಹಾಳಾಗುತ್ತದೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಶಾಸಕರಾರ‍ಯರು ಯಜಮಾನರಲ್ಲ. ಜನರ ಸೇವಕರು. ಸೇವೆ ಮಾಡಲು ಜನರು ಆರಿಸಿ ಕಳುಹಿಸಿರುತ್ತಾರೆ. ಶಾಸಕ ಆನಂದ ನ್ಯಾಮಗೌಡ ಅವರು ಸಕ್ರಿಯವಾಗಿ, ಬದ್ಧತೆಯಿಂದ ಅರ್ಥಪೂರ್ಣವಾಗಿ ಕಾರ್ಯ ಮಾಡುತ್ತಿದ್ದಾರೆ. ಶಾಸಕರಾಗಿ 1 ವರ್ಷ ತುಂಬಿದೆ. ಶತಮಾನದಲ್ಲೆ ಉಂಟಾದ ಭೀಕರ ಪ್ರವಾಹದ ಸಂದರ್ಭದಲ್ಲಿ ಆನಂದ ನ್ಯಾಮಗೌಡ ಅವರು ಬೋಟ್‌ನಲ್ಲಿ ಸಂಚರಿಸಿ ಜನರ ರಕ್ಷಣಾ ಕಾರ್ಯ ಮಾಡಿದ್ದು ಶ್ಲಾಘನೀಯ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಬೆಳಗಾವಿವರೆಗೆ ಸುಮಾರು 150 ಕಿಮೀ ದೂರ ಪಾದಯಾತ್ರೆ ಮಾಡಿದ್ದಾರೆ. ಈ ಭಾಗದ ಯಾವ ಶಾಸಕರು ಮಾಡಲಿಲ್ಲ. ಜನಪ್ರತಿನಿಧಿಗಳಾದವರು ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಮನಸು ಹೊಂದಿರಬೇಕು ಎಂದರು.

ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ನಮ್ಮ ತಂದೆ ದಿ. ಸಿದ್ದು ನ್ಯಾಮಗೌಡ ಅವರ ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ 100 ಹಾಸಿಗೆಯ ನೂತನ ಆಸ್ಪತ್ರೆ, ಹೈಟೆಕ್‌ ಗ್ರಂಥಾಲಯ, ರಸ್ತೆ ರಿಪೇರಿಗೆ ಸೇರಿ 450 ಕೋಟಿ ಅನುದಾನದಲ್ಲಿ ವಿವಿಧ ಕಾರ್ಯಗಳನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಜಮಖಂಡಿ ಜಿಲ್ಲೆ, ಸಾವಳಗಿ ತಾಲೂಕು ಕೇಂದ್ರವನ್ನಾಗಿ ಮಾಡಿಸಿಕೊಳ್ಳಲಾಗುವುದು ಎಂದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ, ಜಿಲ್ಲಾಧ್ಯಕ್ಷ ಎಸ್ ಜಿ. ನಂಜಯ್ಯನಮಠ ಮಾತನಾಡಿದರು. ವೇದಿಕೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಆರ್‌.ಬಿ.ತಿಮ್ಮಾಪೂರ, ಮಾಜಿ ಸಚಿವ ಎಚ್‌.ವೈ.ಮೇಟಿ, ಮಾಜಿ ಸಚಿವೆ ಉಮಾಶ್ರೀ, ಶ್ರೀಶೈಲ ದಳವಾಯಿ, ಇಲಾಹಿ ಕಂಗನೊಳ್ಳಿ, ನಜೀರ ಕಂಗನೊಳ್ಳಿ, ರಕ್ಷಿತಾ ಈಟಿ, ರಾಜು ಪಿಸಾಳ, ಎನ್‌.ಎಸ್‌.ದೇವರವರ, ಪಕೀರಸಾಬ ಬಾಗವಾನ, ಅರುಣಕುಮಾರ ಶಹಾ, ವಿನಯ ತಿಮ್ಮಾಪೂರ, ಸಿದ್ದು ಮಿಸಿ, ಶ್ಯಾಮರಾವ ಘಾಟಗೆ, ಈಶ್ವರ ವಾಳೆನ್ನವರ, ಹೊಳಬಸು ಶೆಟ್ಟರ, ಇತರರು ಇದ್ದರು. 

click me!