
ಬಾಗಲಕೋಟೆ: ಮುಸುಕುಧಾರಿ ಕಳ್ಳರು ನಡುರಸ್ತೆಯಲ್ಲಿ ಬಿಂದಾಸ್ ಆಗಿ ಓಡಾಡಿ ಸರಣಿ ಮನೆಗಳ್ಳತನ ನಡೆಸಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಕುಳಗೇರಿ ಗ್ರಾಮದಲ್ಲಿ ನಡೆದಿದೆ. ರಾತ್ರಿ ವೇಳೆ ಆಗಮಿಸಿರೋ 4 ಜನ ಮುಸುಕುಧಾರಿಗಳು ಕೈಯಲ್ಲಿ ಟಾರ್ಚ್ ಹಿಡಿದು ಬೀಗ ಹಾಕಿರೋ ಮನೆಗಳನ್ನ ಪರಿಶೀಲಿಸಿದ್ದಾರೆ. ನಂತರ ಬೀಗ ಹಾಕದ ಬಡಿಗೇರ ಮತ್ತು ಜಕಾತಿ ಎಂಬುವವರ ಮನೆಗೆ ನುಗ್ಗಿ 3 ಲಕ್ಷ ನಗದು ಸೇರಿ 3 ತೊಲಿ ಬಂಗಾರದ ಆಭರಣ ಕದ್ದೊಯ್ದಿದ್ದಾರೆ. ಇತ್ತ ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮುಸುಕುಧಾರಿ ಕಳ್ಳರ ಓಡಾಟ ಕಂಡು ಬಡಾವಣೆಗಳ ಜನರು ಆತಂಕಗೊಂಡಿದ್ದಾರೆ. ಇನ್ನೊಂದೆಡೆ ಕುಳಗೇರಿ ಪೋಲಿಸ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಸಿಬ್ಬಂದಿ ನೇಮಿಸಿ ರಕ್ಷಣೆ ನೀಡುವಂತಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿದ್ಯುತ್ ಸ್ಪರ್ಶದಿಂದ ಯುವ ರೈತ ಸಾವು
ಪಾಂಡವಪುರ: ವಿದ್ಯುತ್ ಸ್ಪರ್ಶದಿಂದ ಯುವ ರೈತ ಮೃತಪಟ್ಟಿರುವ ಘಟನೆ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ರೈತ ಕಲ್ಲು ವೀರೇಗೌಡರ ಪುತ್ರ ಅಕ್ಷಯ್ (30) ಮೃತ ಯುವ ರೈತ. ಅಕ್ಷಯ್ ಸ್ವಗ್ರಾಮ ಸಮೀಪದ ಎಸ್.ಕೊಡಗಹಳ್ಳಿ ಎಲ್ಲೆಯಲ್ಲಿನ ಜಮೀನಿನಲ್ಲಿ ಕಬ್ಬು ಮತ್ತು ತರಕಾರಿ ಬೇಸಾಯಕ್ಕಾಗಿ ಪಂಪ್ ಸೆಟ್ ಚಾಲನೆ ಮಾಡಲು ಹೋದ ವೇಳೆ ವಿದ್ಯುತ್ ಸ್ಪರ್ಶವಾಗಿ ಗಂಭೀರ ಗಾಯಗೊಂಡಿದ್ದಾನೆ.
ಅಕ್ಷಯ್‌ನನ್ನು ಚಿಕಿತ್ಸೆಗಾಗಿ ಪಟ್ಟಣದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿ ಅಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಜಮೀನಿನ ಬಳಿ ಕೃಷಿ ಚಟುವಟಿಕೆಗೆ ಪಂಪ್ ಸೆಟ್ ಮೂಲಕ ನೀರು ಹಾಯಿಸಲು ವಿದ್ಯುತ್ ಬಂದಿಲ್ಲವೆಂದು ಪರಿಶೀಲಿಸುತ್ತಿದ್ದಾಗ 11ಕೆವಿ ವಿದ್ಯುತ್ ಮಾರ್ಗದಲ್ಲಿ ಪ್ರೈಮರಿಯಿಂದ ಸೆಕೆಂಡರಿ ಲೈನಿಗೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶವಾಗಿ ಪುತ್ರ ಅಕ್ಷಯ್ ಮೃತಪಟ್ಟಿದ್ದು, ಕಾನೂನು ರೀತಿಯ ಕ್ರಮ ಜರುಗಿಸುವಂತೆ ತಂದೆ ಕಲ್ಲು ವೀರೇಗೌಡ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪಟ್ಟಣದ ಉಪವಿಭಾಗೀಯ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸುಂಕಾತೊಣ್ಣೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಮಂಡ್ಯ: ಪ್ರಥಮ ಪಿಯುಸಿಯಲ್ಲಿ ಶೇ.೭೮ ರಷ್ಟು ಫಲಿತಾಂಶ ಬಂದಿದ್ದರೂ ಕಡಿಮೆ ಅಂಕ ಬಂದಿರುವುದಾಗಿ ಬೇಸತ್ತ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ಪಶ್ಚಿಮವಾಹಿನಿಯ ಜೀವಿತಾ (೧೭) ಮೃತ ಯುವತಿ. ಪ್ರಥಮ ಪಿಯುಸಿಯಲ್ಲಿ ಚೆನ್ನಾಗಿ ಓದಿ ಪರೀಕ್ಷೆ ಬರೆದಿದ್ದೆ. ನಿರೀಕ್ಷೆಯಷ್ಟು ಅಂಕ ಬಂದಿಲ್ಲ ಎಂದು ಸದಾಕಾಲ ಬೇಸರದಿಂದ ಇರುತ್ತಿದ್ದಳು. ದ್ವಿತೀಯ ಪಿಯುಸಿಯಲ್ಲಿ ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸುವಂತೆ ತಂದೆ-ತಾಯಿ ಹೇಳಿದರೂ ಕೇಳದೆ ಮನನೊಂದು ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ ಎಂದು ಯುವತಿಯ ತಂದೆ ಆನಂದ್ ಪೊಲೀಸರಿಗೆ ದೂರು ನೀಡಿದ್ದಾರೆ.