
ಬಾಗಲಕೋಟೆ (ಆ.5): ಬಾಗಲಕೋಟೆಯ ಬಡಕುಟುಂಬದ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಟೀಮ್ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ನೆರವಿನ ಹಸ್ತ ಚಾಚಿರುವ ವಿಚಾರ ತಡವಾಗಿ ಗೊತ್ತಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಗಾಯದ ಕಾರಣಕ್ಕಾಗಿ ಅರ್ಧದಲ್ಲೇ ಹೊರಬಿದ್ದ ರಿಷಬ್ ಪಂತ್ ಬಡ ಹುಡುಗಿಯ ಕಷ್ಟಕ್ಕೆ ಮರುಗಿ ಹಣಕಾಸು ನೆರವು ನೀಡಿದ್ದಾರೆ.
ವಿದ್ಯಾರ್ಥಿನಿಯ ಬಿಸಿಎ ತರಗತಿ ಪ್ರವೇಶಕ್ಕೆ ಅವಶ್ಯಕತೆ ಇದ್ದ 40 ಸಾವಿರ ಹಣವನ್ನು ನೀಡುವ ಮೂಲಕ ರಿಷಬ್ ಪಂತ್ ಮಾದರಿಯಾಗಿದ್ದಾರೆ. ಬಡ ವಿದ್ಯಾರ್ಥಿನಿ ಜ್ಯೋತಿ ಕಣಬೂರ್‌ಗೆ ರಿಷಬ್ ಪಂತ್ ಹಣ ಸಹಾಯ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ಜ್ಯೋತಿ, ಜಮಖಂಡಿ ಬಿಎಲ್.ಡಿ ಕಾಲೇಜ್ ನಲ್ಲಿ ಬಿಸಿಎ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದಾರೆ.
ಜ್ಯೋತಿ ಕಣಬೂರ್ ದ್ವಿತೀಯ ಪಿಯುಸಿ ಕಾಮರ್ಸ್ ನಲ್ಲಿ ಶೆ. 85ರಷ್ಟು ಅಂಕ ಪಡೆದಿದ್ದರು. ಮನೆಯಲ್ಲಿ ಕಡುಬಡತನ. ಹಾಗಿದ್ದರೂ ಬಿಸಿಎ ಮಾಡುವ ಕನಸು ಹೊತ್ತಿದ್ದಳು. ಆಕೆಯ ತಂದೆ ತೀರ್ಥಯ್ಯ ಕಣಬೂರ ಹಣ ಹೊಂದಿಸಲಾಗದೆ ಪರದಾಡುತ್ತಿದ್ದರು. ಈ ವಿಷಯ ಅದೇ ಊರಿನ ಅನಿಲ ಹುಣಸಿಕಟ್ಟಿ ಎಂಬ ಯುವಕನಿಗೆ ಗೊತ್ತಾಗಿದೆ. ಅನಿಲ ಹುಣಸಿಕಟ್ಟಿ ಸ್ನೇಹಿತರು ಐಪಿಎಲ್‌ನಲ್ಲಿ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಅನಿಲ್ ವಿಷಯ ತಿಳಿಸಿದ್ದಾನೆ.
ಈ ವೇಳೆ ಅನಿಲ್‌ನ ಸ್ನೇಹಿತರು ವಿಚಾರವನ್ನು ರಿಷಬ್ ಪಂತ್ ಅವರ ಗಮನಕ್ಕೆ ತಂದಿದ್ದಾರೆ.ಬಳಿಕ ರಿಷಬ್ ಪಂತ್ ಸ್ನೇಹಿತರ ಸಹಾಯದಿಂದ ಜ್ಯೋತಿ ಅವರ ಬಾಕಿ ಇದ್ದ 40 ಸಾವಿರ ಶುಲ್ಕವನ್ನು ಭರಿಸಿ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ರಿಷಬ್ ಪಂತ್ ಸಹಾಯಕ್ಕೆ ಜ್ಯೋತಿ ಹಾಗೂ ಅವರ ಕುಟುಂಬ ಕೃತಜ್ಞತೆ ಸಲ್ಲಿಸಿದೆ.