ರೆನಾಲ್ಟ್‌ನಿಂದ 7 ಸೀಟರ್‌ ಫ್ಯಾಮಿಲಿ ಕಾರ್‌

By Web DeskFirst Published Jun 24, 2019, 9:52 AM IST
Highlights

ರೆನಾಲ್ಟ್‌ನಿಂದ 7 ಸೀಟರ್‌ ಫ್ಯಾಮಿಲಿ ಕಾರ್‌ |  ಭಾರತೀಯರನ್ನೇ ಗಮನದಲ್ಲಿಟ್ಟುಕೊಂಡು ತಯಾರಿಸಿದ ‘ಟ್ರೈಬರ್‌’ | ಡಸ್ಟರ್‌, ಕ್ವಿಡ್‌ ನಂತರ ಇನ್ನೊಂದು ಪ್ರಯೋಗ

ನವದೆಹಲಿ (ಜೂ. 24): ಡಸ್ಟರ್‌, ಕ್ವಿಡ್‌ನಂತಹ ಕಾರುಗಳಿಂದ ಜನಪ್ರಿಯತೆ ಗಳಿಸಿರುವ ಫ್ರಾನ್ಸ್‌ ಮೂಲದ ರೆನಾಲ್ಟ್‌ ಕಂಪನಿ ಇದೀಗ ಭಾರತೀಯರಿಗೆಂದೇ ತಯಾರಿಸಿದ 7 ಸೀಟುಗಳ ಫ್ಯಾಮಿಲಿ ಕಾರನ್ನು ಮೊದಲ ಬಾರಿಗೆ ಪ್ರದರ್ಶಿಸಿದೆ. ಸಣ್ಣ ಕಾರಿನಲ್ಲೇ 7 ಸೀಟು ಅಳವಡಿಸಿಕೊಳ್ಳುವ ಆಯ್ಕೆ ನೀಡಿರುವುದು ಮತ್ತು ಸೀಟನ್ನು 100 ರೀತಿಯಲ್ಲಿ ಅಡ್ಜೆಸ್ಟ್‌ ಮಾಡಿಕೊಳ್ಳಲು ಸಾಧ್ಯವಿರುವುದು ಇದರ ವಿಶೇಷ!

ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ರೆನಾಲ್ಟ್‌ ಟ್ರೈಬರ್‌ ಕಾರನ್ನು ರೆನಾಲ್ಟ್‌ ಗ್ರೂಪ್‌ನ ಸಿಇಒ ಥೀರಿ ಬೊಲೊರೆ ಬಿಡುಗಡೆ ಮಾಡಿದರು. ‘ಈ ಕಾರನ್ನು ಭಾರತೀಯರ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡೇ ವಿನ್ಯಾಸಗೊಳಿಸಲಾಗಿದ್ದು, ಚೆನ್ನೈನಲ್ಲಿ ಉತ್ಪಾದಿಸಲಾಗುತ್ತಿದೆ.

ಈ ಕಾರಿನ ಮೂಲಕ 2022ರ ವೇಳೆಗೆ ಭಾರತದ ಮಾರುಕಟ್ಟೆಯಲ್ಲಿ ನಮ್ಮ ಕಾರುಗಳ ಮಾರಾಟದ ಸಂಖ್ಯೆಯನ್ನು ದ್ವಿಗುಣಗೊಳಿಸಿ 50 ಲಕ್ಷಕ್ಕೇರಿಸುವ ಗುರಿ ಹಾಕಿಕೊಂಡಿದ್ದೇವೆ’ ಎಂದು ಬೊಲೊರೆ ಹೇಳಿದರು.

ಈ ವೇಳೆ ಮಾತನಾಡಿದ ರೆನಾಲ್ಟ್‌ ಗ್ರೂಪ್‌ನ ಕಾರ್ಪೊರೇಟ್‌ ಡಿಸೈನ್‌ ವಿಭಾಗದ ಉಪಾಧ್ಯಕ್ಷ ಲಾರೆನ್ಸ್‌ ವ್ಯಾನ್‌ಡೆನ್‌ ಆ್ಯಕರ್‌, ‘4 ಮೀಟರ್‌ನೊಳಗಿನ ಕಾರಿನಲ್ಲಿ 7 ಸೀಟು ಅಳವಡಿಸಿರುವುದು ನಿಜಕ್ಕೂ ಪವಾಡ. ಇಡೀ ಕುಟುಂಬ, ಸ್ನೇಹಿತರು ಅಥವಾ ನೆಂಟರ ಜೊತೆಗೆ ಔಟಿಂಗ್‌ ಹೋಗಲು ಅಥವಾ ಒಬ್ಬರೇ ಬಳಸಲು ಹೀಗೆ ಎಲ್ಲಾ ಅಗತ್ಯಗಳಿಗೂ ಟ್ರೈಬರ್‌ ಹೊಂದಿಕೊಳ್ಳುತ್ತದೆ’ ಎಂದು ತಿಳಿಸಿದರು.

ಕಂಪನಿಯ ಭಾರತೀಯ ವಿಭಾಗದ ಸಿಇಒ ಹಾಗೂ ಮ್ಯಾನೇಜಿಂಗ್‌ ಡೈರೆಕ್ಟರ್‌ ವೆಂಕಟರಾಮ್‌ ಮಾಮಿಳ್ಳಪಲ್ಲೆ ಉಪಸ್ಥಿತರಿದ್ದರು. ಕಾರಿನ ನಿಖರ ಬೆಲೆಯನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. 5.5 ಲಕ್ಷ ರು.ನಿಂದ ಲಭ್ಯವಾಗಬಹುದು ಎಂದು ಹೇಳಲಾಗಿದೆ. ರೆನಾಲ್ಟ್‌ ಟ್ರೈಬರ್‌ ಇನ್ನೂ ಮಾರುಕಟ್ಟೆಗೆ ಕಾಲಿಟ್ಟಿಲ್ಲ. ಮುಂದಿನ ತಿಂಗಳುಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ.

‘ಟ್ರೈಬರ್‌’ ವಿಶೇಷತೆಯೇನು?

-ಕಡಿಮೆ ಬೆಲೆಯ ಸಣ್ಣ ಕಾರಿನಲ್ಲಿ ಏಳು ಸೀಟು. ಕೊನೆಯ ಎರಡು ಸೀಟು ತೆಗೆದರೆ ಲಗೇಜ್‌ ಇರಿಸಲು ದೊಡ್ಡ ಜಾಗ.

-5, 6, 7 ಹೀಗೆ ಎಷ್ಟುಸೀಟು ಬೇಕಾದರೂ ಅಳವಡಿಸಿಕೊಳ್ಳಬಹುದು. ಸೀಟುಗಳನ್ನು 100 ರೀತಿ ಅಡ್ಜೆಸ್ಟ್‌ ಮಾಡಿಕೊಳ್ಳಬಹುದು.

-1 ಲೀಟರ್‌, 3 ಸಿಲಿಂಡರ್‌ನ ಪೆಟ್ರೋಲ್‌ ಎಂಜಿನ್‌. 182 ಎಂಎಂ ಗ್ರೌಂಡ್‌ ಕ್ಲಿಯರೆನ್ಸ್‌. 40 ಲೀಟರ್‌ ಸಾಮರ್ಥ್ಯದ ಪೆಟ್ರೋಲ್‌ ಟ್ಯಾಂಕ್‌.
 

click me!