Rapido Ban Demand: ಆಟೋ-ಕ್ಯಾಬ್ ಚಾಲಕರೊಂದಿಗೆ ಸಚಿವ ಶ್ರೀ ರಾಮುಲು ಸಭೆ: ರ‍್ಯಾಪಿಡೋ ನಿಷೇಧ ತೀರ್ಮಾನ?

By Suvarna NewsFirst Published Feb 21, 2022, 9:48 AM IST
Highlights

*ಆಟೋ-ಕ್ಯಾಬ್ ಚಾಲಕರ ಅಸೋಸಿಯೇಷನ್ ಜತೆ ಶ್ರೀರಾಮುಲು ಸಭೆ!
*ರಾಜ್ಯದಲ್ಲಿ ಬಂದ್ ಆಗುತ್ತಾ ರ್ಯಾಪಿಡೋ ಬೈಕ್ ಟ್ಯಾಕ್ಸಿ?
*ಇವತ್ತು ರ್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸುತ್ತಾರಾ ಸಾರಿಗೆ ಸಚಿವರು? 
*ಆಟೋ,ಟ್ಯಾಕ್ಸಿ ಸತತ ಹೋರಾಟಕ್ಕೆ ಸಿಗುತ್ತಾ ಮುಕ್ತಿ..?
 

ಬೆಂಗಳೂರು (ಫೆ. 21): ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳಾದ ರ‍್ಯಾಪಿಡೊ (Rapido Bike Taxi) ನಿಷೇಧಿಸುವ ಬೇಡಿಕೆಯನ್ನು ಚರ್ಚಿಸಲು ಸೋಮವಾರ ಟ್ಯಾಕ್ಸಿ ಮತ್ತು ಆಟೋರಿಕ್ಷಾ ಚಾಲಕರ ಸಂಘದ ಪ್ರತಿನಿಧಿಗಳನ್ನು ಸಚಿವ ಶ್ರೀರಾಮುಲು ಭೇಟಿ ಮಾಡಲಿದ್ದಾರೆ. 12 ಗಂಟೆಗೆ ವಿಧಾನಸೌಧದಲ್ಲಿ ಚಾಲಕ ಸಂಘಟನೆಗಳ ಜೊತೆ ಸಾರಿಗೆ ಸಚಿವರ ಮಹತ್ವದ ಸಭೆ ನಡೆಯಲಿದೆ.  ವಿದ್ಯುತ್ ಚಾಲಿತ ಬೈಕ್ ಗಳನ್ನು ಟ್ಯಾಕ್ಸಿಯಾಗಿ ಓಡಿಸಲು ಸರಕಾರ ಅನುಮತಿ ನೀಡಿದ್ದರೂ, ವಾಣಿಜ್ಯ ಉದ್ದೇಶಕ್ಕೆ ಪೆಟ್ರೋಲ್ ಚಾಲಿತ ವಾಹನಗಳ ಬಳಕೆಯ ಕುರಿತು ಇರುವ ಲೋಪಗಳ ಬಗ್ಗೆ ಇಲಾಖೆ ಅಧಿಕಾರಿಗಳು ಚರ್ಚಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ 500 ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ವೈಯಕ್ತಿಕ ಚಾಲಕರಿಗೆ 10,500 ರೂ.ವರೆಗೆ ದಂಡ ವಿಧಿಸಿದ್ದಾರೆ. ಇದೇ ವೇಳೆ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯಿಂದ ಆದಾಯಕ್ಕೆ ಹೊಡೆತ ಬೀಳುತ್ತದೆ ಎಂದು ಟ್ಯಾಕ್ಸಿ, ಆಟೋ ರಿಕ್ಷಾ ಚಾಲಕರು ಆರೋಪಿಸಿದ್ದಾರೆ. ಸಾರಿಗೆ ಆಯುಕ್ತ ಎನ್ ಶಿವಕುಮಾರ್ ಅವರು ತಮ್ಮ ದೂರುಗಳನ್ನು ತಿಳಿಸಲು ಚಾಲಕರ ಸಂಘಗಳ ಪ್ರತಿನಿಧಿಗಳನ್ನು ಆಹ್ವಾನಿಸಿದ್ದಾರೆ  

ಇದನ್ನೂ ಓದಿ: Sainik Pod Electric Taxi: ಜನಸೇವೆಗೆ ಮುಂದಾಗಿರೋ ನಮ್ಮ ಹೆಮ್ಮೆಯ ಸೈನಿಕರು!

ಕಳೆದ ವಾರ ಸಚಿವ ಶ್ರೀರಾಮುಲು ಮನೆಗೆ ಚಾಲಕ ಸಂಘಟನೆಗಳು ಮುತ್ತಿಗೆ ಹಾಕಿದ್ದವು. ಅನಧಿಕೃತ ರ‍್ಯಾಪಿಡೋ ಬೈಕ್ ನಿಷೇಧ ಮಾಡಲು ಟ್ಯಾಕ್ಸಿ ಚಾಲಕರು ಒತ್ತಾಯಿಸಿದ್ದರು.  ಈ ವೇಳೆ ಚಾಲಕರ ಸಂಕಷ್ಟ ದೂರ ಮಾಡುತ್ತೇವೆ ,ರ್ಯಾಪಿಡೋ ವಿರುದ್ಧ ಕಾನೂನು ಕ್ರಮ ಕೈಗೊಳುತ್ತೇವೆ ಎಂದು ಸಚಿವ ಶ್ರೀರಾಮುಲು ಚಾಲಕರಿಗೆ ಭರವಸೆ ನೀಡಿದ್ದರು. ಈ ಬೆನ್ನಲ್ಲೇ ಇಂದು ವಿಧಾನಸೌಧದಲ್ಲಿ ಮಹತ್ಚದ ಸಭೆ ನಡೆಯಲಿದೆ. 

ಭಾರತ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ಅಧ್ಯಕ್ಷ ಜಯಣ್ಣ, ಪೀಸ್ ಆಟೋ ಅಸೋಸಿಯೇಷನ್ ಅಧ್ಯಕ್ಷ  ರಘು, ತನ್ವೀರ್ ಪಾಷಾ, ಓಲಾ ಊಬರ್ ಚಾಲಕ ಅಸೋಸಿಯೇಷನ್ ಅಧ್ಯಕ್ಷ, ಆದರ್ಶ ಆಟೋ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ್, ಸಿಐಟಿಯು ಆಟೋ ಅಸೋಸಿಯೇಷನ್ ಮೀನಾಕ್ಷಿ ಸುಂದರಂ ಸೇರಿದಂತೆ ಸುಮಾರು 15 ಕ್ಕೂ ಹೆಚ್ಚು ಚಾಲಕ ಸಂಘಟನೆಗಳ ಜೊತೆಗೆ ಸಚಿವ ಶ್ರೀ ರಾಮುಲು ಸಭೆ ನಡೆಸಲಿದ್ದಾರೆ. 

ಇದನ್ನೂ ಓದಿ: Approximate Drop Locations ಕ್ಯಾನ್ಸಲೇಶನ್ ತಪ್ಪಿಸಲು ನಿಗದಿತ ಸ್ಥಳಕ್ಕೆ ಡ್ರಾಪ್ ಮಾಡಲು ಮುಂದಾದ OLA!

ವೈಟ್‌ ಬೋರ್ಡ್‌ ಗಾಡಿ ಬಳಕೆ:  ರ‍್ಯಾಪಿಡೋ ಆ್ಯಪ್‌ ಆಧಾರಿತ ಬೈಕ್‌ ಟ್ಯಾಕ್ಸಿ ಹೆಸರಿನಲ್ಲಿ ವೈಟ್‌ ಬೋರ್ಡ್‌ ಬೈಕ್‌ಗಳಲ್ಲಿ ಅತಿ ಕಡಿಮೆ ದರಕ್ಕೆ ಸೇವೆ ನೀಡಲಾಗುತ್ತಿದೆ. ಕಾನೂನಿನಲ್ಲಿ ಇದ್ದಕ್ಕೆ ಅವಕಾಶವಿಲ್ಲ. ಆಟೋ ಚಾಲಕರು ಸರ್ಕಾರಕ್ಕೆ ಟ್ಯಾಕ್ಸ್‌ ಪಾವತಿಸಿ ಎಲ್ಲೋ ಬೋರ್ಡ್‌ ಆಟೋಗಳಲ್ಲಿ ಸೇವೆ ನೀಡುತ್ತಿದ್ದೇವೆ. ತೆರಿಗೆ ಪಾವತಿಸುವ ನಾವು ಎಲ್ಲಿಗೆ ಹೋಗಬೇಕು?, ಯಾವುದೇ ಕಾರಣಕ್ಕೂ ಈ ಕಾನೂನು ಬಾಹಿರ ಬೈಕ್‌ ಟ್ಯಾಕ್ಸಿ ಸೇವೆಗೆ ಅವಕಾಶ ನೀಡಬಾರದು ಎಂಬುದು ಆಟೋ ಚಾಲಕರು ಮನವಿ.

ನ್ಯಾಯಾಲಯದಲ್ಲಿ ಪ್ರಕರಣ: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿ ಸೇವೆಗೆ ಸಾರಿಗೆ ಇಲಾಖೆ ಅವಕಾಶ ನೀಡಿಲ್ಲ. ರ‍್ಯಾಪಿಡೋ ಕಂಪನಿ ವೈಟ್‌ ಬೋರ್ಡ್‌ ಬೈಕ್‌ಗಳಲ್ಲಿ ಟ್ಯಾಕ್ಸಿ ಸೇವೆ ನೀಡಲು ಲೈಸೆನ್ಸ್‌ ಕೇಳಿ ಸಾರಿಗೆ ಇಲಾಖೆಗೆ ಮನವಿ ಮಾಡಿತ್ತು. ಮೋಟಾರು ವಾಹನ ಕಾಯ್ದೆಯಲ್ಲಿ ವೈಟ್‌ ಬೋರ್ಡ್‌ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ ಎಂದು ಮನವಿ ತಿರಸ್ಕರಿಸಿತ್ತು.

ಸದ್ಯಕ್ಕೆ ವಿಚಾರ ನ್ಯಾಯಾಲದ ಮೆಟ್ಟಿಲೇರಿದೆ. ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ರಾರ‍ಯಪಿಡೋ ಬೈಕ್‌ ಟ್ಯಾಕ್ಸಿ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳದಂತೆ ಸೂಚಿಸಿದೆ ಎನ್ನಲಾಗಿದೆ. ಹೀಗಾಗಿ ರಾರ‍ಯಪಿಡೋ ಕಂಪನಿ ನಗರದಲ್ಲಿ ಸೇವೆ ನೀಡಲು ಮುಂದಾಗಿದೆ ಎನ್ನಲಾಗಿದೆ.

click me!