
ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ 10 ವರ್ಷ ಹಳೆಯ ಡೀಸೆಲ್ ವಾಹನ ಹಾಗೂ 15 ವರ್ಷ ಹಳೆಯ ಪೆಟ್ರೋಲ್ ಅವಲಂಬಿತ ವಾಹನಗಳಿಗೆ ನಿಷೇಧ ಹೇರಲಾಗಿದೆ. ಹೀಗಾಗಿ ಈ ವಾಹನಗಳಿಗೆ ಇನ್ನು ಮುಂದೆ ಯಾವುದೇ ಪೆಟ್ರೋಲ್ ಬಂಕ್‌ಗಳು ಪೆಟ್ರೋಲ್ ಡೀಸೆಲ್ ನೀಡುವುದಿಲ್ಲ, ಹೀಗಾಗಿ ಹಳೆಯ ವಾಹನಗಳನ್ನು ಹೊಂದಿರುವ ಮಾಲೀಕರು ವಾಹನವನ್ನು ಒಂದೋ ಎನ್‌ಸಿಆರ್‌ನಿಂದ ಹೊರ ಭಾಗಕ್ಕೆ ಮಾರಾಟ ಮಾಡಬೇಕು. ಅಥವಾ ಗುಜರಿಗೆ ನೀಡಬೇಕು. ದೆಹಲಿ ಸರ್ಕಾರದ ಹೊಸ ನೀತಿಯಿಂದ ದೆಹಲಿಯಲ್ಲಿ ಸುಮಾರು 62 ಲಕ್ಷ ವಾಹನಗಳು ಗುಜರಿ ಸೇರಲಿವೆ ಅಥವಾ ನಿರುಪಯುಕ್ತವಾಗಲಿವೆ. ಆದರೆ ಕೆಲ ವಾಹನಗಳು ಸುಸ್ಥಿತಿಯಲ್ಲಿದ್ದು, ವಾಹನಗಳ ಮಾಲೀಕರಿಗೆ ಅದನ್ನು ಮಾರುವುದಕ್ಕೋ ಅಥವಾ ಗುಜರಿಗೆ ನೀಡುವುದಕ್ಕೋ ಮನಸ್ಸಾಗುತ್ತಿಲ್ಲ. ಹೀಗಾಗಿ ವಾಹನ ಮಾಲೀಕರೊಬ್ಬರು ಬಹಳ ಬೇಸರದಿಂದ ಮಾಡಿರುವ ಟ್ವಿಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿಯಲ್ಲಿ 62 ಲಕ್ಷ ಹಳೆಯ ವಾಹನಗಳಿಗೆ ಇಂಧನ ನಿಷೇಧ ನಿರ್ಧಾರದ ಹಿಂದೆ ವಾಯುಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶವಿದೆ. ಆದರೆ ಈ ನಿರ್ಧಾರದಿಂದಾಗಿ ಇಷ್ಟು ವರ್ಷ ತಮ್ಮ ಜೊತೆಗಿದ್ದ ಸುಸ್ಥಿತಿಯಲ್ಲಿ ಇರುವ ವಾಹನಗಳನ್ನು ಅತ್ತ ದೂರ ಇಡಲಾಗದೇ ಮಾರುವುದಕ್ಕೂ ಮನಸ್ಸಾಗದೇ ವಾಹನ ಮಾಲೀಕರು ಸಂಕಷ್ಟಪಡುತ್ತಿದ್ದಾರೆ. ಹಾಗೆಯೇ ರಿತೇಶ್ ಗಂಡೊತ್ರಾ ಎಂಬ ವಾಹನ ಮಾಲೀಕರೊಬ್ಬರು ಈ ಕಷ್ಟವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಅವರ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನನ್ನ ಕಾರು ತನ್ನ 8ನೇ ವರ್ಷದಲ್ಲಿದೆ ಇದೊಂದು ಡೀಸೆಲ್ ಅವಲಂಬಿತ ವಾಹನವಾಗಿದ್ದು, ಇದನ್ನು ಬಹಳ ಸೂಕ್ಷ್ಮವಾಗಿ ನಿರ್ವಹಿಸಲಾಗಿದೆ. ಕೇವಲ 74 ಸಾವಿರ ಕಿಲೋ ಮೀಟರ್ ಅಷ್ಟೇ ಓಡಿದೆ. ಇದು ಕೋವಿಡ್‌ನ ಎರಡು ವರ್ಷಗಳ ಕೇವಲ ಪಾರ್ಕಿಂಗ್‌ನಲ್ಲಿಯೇ ನಿಲ್ಲಿಸಿತ್ತು. ಹಾಗೂ ಇದು 2 ಲಕ್ಷ ಕಿಲೋ ಮೀಟರ್‌ನಷ್ಟು ಓಡಬಲ್ಲ ಜೀವಿತಾವಧಿಯನ್ನು ಇದು ಇನ್ನೂ ಹೊಂದಿದೆ. ಆದರೆ 10 ವರ್ಷ ಎನ್‌ಸಿಆರ್‌ನಲ್ಲಿ ಡೀಸೆಲ್ ಬ್ಯಾನ್ ಮಾಡಿದ್ದಕ್ಕೆ ಥ್ಯಾಂಕ್ಸ್, ನಾನು ಈಗ ಇದನ್ನು ಒತ್ತಾಯಪೂರ್ವಕವಾಗಿ ಮಾರಬೇಕಿದೆ. ಹಾಗೂ ಇದನ್ನು ಕೊಳ್ಳುವವರು ಎನ್‌ಸಿಆರ್ ಪ್ರದೇಶದಿಂದ ಹೊರಗಿನವರೇ ಆಗಿದ್ದಾರೆ. ಹಾಗೂ ಅವರು ಬೇಕಾಬಿಟ್ಟಿ ದರಕ್ಕೆ ಕೇಳುತ್ತಿದ್ದಾರೆ. ಇದು ಸ್ಥಿತಿಯನ್ನು ಮತ್ತಷ್ಟು ಕೆಟ್ಟದಾಗಿಸಿದೆ.
ಅಲ್ಲದೇ ಹೊಸ ಕಾರನ್ನು ಖರೀದಿಸಬೇಕಾದರೆ 45ಶೇಕಡಾ ಜಿಎಸ್‌ಟಿ ಜೊತೆಗೆ ಸೆಸ್ ಇರುತ್ತದೆ. ಇದೊಂದು ಹಸಿರು ಯೋಜನೆ ಅಲ್ಲವೇ ಅಲ್ಲ, ಇದೊಂದು ಜವಾಬ್ದಾರಿಯುತ ಮಾಲೀಕರಿಗೆ ಹಾಗೂ ಕಾಮನ್ ಸೆನ್ಸ್ ಹೊಂದಿರುವವರಿಗೆ ವಿಧಿಸಿದ ಭಾರಿ ದಂಡ ಎಂದು ಅವರು ನೋವು ತೋಡಿಕೊಂಡಿದ್ದಾರೆ. ಇವರ ಈ ಪೋಸ್ಟ್‌ನ್ನು 3 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ಅನೇಕರು ಕಾಮೆಂಟ್‌ಗಳಲ್ಲಿ ತಮ್ಮ ಅನುಭವ ಹಾಗೂ ಸಲಹೆಗಳನ್ನು ನೀಡಿದ್ದಾರೆ.
ಒಬ್ಬರು ಹೀಗೆ ಕಾಮೆಂಟ್ ಮಾಡಿದ್ದಾರೆ. ನಿಮ್ಮ ಈ ಅಭಿಪ್ರಾಯವನ್ನು ಖಂಡಿತವಾಗಿ ಒಪ್ಪುವೆ. ದೆಹಲಿ-ಎನ್‌ಸಿಆರ್ ಈ ಯೋಜನೆ ಬಗ್ಗೆ ಮತ್ತೊಮ್ಮೆ ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಿತೇಶ್ ಗಂಡೋತ್ರಾ, 2 ವರ್ಷದ ಕೋವಿಡ್‌ಗೆ ಥ್ಯಾಂಕ್ಸ್ ನಾನು ಅದನ್ನು ಕೇವಲ 6 ವರ್ಷಗಳ ಕಾಲ ಪರಿಣಾಮಕಾರಿಯಾಗಿ ಬಳಸಿದ್ದೆ. ಹಾಗೂ ಈಗ ಎನ್‌ಸಿಆರ್‌ನಲ್ಲಿ 10 ವರ್ಷಗಳ ಡೀಸೆಲ್ ರೂಲ್ಸ್‌ನಿಂದಾಗಿ ಕಳೆದ ವಾರ ನಾನು ಅದನ್ನು Cars24 ನಲ್ಲಿ ಪಟ್ಟಿ ಮಾಡಬೇಕಾಯಿತು. ನನ್ನ ಇಷ್ಟದಿಂದ ಅಲ್ಲ ಕೇವಲ ಬಲವಂತದಿಂದಾಗಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ .
ಹಾಗೆಯೇ ಮತ್ತೊಬ್ಬರು ಪ್ರತಿಕ್ರಿಯಿಸಿದ್ದು,, ವಾಹನಗಳಿಗೆ ವಯಸ್ಸಾಗಿದೆ ಎಂದು ಹೇಳಿ ವಯಸ್ಸಿನ ಮಿತಿಯನ್ನು ಜಾರಿಗೊಳಿಸುವ ಮೊದಲು ಯುರೋಪ್‌ನಂತೆ ವಾಹನದ ಫಿಟ್‌ನೆಸ್ ಸಾಮರ್ಥ್ಯ ಹಾಗೂ ಪರೀಕ್ಷಾ ಆಧಾರಿತ ಮಾದರಿಯನ್ನು ಅಳವಡಿಸಿ ನಿಯಮ ಜಾರಿಗೊಳಿಸುವುದರಿಂದ ಪರಿಸರ ಮತ್ತು ನ್ಯಾಯಸಮ್ಮತತೆಯನ್ನು ಸಮತೋಲನಗೊಳಿಸಬಹುದು ಎಂದು ಹೇಳಿದ್ದಾರೆ.
ಸರ್ಕಾರದ ಗುರಿ ಸರಿಯಾದ ದಿಕ್ಕಿನಲ್ಲಿದೆ, ಆದರೆ ಅನುಷ್ಠಾನವು ಸ್ವಲ್ಪ ಆತುರ ಮತ್ತು ದೋಷಪೂರಿತವಾಗಿದೆ. ಐದು ವರ್ಷ ಹಳೆಯದಾದ, ಸರಿಯಾಗಿ ನಿರ್ವಹಿಸದ ಕಾರುಗಳು ಇನ್ನೂ ರಸ್ತೆಗಳಲ್ಲಿ ಇರುತ್ತವೆ, ಆದರೆ 10+ ವರ್ಷಕ್ಕಿಂತ ಹಳೆಯದಾದ, ಉತ್ತಮವಾಗಿ ನಿರ್ವಹಿಸಲ್ಪಟ್ಟ ಕಾರುಗಳನ್ನು ಸ್ಕ್ರ್ಯಾಪ್ ಮಾಡಬಹುದು. ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಉತ್ತಮ ಪ್ರೋತ್ಸಾಹಕ ಕಾರ್ಯಕ್ರಮವೂ ಇರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ದೆಹಲಿ ಸರ್ಕಾರ ಮಾಲಿನ್ಯವನ್ನು ನಿಯಂತ್ರಿಸಿ ಪರಿಸರವನ್ನು ರಕ್ಷಿಸುವ ಉದ್ದೇಶದಿಂದ ಒಳ್ಳೆಯ ಯೋಜನೆಯನ್ನು ಏನೋ ಜಾರಿಗೆ ತಂದಿದೆ. ಆದರೆ ಅದನ್ನು ಸಮರ್ಪಕ ನಿಯಮಗಳಿಲ್ಲದೇ ಆತುರಾತುರವಾಗಿ ಜಾರಿಗೊಳಿಸಲು ಹೋಗಿ ಎಡವಿದಂತೆ ಕಾಣುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.