₹100 ಪಾವತಿಸಿದರೆ ಸಾಕು, ದುಬಾರಿ ದಂಡದಿಂದ ಸಿಗಲಿದೆ ಮುಕ್ತಿ!

By Web DeskFirst Published Sep 11, 2019, 7:34 PM IST
Highlights

ಟ್ರಕ್ ಚಾಲಕನಿಗೆ ಹಾಕಿದ 1.5 ಲಕ್ಷ ರೂಪಾಯಿ ಇದು ಈವರೆಗಿನ ಗರಿಷ್ಠ ಟ್ರಾಫಿಕ್ ದಂಡ. ಎಚ್ಚರ ತಪ್ಪಿದೆ ದುಬಾರಿ ಮೊತ್ತ ದಂಡವಾಗಿ ಪಾವತಿಸಬೇಕು. ಆದರೆ ದುಬಾರಿ ಮೊತ್ತದಿಂದ ಬಚಾವ್ ಆಗಲು ಒಂದು ಅವಕಾಶವಿದೆ. ಕೇವಲ 100 ರೂಪಾಯಿ ಪಾವತಿಸಿದರೆ ಸಾಕು. ಅದು ಹೇಗೆ? ಕಾನೂನಿನಲ್ಲಿರುವ ಈ ಅವಕಾಶದ ಕುರಿತು ಮಾಹಿತಿ ಇಲ್ಲಿದೆ.

ನವದೆಹಲಿ(ಸೆ.11): ಮೋಟಾರು ವಾಹನ ಕಾಯ್ದೆ 2019 ಜಾರಿಯಾದ ಬಳಿಕ ವಾಹನ ಸವಾರರ ನಿದ್ದೆಗೆಟ್ಟಿದೆ. ಎಲ್ಲಿ ಟ್ರಾಫಿಕ್ ಫೈನ್ ಬೀಳುತ್ತೋ ಅನ್ನೋ ಭಯ ಜನರಲ್ಲಿ ಮೂಡಿದೆ. ಇದರಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ಗಣನೀಯವಾಗಿ ಇಳಿಕೆಯಾಗಿದೆ. ಸದ್ಯ ಟ್ರಕ್ ಚಾಲಕನಿಗೆ 1.5 ಲಕ್ಷ ರೂಪಾಯಿ ದಂಡ ಹಾಕಿರುವುದು ಸದ್ಯದ ಗರಿಷ್ಠ ದಾಖಲೆ. ಟ್ರಾಫಿಕ್ ಪೊಲೀಸರು ಹಿಡಿದು ದಂಡ ಹಾಕಿದಾಗ  ಕೇವಲ 100 ರೂಪಾಯಿ ಪಾವತಿಸಿ ದುಬಾರಿ ದಂಡದಿಂದ ತಪ್ಪಿಸಿಕೊಳ್ಳಲು ಕಾನೂನಿನಲ್ಲಿ ಒಂದು ಅವಕಾಶವಿದೆ.

ಇದನ್ನೂ ಓದಿ: ಹೊಸ ಮೋಟಾರು ಕಾಯ್ದೆಯಲ್ಲಿ ದಂಡ ಬಿಟ್ಟು ಮತ್ತೇನಿದೆ?

ಪೊಲೀಸರ  ತಪಾಸಣೆ ವೇಳೆ ವಾಹನ ಸವಾರರಲ್ಲಿ ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಶನ್, ವಿಮೆ, ಎಮಿಶನ್ ಸೇರಿದಂತೆ ದಾಖಲೆ ಪತ್ರಗಳು ಇಲ್ಲದಿದ್ದರೆ ಇದೀಗ ದುಬಾರಿ ದಂಡ ಪಾವತಿಸಬೇಕು. ಆದರೆ 100 ರೂಪಾಯಿಯಲ್ಲಿ ನೀವು ದುಬಾರಿ ದಂಡದಿಂದ ಪಾರಾಗಬಹುದು.  ಹೇಗೆಂದರೆ, ಪೊಲೀಸರು ಕೇಳಿದ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲು 15 ದಿನಗಳ ಕಾಲಾವಕಾಶವಿದೆ. ಅಷ್ಟರೊಳಗೆ ಅಗತ್ಯ ದಾಖಲೆ ಸಲ್ಲಿಸಬೇಕು. ಬಳಿಕ 100 ರೂಪಾಯಿ ನೀಡಿ ಚಲನ್ ರದ್ದು ಮಾಡುವ ಅವಕಾಶವಿದೆ. 

ಇದನ್ನೂ ಓದಿ: ಕರ್ನಾಟಕದಲ್ಲಿ ದುಬಾರಿ ಟ್ರಾಫಿಕ್ ದಂಡಕ್ಕೆ ಬ್ರೇಕ್; ಸಿಎಂ ಆದೇಶ ತಕ್ಷಣವೇ ಜಾರಿ!

ಆದರೆ ಈ ನಿಯಮ ನಿಮ್ಮಲ್ಲಿ ಎಲ್ಲಾ ದಾಖಲೆಗಳಿದ್ದು ಅದನ್ನು ಪ್ರಯಾಣದ ವೇಳೆ ಜೊತೆಗಿರಿಸದೇ ಇದ್ದಲ್ಲಿ ಮಾತ್ರ ಅನ್ವಯವಾಗಲಿದೆ. ಟ್ರಾಫಿಕ್ ದಂಡ ಹಾಕಿದ ಬಳಿಕ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಹಾಕಿದರೆ, ಅಥವಾ ಎಮಿಶನ್ ಟೆಸ್ಟ್ ಮಾಡಿಸಿ ದಾಖಲೆ ತೋರಿಸಿದರೆ 100 ರೂಪಾಯಿಯಲ್ಲಿ ಚಲನ್ ರದ್ದಾಗುವುದಿಲ್ಲ. ಸಂಪೂರ್ಣ ದಂಡ ಪಾವತಿಸಬೇಕು.

ಜೊತೆಗೆ, ಇದು ಕೇವಲ ತಪಾಸಣೆ ವೇಳೆ ದಾಖಲೆ ಪತ್ರ ಇಲ್ಲದಿದ್ದಾಗ ಮಾತ್ರ ಅನ್ವಯ. ಬದಲಾಗಿ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್, ಒನ್ ವೇ ಸೇರಿದಂತೆ ಯಾವುದೇ ನಿಯಮ ಉಲ್ಲಂಘನೆಗೆ ಅನ್ವಯವಾಗೋದಿಲ್ಲ. 

click me!