ಪಾಪ್ ಕಾರ್ನ್ ಮಾರಿ ಜೀವನ ಸಾಗಿಸುತ್ತಿದ್ದಾತ ವಿಮಾನ ನಿರ್ಮಿಸಿದ| ವಾಯುಸೇನೆಗೆ ಸೇರುವ ಕನಸು ಕಾಣುತ್ತಿದ್ದಾತನಿಗೆ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಬೇಕಾದ ಅನಿವಾರ್ಯತೆ| ಪಾಪ್ ಕಾರ್ನ್ ಮಾರಿಯೇ ಕನಸನ್ನು ಸಾಕಾರಗೊಳಿಸಿದ
ಇಸ್ಲಮಾಬಾದ್[ಮೇ.06]: ಪಾಕಿಸ್ತಾನದಲ್ಲಿ ಪಾಪ್ ಕಾರ್ನ್ ವ್ಯಾಪಾರಿಯೊಬ್ಬ ಭಾರೀ ಸದ್ದು ಮಾಡುತ್ತಿದ್ದಾನೆ. ಈತ ಅದೆಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದಾನೆಂದರೆ ಪಾಕಿಸ್ತಾನದ ವಾಯುಸೇನೆ ಕೂಡಾ ಈ ವ್ಯಾಪಾರಿಗೆ ಫಿದಾ ಆಗಿದೆ. ಹೌದು ಪಾಕಿಸ್ತಾನದ ಮಹಮ್ಮದ್ ಫಯಾಜ್ ಎಂಬವರು ತಮಗಾಗಿ ತಾವೇ ವಿಮಾನವೊಂದನ್ನು ನಿರ್ಮಿಸಿದ್ದಾರೆ. ಅದರಲ್ಲೂ ತನ್ನ ಸುತ್ತ ಮುತ್ತಲಿನ ನಿರುಪಯುಕ್ತ ವಸ್ತುಗಳಿಂದ ಫಯಾಜ್ ಈ ವಿಮಾನ ನಿರ್ಮಿಸಿದ್ದಾರೆ ಎಂಬುವುದೇ ವಿಶೇಷ.
ಹೌದು ಫಯಾಜ್ ನಿಈ ಮಿನಿ ವಿಮಾನವನ್ನು ರೋಡ್ ಕಟರ್ ಇಂಜಿನ್ ಹಾಗೂ ಮಾಮೂಲಿ ಆಟೋ ಟಯರ್ ನಿಂದ ನಿರ್ಮಿಸಿದ್ದಾರೆ. ಪಾಕಿಸ್ತಾನದ ಲಕ್ಷಾಂತರ ಮಂದಿ ಶಿಕ್ಷಣ ವಂಚಿತರಲ್ಲಿ ಒಬ್ಬರಾದ ಫಯಾಜ್ ತಾನೇನು ಮಾಡಬಲ್ಲೆ ಎಂದು ಸಾಬೀತುಪಡಿಸಲು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದರು. ಇದೇ ಕಾರಣದಿಂದ ಅವರ ಈ ಸಂಘರ್ಷಭರಿತ ಯಶಸ್ಸಿನ ಕಥೆ ಪಾಕಿಸ್ತಾನದ ಜನಸಾಮಾನ್ಯರ ಹೃದಯ ಗೆದ್ದಿದೆ.
ಟಿವಿ ಕ್ಲಿಪ್ಪಿಂಗ್ಸ್ ಹಾಗೂ ಆನ್ಲೈನ್ ಬ್ಲೂ ಪ್ರಿಂಟ್ ನೋಡಿ ವಿಮಾನ ನಿರ್ಮಿಸಿರುವ ಫಯಾಜ್ ತಮ್ಮ ಅನುಭವ ಹಂಚಿಕೊಳ್ಳುತ್ತಾ 'ನಾನು ನನ್ನ ಕೈಯ್ಯಾರೆ ನಿರ್ಮಿಸಿದ ವಿಮಾನದಲ್ಲಿ ಮೊದಲ ಬಾರಿ ಚಲಾಯಿಸಿದಾಗ ಆಕಾಶದಲ್ಲಿ ತೇಲಾಡುತ್ತಿರುವ ಅನುಭವವಾಗಿತ್ತು. ಇದನ್ನು ಹೊರತುಪಡಿಸಿ ಬೇರೇನೂ ನನಗೆ ನೆನಪಿಲ್ಲ' ಎಂದಿದ್ದಾರೆ.
ಇದೀಗ ಸಾಮಾನ್ಯ ಪಾಪ್ ಕಾರ್ನ್ ವ್ಯಾಪಾರಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಪಾಕಿಸ್ತಾನದ ವಾಯುಸೇನೆಯೂ ತನಮ್ನ ಈ ಆವಿಷ್ಕಾರದಿಂದ ಬಹಳಷ್ಟು ಪ್ರಭಾವಿತಗೊಂಡಿದೆ. ವಾಯುಸೇನಾ ಅಧಿಕಾರಿಗಳು ಹಲವಾರು ಬಾರಿ ನನ್ನನ್ನು ಭೇಟಿಯಾಗಿದ್ದಾರೆ ಹಾಗೂ ತನ್ನ ಈ ಕೆಲಸವನ್ನು ಪ್ರೋತ್ಸಾಹಿಸಿ ಒಂದು ಪ್ರಮಾಣ ಪತ್ರವನ್ನೂ ನೀಡಿದ್ದಾರೆ ಎಂಬುವುದು ಫಯಾಜ್ ಮಾತಾಗಿದೆ.
ಫಯಾಜ್ ನಿರ್ಮಿಸಿರುವ ಈ ವಿಮಾನ ನೋಡಲು ದೂರದ ಊರುಗಳಿಂದ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಇವರೆಲ್ಲರನ್ನು ನಗುಮೊಗದಿಂದ ತನ್ನ ಪಂಜಾಬ್ ಪ್ರಾಂತ್ಯದ ತಾಬೂರ್ ನಲ್ಲಿರುವ ಮನೆಗೆ ಸ್ವಾಗತಿಸುವ ಫಯಾಜ್ ಅಂಗಳದಲ್ಲಿರುವ ಮಿನಿ ವಿಮಾನವನ್ನು ತೋರಿಸಿ ಕಾರ್ಯ ವೈಖರಿಯನ್ನು ವಿವರಿಸುತ್ತಾರೆ.
32 ವರ್ಷದ ಫಯಾಜ್ ಚಿಕ್ಕಂದಿನಿಂದ ವಾಯುಸೇನೆಗೆ ಸೇರಬೇಕೆಂಬ ಕನಸು ಕಂಡಿದ್ದರು. ಆದರೆ 8ನೇ ತರಗತಿಯಲ್ಲಿದ್ದಾಗ ಅವರ ತಂದೆ ಸಾವನ್ನಪ್ಪಿದ್ದರು. ಹೀಗಾಗಿ ಬೇರೆ ದಾರಿ ಕಾಣದ ಫಯಾಜ್ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಬೇಕಾದ ಅನಿವಾರ್ಯತೆ ಬಂದೊದಗಿತ್ತು. ಬಳಿಕ ಜೀವನ ಸಾಗಿಸಲು ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಹೀಗಿದ್ದರೂ ಅವರ ಕನಸು ಮಾತ್ರ ಬದಲಾಗಿರಲಿಲ್ಲ. ತನ್ನ ಬಳಿ ಇದ್ದ ವಸ್ತುಗಳಿಂದಲೇ ವಿಮಾನ ನಿರ್ಮಿಸುವ ಪ್ರಯತ್ನ ಮಾಡುತ್ತಿದ್ದ. ದಿನವಿಡೀ ಪಾಪ್ ಕಾರ್ನ್ ಮಾರುತ್ತಿದ್ದರೆ ರಾತ್ರ ವೇಳೆ ಕನಸು ಸಾಕಾರಗೊಳಿಸಲು ಯತ್ನಿಸುತ್ತಿದ್ದ. ಕೊನೆಗೂ ತನ್ನ ಕನಸಿನಂತೆ ಮಿನಿ ವಿಮಾನವನ್ನು ನಿರ್ಮಿಸಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ.