ಇನ್ಮುಂದೆ ಬೆಂಗಳೂರು ಒನ್‌ನಲ್ಲೇ ಎಲ್‌ಎಲ್‌ ದೊರೆಯುತ್ತೆ

By Web Desk  |  First Published Jul 22, 2019, 8:17 AM IST

ಇನ್ನು ಮುಂದೆ ವಾಹನ ಕಲಿಕೆ ಚಾಲನಾ ಪತ್ರ (ಎಲ್‌ಎಲ್‌) ಪಡೆಯಲು ಆರ್‌ಟಿಒ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಯಾಕೆಂದರೆ ಬೆಂಗಳೂರು ಒನ್ ನಲ್ಲೇ ಪಡೆಯಬಹುದು


ಬೆಂಗಳೂರು [ಜು.22] :  ಸಾರ್ವಜನಿಕರು ಇನ್ನು ಮುಂದೆ ವಾಹನ ಕಲಿಕೆ ಚಾಲನಾ ಪತ್ರ (ಎಲ್‌ಎಲ್‌) ಪಡೆಯಲು ಆರ್‌ಟಿಒ ಕಚೇರಿಗಳಿಗೆ ಅಲೆಯುವ ಪ್ರಮೇಯವಿಲ್ಲ. ಏಕೆಂದರೆ, ‘ಬೆಂಗಳೂರು ಒನ್‌’ ಮತ್ತು ‘ಕರ್ನಾಟಕ ಒನ್‌’ ಕೇಂದ್ರಗಳಲ್ಲೇ ಎಲ್‌ಎಲ್‌ ಸೇರಿದಂತೆ ನಾಲ್ಕು ಸೇವೆಗಳನ್ನು ಪಡೆಯಬಹುದು.

ಸಾರ್ವಜನಿಕರು ಎಲ್‌ಎಲ್‌ಗೆ ಅರ್ಜಿ ಸಲ್ಲಿಕೆ, ಕಲಿಕಾ ಪರವಾನಗಿ ಪರೀಕ್ಷೆ ಹಾಗೂ ಶುಲ್ಕ ಪಾವತಿ, ಎಲ್‌ಎಲ್‌ಗೆ ವಾಹನಗಳ ಸೇರ್ಪಡೆ, ಎಲ್‌ಎಲ್‌ಆರ್‌ ಡೌನ್‌ಲೋಡಿಂಗ್‌ ಮತ್ತು ಪ್ರಿಂಟ್‌ ಪಡೆಯಲು ಆರ್‌ಟಿಒ ಕಚೇರಿಗಳಿಗೆ ಬರುವುದನ್ನು ತಪ್ಪಿಸುವ ಉದ್ದೇಶದಿಂದ ಬೆಂಗಳೂರು ಒನ್‌ ಮತ್ತು ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಈ ನಾಲ್ಕು ಸೇವೆಗಳು ಇನ್ನೊಂದು ವಾರದಲ್ಲಿ ಲಭ್ಯವಾಗಲಿವೆ.

Latest Videos

undefined

ಪ್ರಸ್ತುತ ಸಾರ್ವಜನಿಕರು ಸಾರಥಿ 4 ತಂತ್ರಾಂಶದ ಮೂಲಕ ಆನ್‌ಲೈನ್‌ನಲ್ಲಿ ಎಲ್‌ಎಲ್‌ಗೆ ಅರ್ಜಿ ಸಲ್ಲಿಸಿ, ಬಳಿಕ ಆರ್‌ಟಿಓ ಕಚೇರಿಯಲ್ಲಿ ಶುಲ್ಕ ಪಾವತಿಸಿ, ಆನ್‌ಲೈನ್‌ ಪರೀಕ್ಷೆ ಎದುರಿಸಿದ ನಂತರ ಎಲ್‌ಎಲ್‌ ಪಡೆಯಬೇಕು. ಆರ್‌ಟಿಒ ಕಚೇರಿಗಳಲ್ಲಿ ಸಾರ್ವಜನಿಕರ ದಟ್ಟಣೆ ಇರುವುದರಿಂದ ಈ ಸೇವೆ ಪಡೆಯಲು ಸಾಕಷ್ಟುಸಮಯ ಹಿಡಿಯುತ್ತಿದೆ. ಹಾಗಾಗಿ ಬೆಂಗಳೂರು ಒನ್‌ ಮತ್ತು ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಈ ಸೇವೆ ಆರಂಭಿಸಲಾಗುತ್ತಿದೆ. ಸಾರಿಗೇತರ ವಾಹನ (ವೈಟ್‌ ಬೋರ್ಡ್‌)ಗಳ ಮಾಲಿಕರು ಇನ್ನು ಮುಂದೆ ಈ ಕೇಂದ್ರಗಳಲ್ಲಿ ಈ ನಾಲ್ಕು ಸೇವೆ ಪಡೆದುಕೊಳ್ಳಬಹುದು. ಈ ಸೇವೆಗೆ ಸರ್ಕಾರ ನಿಗದಿಪಡಿಸಿರುವ ಶುಲ್ಕ ಮಾತ್ರ ಪಾವತಿಸಬೇಕು ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ಸೇವೆಯಿಂದ ಸಾರ್ವಜನಿಕರಿಗೆ ಸಮಯ ಉಳಿತಾಯವಾಗಲಿದೆ. ಅಲ್ಲದೆ, ದಿನಗಟ್ಟಲೇ ಆರ್‌ಟಿಓ ಕಚೇರಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ. ತಮ್ಮ ಮನೆ ಸಮೀಪದ ಬೆಂಗಳೂರು ಒನ್‌ ಅಥವಾ ಕರ್ನಾಟಕ ಒನ್‌ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ, ಆನ್‌ಲೈನ್‌ ಪರೀಕ್ಷೆ ಹಾಗೂ ಶುಲ್ಕ ಪ್ರಕ್ರಿಯೆ ಮುಗಿಸಿ, ಅಲ್ಲಿಯೇ ಎಲ್‌ಎಲ್‌ಆರ್‌ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.

click me!