ಫೋರ್ಡ್ ಫ್ರೀಸ್ಟೈಲ್ ಫ್ಲೇರ್ t0 ನಿಸಾನ್ ಎ ಪ್ರೊಟೊ: ಭಾರತದಲ್ಲಿ ಹೊಸ 'ಕಾರು ಬಾರು'!

By Kannadaprabha NewsFirst Published Sep 19, 2020, 2:48 PM IST
Highlights

ಅನ್‌ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಒಂದರ ಮೇಲೊಂದರಂತೆ ಕಾರು ಬಿಡುಗಡೆ ಆರಂಭಗೊಂಡಿತು. ಇದೀಗ ಪೈಪೋಟಿ ಹೆಚ್ಚಾಗಿದೆ. ಇದೀಗ ಕೆಲ ಕಾರುಗಳ ಅಪ್‌ಗ್ರೇಡ್, ಕೆಲ ಕಂಪನಿಗಳ ಹೊಸ ಬ್ರ್ಯಾಂಡ್ ಕಾರು ಸೇರಿದಂತೆ ಪ್ರಮುಖವಾಗಿ 4 ಕಾರುಗಳು ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಈ ಕಾರಿನ ವಿವರ ಇಲ್ಲಿದೆ.

ಕೊರೋನಾದಿಂದಾಗಿ ಜಗತ್ತು ಸ್ವಲ್ಪ ಹಿಂದೆ ಹೋದಂತೆ ಭಾಸವಾದರೂ ಅಟೋಮೊಬೈಲ್‌ ಕ್ಷೇತ್ರ ಮಾತ್ರ ಹೆವೀ ಸ್ಪೀಡಲ್ಲಿ ಮುಂದೆ ಹೋಗುತ್ತಿದೆ. ಅದಕ್ಕೆ ಸಾಕ್ಷಿ ಮಾರುಕಟ್ಟೆಗೆ ಆಗಮಿಸುವ ಹೊಸ ಹೊಸ ಕಾರುಗಳು. ಫೋರ್ಡ್‌, ನಿಸಾನ್‌, ಸ್ಕೋಡಾ ಕಂಪನಿಗಳು ಹೊಸ ಕಾರಿನ ಘೋಷಣೆ ಮಾಡಿದ್ದರೆ ಅತ್ತ ಕಿಯಾದವರು ತಮ್ಮ ಹೊಸ ಸೋನೆಟ್‌ ಕಾರು ಭಾರಿ ಸಂಖ್ಯೆಯಲ್ಲಿ ಬುಕಿಂಗ್‌ ಆದ ಖುಷಿಯಲ್ಲಿ ಬೆಲೆ ಘೋಷಣೆ ಮಾಡಿದ್ದಾರೆ. ಒಟ್ಟಾರೆ ಈಗ ಕಾರುಗಳದೇ ಜಮಾನ.

ಮಾರುತಿ ಬ್ರೆಜಾ, ವೆನ್ಯೂ ಕಾರಿಗೆ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಕಾರು ಬಿಡುಗಡೆ!

ಫೋರ್ಡ್‌ನ ಫ್ರೀಸ್ಟೈಲ್‌ ಫ್ಲೇರ್‌
ಚೂರು ತಣ್ಣಗಾದಂತಿದ್ದ ಫೋರ್ಡ್‌ ಕಂಪನಿ ಇದೀಗ ಸ್ಟೈಲಾಗಿ ಹೊಸ ಸಂಗತಿ ತಿಳಿಸಿದೆ. ಫೋರ್ಡ್‌ನ ‘ಫ್ಲೇರ್‌’ ಎಡಿಶನ್‌ ಕಾರುಗಳು ಕಣ್ಣ ಮುಂದೆ ಬಂದಿದೆ. ಕಣ್ಮನ ಸೆಳೆಯುವ ಡಿಸೈನ್‌ ಇದ ಆಕರ್ಷಣೆ. ಬೂದು ಬಣ್ಣದ ಕಾರ್‌ನ ಬಾಗಿಲಿನ ಮೇಲೆ ಕಪ್ಪು ಮತ್ತು ಕೆಂಪು ಗ್ರಾಫಿಕ್ಸ್‌ ಥಟ್‌ ಅಂತ ಗಮನ ಸೆಳೆಯುತ್ತದೆ. ಆರು ಏರ್‌ಬ್ಯಾಗ್‌ಗಳು ಸುರಕ್ಷತೆಗೆಂದೇ ಪಣತೊಟ್ಟು ಕುಳಿತಿವೆ. ಈ ಕಾರು ಪೆಟ್ರೋಲ್‌ ಹಾಗೂ ಡೀಸೆಲ್‌ ವೇರಿಯೆಂಟ್‌ಗಳಲ್ಲಿ ಲಭ್ಯ. ‘ಒಳ್ಳೆಯ ಕಾರು ನಿರೀಕ್ಷೆಯಲ್ಲಿರುವವರಿಗೆ ಇದು ಅತ್ಯುತ್ತಮ ಆಯ್ಕೆ’ ಎಂದು ಫೋರ್ಡ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ವಿನಯ್‌ ರೈನಾ ತಿಳಿಸಿದ್ದಾರೆ. ಟೆಸ್ಟ್‌ ರೈಡ್‌ ಮಾಡಿ ನೀವೊಂದು ಕೈ ನೋಡಬಹುದು. ಬೆಲೆ: ಪೆಟ್ರೋಲ್‌ ಕಾರು ಆರಂಭಿಕ ಬೆಲೆ ರು.7.69 ಲಕ್ಷ, ಡೀಸೆಲ್‌ ಕಾರು ಆರಂಭಿಕ ಬೆಲೆ ರು.8.79 ಲಕ್ಷ.

ಹೊಚ್ಚ ಹೊಸ Skoda ರ‍್ಯಾಪಿಡ್ TSI ಅಟೊಮ್ಯಾಟಿಕ್ ಕಾರು ಬಿಡುಗಡೆ...

ಸ್ಕೋಡಾದ ರಾರ‍ಯಪಿಡ್‌ ಟಿಎಸ್‌ಐ
ಸಮಯ ಸಂದರ್ಭ ನೋಡಿಕೊಂಡು ಸ್ಕೋಡಾದವರು ತಮ್ಮ ಹೊಸ ಸೆಡಾನ್‌ ‘ಸ್ಕೋಡಾ ರಾರ‍ಯಪಿಡ್‌ ಟಿಎಸ್‌ಐ’ ದೇಶಕ್ಕೆ ಅರ್ಪಿಸಿದ್ದಾರೆ. ಅಟೊಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ ಫೀಚರ್‌ ಹೊಂದಿರುವ ಈ ಕಾರಿನ ಸ್ಟೈಲು ಬೇರೇನೇ. ‘ಫನ್‌ ಟು ಡ್ರೈವ್‌’ ಅನ್ನೋ ಟ್ಯಾಗ್‌ಲೈನ್‌ ಅನ್ನು ನೀವು ಗಮನಿಸಬಹುದು. ಈ ಹೊಸ ಸೆಡಾನ್‌ ಮೂರು ಸಿಲಿಂಡರ್‌ ಹೊಂದಿದ್ದು, 1.0 ಟಿಎಸ್‌ಐ ಪೆಟ್ರೋಲ್‌ ಎಂಜಿನ್‌ ಹೊಂದಿದೆ. ಸಿಟಿ ಲೈಫ್‌ಸ್ಟೈಲ್‌ಗೆ ತಕ್ಕಂತೆ ಈ ಕಾರ್‌ ಅನ್ನು ವಿನ್ಯಾಸ ಮಾಡಲಾಗಿದೆ ಎಂದು ಕಂಪೆನಿಯೇ ತಿಳಿಸಿರುವುದರಿಂದ ಸಿಟಿಯವರು ಕಣ್ಣು ಈ ಕಾರಿನ ಮೇಲೆ ಇರಲಿ. ಆರು ಸ್ಪೀಡ್‌ನ ಗೇರ್‌ ಇದೆ. ಇದರ ಆರಂಭಿಕ ಬೆಲೆ ರು. 9.49 ಲಕ್ಷ.

ಹಬ್ಬದ ಪ್ರಯುಕ್ತ Unlock with Mercedes-Benz ಅಭಿಯಾನ ಆರಂಭ!

ನಿಸಾನ್‌ನ ಝಡ್‌ ಪ್ರೊಟೊ
ಥಟ್‌ ಅಂತ ಗಮನ ಸೆಳೆಯುವ ವಿನ್ಯಾಸ ಹೊಂದಿರುವ ಸೂಪರ್‌ ಸ್ಟೈಲಿಷ್‌ ಕಾರನ್ನು ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ತರುತ್ತೇವೆ ಭರವಸೆ ಕೊಡುತ್ತಿದೆ ನಿಸಾನ್‌ ಕಂಪನಿ. ಸದ್ಯ ಫಸ್ಟ್‌ಲುಕ್‌ ಬಿಡುಗಡೆಯಾಗಿರುವ ಈ ಕಾರಿನ ಹೆಸರು ನಿಸಾನ್‌ ಝಡ್‌ ಪ್ರೊಟೊ. ಜಪಾನ್‌ನ ಯೊಕೊಹಾಮಾದಲ್ಲಿ ನಡೆದ ವಚ್ರ್ಯುವಲ್‌ ಈವೆಂಟ್‌ ಮೂಲಕ ಆಕರ್ಷಕ ಡಿಸೈನ್‌ನ ಈ ಕಾರನ್ನು ಬಿಡುಗಡೆ ಮಾಡಲಾಯಿತು. ವಿ6 ಟ್ವಿನ್‌ ಟರ್ಬೊ ಇಂಜಿನ್‌ ಹೊಂದಿರುವ ಕಾರ್‌ 6 ಸ್ಪೀಡ್‌ ಗೇರ್‌ ಹೊಂದಿದೆ. 50 ವರ್ಷಗಳ ಇತಿಹಾಸ ಹೊಂದಿರುವ ನಿಸಾನ್‌ನ ‘ಝಡ್‌’ ಕಾರುಗಳ ಸರಣಿಯಲ್ಲಿ ಇದು ಹೊಸ ಮಾದರಿ. ನಸು ಹಳದಿ ಬಣ್ಣದ ಈ ಕಾರು 2022ರಲ್ಲಿ ಡೀಲರ್‌ಗಳ ಕೈ ಸೇರಲಿದೆ.

ಕಿಯಾ ಸೋನೆಟ್‌ ಆರಂಭಿಕ ಬೆಲೆ ರು.6.71 ಲಕ್ಷ
ಭಾರತಕ್ಕೆ ಕಾಲಿಟ್ಟಕೆಲವೇ ವರ್ಷಗಳಲ್ಲಿ ಬೇಜಾನ್‌ ಹವಾ ಮಾಡಿರುವ ಕಿಯಾ ಕಂಪನಿ ತನ್ನ ಹೊಸ ಸೋನೆಟ್‌ ಕಾರಿನ ಬೆಲೆಯನ್ನು ದೇಶಕ್ಕೆ ತಿಳಿಸಿದೆ. ಕಿಯಾ ಸೋನೆಟ್‌ ಕಾರನ್ನು ಜನ ಮೆಚ್ಚಿಕೊಂಡಿರುವುದಕ್ಕೆ ಅದರ ಬುಕಿಂಗ್‌ ಸಂಖ್ಯೆಯೇ ಸಾಕ್ಷಿ. ಬುಕಿಂಗ್‌ ಮಾಡಿರೋರು, ಆಸಕ್ತಿಯಿಂದ ನೋಡಿರೋರು ಎಲ್ಲವೂ ಬೆಲೆ ಯಾವಾಗ ಹೇಳ್ತೀರಿ ಅಂತ ಕೇಳುತ್ತಿದ್ದರು. ಇದೀಗ ಕಿಯಾ ಸೋನೆಟ್‌ ಬೆಲೆ ಘೋಷಣೆಯಾಗಿದೆ. 1.2ಲೀ ಪೆಟ್ರೋಲ್‌ ಇಂಜಿನ್‌ ಹೊಂದಿರುವ ಕಿಯಾ ಸೋನೆಟ್‌ ಆರಂಭಿಕ ಬೆಲೆ ರು.6.71 ಲಕ್ಷ. 1.0 ಟಿ ಜಿಡಿಐ ಪೆಟ್ರೋಲ್‌ ಇಂಜಿನ್‌ ಹೊಂದಿರುವ ಕಾರಿನ ಆರಂಭಿಕ ಬೆಲೆ ರು.9.49 ಲಕ್ಷ. 1.5 ಲೀ ಸಿಆರ್‌ಡಿಐ ಡಬ್ಲ್ಯೂಜಿಟಿ ಡೀಸೆಲ್‌ ಇಂಜಿನ್‌ ಕಾರಿನ ಆರಂಭಿಕ ಬೆಲೆ ರು.8.05 ಲಕ್ಷ.

click me!