ಬಹುನಿರೀಕ್ಷಿತ ಕಿಯಾ ಸೆಲ್ಟೋಸ್ ಮೊದಲ ಕಾರು ಅನಾವರಣಗೊಂಡಿದೆ. ಹ್ಯುಂಡೈ ಕ್ರೆಟಾ, ನಿಸಾನ್ ಕಿಕ್ಸ್ ಸೇರಿದಂತೆ ಹಲವು SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ಬೆಂಗಳೂರಿನಿಂದ ಸುಮಾರು 150 ಕಿಮೀ ದೂರದಲ್ಲಿರುವ ಅನಂತಪುರದಲ್ಲಿ 536 ಎಕರೆಯಲ್ಲಿರುವ ಕಿಯಾ ಉತ್ಪಾದನಾ ಘಟಕದಲ್ಲಿ ಕಾರು ಅನಾವರಣ ಮಾಡಲಾಗಿದೆ. ದಿನಕ್ಕೆ 250 ಕಾರು, ವರ್ಷಕ್ಕೆ 3 ಲಕ್ಷ ಕಾರು ತಯಾರಿಸುವ ಸಾಮರ್ಥ್ಯ ಹೊಂದಿರುವ ಉತ್ಪಾದನಾ ಘಟಕದಲ್ಲಿ ಕಿಯಾ ಸೆಲ್ಟೊಸ್ ಕಾರು ಇತರ ಕಾರುಗಳಿಗೆ ನಡುಕ ಹುಟ್ಟಿಸುತ್ತಿದೆ. ಈ ಕಾರಿನ ಬೆಲೆ, ವಿಶೇಷತೆ ಮಾಹಿತಿ ಇಲ್ಲಿದೆ.
ಅನಂತಪುರ(ಆ.08): ದಕ್ಷಿಣ ಕೊರಿಯಾದ 2ನೇ ಅತೀ ದೊಡ್ಡ ಆಟೋಮೊಬೈಲ್ ಕಂಪನಿ ಕಿಯಾ ಮೋಟಾರ್ಸ್ ಭಾರತದಲ್ಲಿ ತನ್ನ ಮೊದಲ ಸೆಲ್ಟೊಸ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆಂಧ್ರ ಪ್ರದೇಶ ಸರ್ಕಾರದ ಹಣಕಾಸು ಸಚಿವ ಬುಗ್ಗನಾ ರಾಜೇಂದ್ರನಾಥ್ ರೆಡ್ಡಿ, ಕಿಯಾ ಮೋಟಾರ್ಸ್ ವ್ಯವಸ್ಥಾಪ ನಿರ್ದೇಶಕ ಹಾಗೂ ಸಿಇಒ ಕೂಕ್ಯುನ್ ಶಿಮ್ ಹಾಗೂ ಕಿಯಾ ಮೋಟಾರ್ಸ್‌ನ ಭಾರತದ ರಾಯಭಾರಿ ಶಿನ್ ಬೊಂಗ್ ಕಿಲ್ ಭಾರತದಲ್ಲಿ ಮೊದಲ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದರು.
undefined
ಇದನ್ನೂ ಓದಿ: 25 ಸಾವಿರಕ್ಕೆ ಬುಕ್ ಮಾಡಿ ಕಿಯಾ ಸೆಲ್ಟೊಸ್ SUV ಕಾರು
ಆಂಧ್ರಪ್ರದೇಶದ ಅನಂತಪುರಂನ ಪೆನಕೊಂಡದಲ್ಲಿರುವ ನೂತನ ಕಿಯಾ ಉತ್ಪಾದನಾ ಘಟಕದಲ್ಲಿ ನಿರ್ಮಾಣವಾಗಿರುವ ಕಾರುಗಳ ಪೈಕಿ ಮೊದಲ ಕಾರು ಮಾರುಕಟ್ಟೆಗೆ ಪರಚಯಿಸಲಾಗಿದೆ. ಈ ಕಾರು ಹ್ಯುಂಡೈ ಕ್ರೆಟಾ, ನಿಸಾನ್ ಕಿಕ್ಸ್ ಸೇರಿದಂತೆ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ಕಿಯಾ ಸೆಲ್ಟೊಸ್ SUV ಕಾರು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅತ್ಯುತ್ತಮ ಎಂಜಿನ್ ಹೊಂದಿದೆ. ಭಾರತದಲ್ಲಿ ಜನಪ್ರಿಯವಾಗಿರೋ ಹ್ಯುಂಡೈ ಕಂಪನಿಯ ಸಹೋದರ ಸಂಸ್ಥೆ ಕಿಯಾ ಮೋಟಾರ್ಸ್ ಆಗಸ್ಟ್ 22 ರಂದು ಸೆಲ್ಟೊಸ್ ಕಾರನ್ನು ದೇಶಾದ್ಯಂತ ಬಿಡುಗಡೆ ಮಾಡಲಿದೆ.
ಇದನ್ನೂ ಓದಿ: ಕಿಯಾ ಸೆಲ್ಟೊಸ್ SUV ಕಾರಿನ ಬೆಲೆ, ವಿಶೇಷತೆ !
ಭಾರತದ ಬೇರೆ ಬೇರೆ ವಾತಾವರಣ, ವಿವಿದ ರಸ್ತೆಗಳಲ್ಲಿ ಬರೊಬ್ಬರಿ 20 ಲಕ್ಷ ಕಿ.ಮೀ ದೂರ ಈ ಕಾರನ್ನು ಪರೀಕ್ಷೆ ನಡೆಸಲಾಗಿದೆ. ಆಕರ್ಷಕ ವಿನ್ಯಾಸ, ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಕಿಯಾ ಸೆಲ್ಟೊಸ್ ಕಾರು ಜುಲೈ 16 ರಂದ ಬುಕಿಂಗ್ ಆರಂಭಿಸಿತು. ಮೊದಲ ದಿನವೇ 6,000 ಕಾರುಗಳು ಬುಕ್ ಆಗಿದ್ದವು. ಇದುವರೆಗೆ ಕಿಯಾ ಸೆಲ್ಟೊಸ್ 23,000 ಕಾರುಗಳು ಬುಕ್ ಆಗಿವೆ. ಕಾರಿನ ಅಂದಾಜು ಬೆಲೆ 10 ರಿಂದ 16 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಇದನ್ನೂ ಓದಿ:ಸರ್ಕಾರಕ್ಕೆ ಎಲೆಕ್ಟ್ರಿಕ್ ಕಾರು ಹಸ್ತಾಂತರಿಸಿದ ಕಿಯಾ ಮೋಟಾರ್ಸ್!
ಕಿಯಾ ಸೆಲ್ಟೊಸ್ ಕಾರು ಭಾರತದಲ್ಲಿ ಅನಾವರಣಗೊಳ್ಳುತ್ತಿರುವುದು ನಮಗೆ ಅತೀವ ಸಂತಸ ತಂದಿದೆ. ಭಾರತದ ವಾತವಾರಣ, ಭಾರತೀಯರ ಬೇಡಿಕೆ, ಇಲ್ಲಿನ ರಸ್ತೆಗಳಿಗೆ ಅನುಗುಣವಾಗಿ ಕಿಯಾ ಸೆಲ್ಟೊಸ್ ನಿರ್ಮಾಣ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಅತಿ ಹೆಚ್ಚಿನ ಜನರಿಂದ ಸೆಲ್ಟೋಸ್ ಕಾರಿಗೆ ಬೇಡಿಕೆ ಬಂದಿರುವುದು ಖುಷಿ ವಿಚಾರ ಎಂದು ಸೆಲ್ಟೋಸ್ ಕಾರನ್ನು ಅನಾವರಣಗೊಳಿಸಿದ ದಕ್ಷಿಣ ಕೊರಿಯಾದ ಭಾರತೀಯ ಕಿಯಾ ರಾಯಭಾರಿ ಶಿನ್ ಬೊಂಗ್ ಕಿಲ್ ಹೇಳಿದರು.
ಇದನ್ನೂ ಓದಿ: ಬಿಡುಗಡೆಯಾಗಲಿದೆ ಇನೋವಾ ಪ್ರತಿಸ್ಪರ್ಧಿ ಕಾರು ಕಿಯಾ ಕಾರ್ನಿವಲ್!
ಭಾರಿ ಮಳೆ ಹಾಗೂ ಪ್ರವಾಹದಿಂದ ಗೋದಾವರಿ ನದಿ ಪಾತ್ರ ಮುಳುಗಡೆಯಾಗಿದೆ. ಹೀಗಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೊಹನ್ ರೆಡ್ಡಿ ಪರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಂಧ್ರಪ್ರದೇಶದ ಹಣಕಾಸು ಸಚಿವ ಬುಗ್ಗನ ರಾಜೇಂದ್ರನಾಥ ರೆಡ್ಡಿ, ಮುಖ್ಯಮಂತ್ರಿಯವರ ಸಂದೇಶ ತಿಳಿಸುತ್ತಾ, ಕಿಯಾ ಮೋಟಾರ್ಸ್ 2007ರಲ್ಲಿ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿಯವರ ಜತೆ ಮಾತುಕತೆ ನಡೆಸಿದ ಬಳಿಕ ಅನಂತಪುರದಲ್ಲಿ ತಯಾರಿಕಾ ಘಟಕ ಆರಂಭಿಸುವ ಕಾರ್ಯಕ್ಕೆ ಬುನಾದಿ ಹಾಕಿತು, ಇದು ವೈಎಸ್ ಆರ್ ರೆಡ್ಡಿ ಕನಸಿನ ಫಲ ಎಂದರು. ಕಿಯಾ ಮೋಟಾರ್ಸ್‌ನಿಂದ ಉದ್ಯೋಗವಕಾಶ ಸೃಷ್ಟಿಯಾಗಿದೆ. ಅನಂತಪುರ ಜಿಲ್ಲೆ ಅಭಿವೃದ್ದಿಗೊಂಡಿದೆ ಎಂದರು.
ಕಿಯಾ ಮೋಟಾರ್ಸ್ ಭಾರತ ವಿಭಾಗದ CEO ಕೂಕ್ಯುನ್ ಶಿಮ್, ಭಾರತ ಆಟೋಮೊಬೈಲ್ ಮಾರಾಟದಲ್ಲಿ ಜಗತ್ತಿನ ನಾಲ್ಕನೇ ಅತಿದೊಡ್ಡ ರಾಷ್ಟ್ರ ಎನಿಸಿಕೊಂಡಿದೆ. ಭಾರತದ ಮಂದಿಗೆ ಅಂತಾರಾಷ್ಟ್ರೀಯ ಮಟ್ಟದ ಕಾರುಗಳನ್ನು ನೀಡುತ್ತೇವೆ ಎಂದು ಹೇಳಿದರು.
3 ವೇರಿಯೆಂಟ್‌ನಲ್ಲಿ ಸೆಲ್ಟೊಸ್ ಕಾರು ಲಭ್ಯ:
ನೂತನ ಕಿಯಾ ಸೆಲ್ಟೊಸ್ ಕಾರಿನಲ್ಲಿ 3 ವೇರಿಯೆಂಟ್ ಲಭ್ಯವಿದೆ. 1.5 ಲೀ ಪೆಟ್ರೋಲ್, 1.5 ಲೀ ಡೀಸೆಲ್ ಮತ್ತು 1.4 ಲೀ ಟರ್ಬೋ ಪೆಟ್ರೋಲ್ ಇಂಜಿನ್ ಆಯ್ಕೆ ಲಭ್ಯವಿದೆ.
UVO ಟೆಕ್ನಾಲಜಿ:
UVO ಟೆಕ್ನಾಲಜಿ ಕಿಯಾ ಸೆಲ್ಟೋಸ್ ಕಾರಿನ ವಿಶೇಷತೆ. ಕಿಯಾ ಯುವೋ ಆ್ಯಪ್ ಡೌನ್ ಲೋಡ್ ಮಾಡಿಕೊಂಡರೆ ಮೊಬೈಲ್ ಮೂಲಕವೇ ಇಂಜಿನ್ ಆಫ್, ಆನ್ ಮಾಡಬಹುದು. ಕಾರು ಎಲ್ಲಿದೆ ಎಂಬ ಲೈವ್ ಲೊಕೇಷನ್ ಕೂಡ ಸಿಗುತ್ತದೆ. ಕಾರು ಎಲ್ಲಿ ಪಾರ್ಕ್ ಮಾಡಿದ್ದೀರಿ ಎಂಬುದನ್ನೂ ಆ್ಯಪ್ ಮೂಲಕವೇ ತಿಳಿದುಕೊಳ್ಳಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಆ್ಯಪ್ ಮೂಲಕವೇ ಕಿಯಾ ಸೆಲ್ಟೊಸ್ ಕಾರನ್ನು ಕಂಟ್ರೋಲ್ ಮಾಡಬಹುದು. ಇಂಥಾ ಅನೇಕ ಅತ್ಯಾಧುನಿಕ ಫೀಚರ್ ಇದರಲ್ಲಿ ಲಭ್ಯ ಎಂದು ಕಿಯಾ ಉಪಾಧ್ಯಕ್ಷ ಮನೋಹರ ಭಟ್ ಹೇಳಿದರು. ಅನಂತಪುರದಲ್ಲಿ ನಡೆದ ಮೊದಲ ಕಾರು ಅನಾವರಣ ಕಾರ್ಯಕ್ರಮದಲ್ಲಿಸಚಿವ ಮಾಲಗುಂಡ್ಲ ಶಂಕರ ನಾರಾಯಣ, ನಟಿ, ರಾಜಕಾರಣಿ ರೋಜಾ ಹಾಜರಿದ್ದರು.
ಅನಂತಪುರ ಘಟಕ:
ಆಂಧ್ರಪ್ರದೇಶದ ಅನಂತಪುರದ ಪೆನುಕೊಂಡ ಬಳಿ ಸುಮಾರು 536 ಎಕರೆ ಪ್ರದೇಶದಲ್ಲಿ ಕಿಯಾ ಮೋಟಾರ್ಸ್ ಇಂಡಿಯಾ ಉತ್ಪಾದನ ಘಟಕ ತಲೆ ಎತ್ತಿದೆ. ಸೆಲ್ಟೊಸ್ ಕಾರು ಸಂಪೂರ್ಣವಾಗಿ ಇಲ್ಲೇ ನಿರ್ಮಾಣವಾಗುತ್ತಿದೆ. ಭಾರತದ ಅತ್ಯಾಧುನಿಕ ಉತ್ಪಾದನಾ ಘಟಕ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಅನಂತಪುರದಲ್ಲಿ ಸದ್ಯ ದಿನಕ್ಕೆ 250 ಕಾರುಗಳು ನಿರ್ಮಾಣವಾಗುತ್ತಿದೆ. ಪ್ರತಿ ದಿನ ಸರಿಸುಮಾರು 600 ಕಾರು ನಿರ್ಮಾಣ ಮಾಡಬಲ್ಲ ಸಾಮರ್ಥ್ಯ ಈ ಘಟಕ್ಕಿದೆ. ವರ್ಷಕ್ಕೆ 3 ಲಕ್ಷ ಕಾರುಗಳು ಅನಂತಪುರ ಕಿಯಾ ಮೋಟಾರ್ಸ್ ಘಟಕದಲ್ಲಿ ತಯಾರಾಗಲಿದೆ. 2017ರಲ್ಲಿ ಕಿಯಾ ಮೋಟಾರ್ಸ್ ಉತ್ಪಾದನಾ ಘಟಕದ ಕಾರ್ಯ ಆರಂಭಗೊಂಡಿತು. ಎರಡೇ ವರ್ಷದಲ್ಲಿ ಕಿಯಾ ಮೋಟಾರ್ಸ್ ತಲೆ ಎತ್ತಿದೆ. 2016ರಲ್ಲಿ ತುಮಕೂರಿನಲ್ಲಿ ಕಿಯಾ ಮೋಟಾರ್ಸ್ ಉತ್ಪಾದನಾ ಘಟಕ ಆರಂಭಿಸಲು ಆಸಕ್ತಿ ತೋರಿತ್ತು. ಆದರೆ ಅಂದಿನ ಚುನಾಯಿತ ರಾಜ್ಯ ಸರ್ಕಾರ ಆಸಕ್ತಿ ತೋರಿರಲಿಲ್ಲ. ಹೀಗಾಗಿ ಕಿಯಾ ಆಂಧ್ರಪ್ರದೇಶದತ್ತ ಪ್ರಯಾಣ ಬೆಳೆಸಿತು.